‘ಇದಕ್ಕಿಂತ ವಿಶೇಷ ಗೆಲುವು ಮತ್ತೊಂದಿಲ್ಲ’: ಆಸ್ಪತ್ರೆಯಲ್ಲಿದ್ದಾಗಲೂ ಆ ಹೈವೋಲ್ಟೇಜ್ ಮ್ಯಾಚ್ ವೀಕ್ಷಿಸಿದ್ದ ವಿರಾಟ್ ಕೊಹ್ಲಿ..! ನಿಮಗೆ ಆ ಪಂದ್ಯ ನೆನಪಿದೆಯಾ?

Published : Nov 28, 2026, 05:27 PM IST
virat kohli

ಸಾರಾಂಶ

2021ರ ಗಾಬಾ ಟೆಸ್ಟ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸಾಧಿಸಿದ ಐತಿಹಾಸಿಕ ಗೆಲುವನ್ನು ವಿರಾಟ್ ಕೊಹ್ಲಿ, ರವಿಶಾಸ್ತ್ರಿ ಮತ್ತು ರಿಷಭ್ ಪಂತ್ ಮೆಲುಕು ಹಾಕಿದ್ದಾರೆ. ಗಾಯದ ನಡುವೆಯೂ ಯುವ ಆಟಗಾರರ ದಿಟ್ಟ ಪ್ರದರ್ಶನವು ಭಾರತಕ್ಕೆ ಮರೆಯಲಾಗದ ಸರಣಿ ಜಯ ತಂದುಕೊಟ್ಟಿತು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರು(ನ.28): 2021ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ ಸಾಧಿಸಿದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಇಂದಿಗೂ ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಒಂದಾಗಿ ಉಳಿದಿದೆ. ಗಾಯದ ಸಮಸ್ಯೆಯಿಂದ ಹಲವು ಪ್ರಮುಖ ಆಟಗಾರರನ್ನು ಕಳೆದುಕೊಂಡಿದ್ದ ಭಾರತ, ಗಾಬಾದಲ್ಲಿ ನಡೆದ ಕೊನೆಯ ಟೆಸ್ಟ್‌ಗೆ ಹಿನ್ನಡೆಯಲ್ಲೇ ಪ್ರವೇಶಿಸಿತ್ತು. ಆದರೆ ತಂಡ ಹೋರಾಟವನ್ನು ಕೈಬಿಡಲಿಲ್ಲ. ನಿರ್ಭೀತ ಆಟದ ಮೂಲಕ ಆಸ್ಟ್ರೇಲಿಯಾದ ದೀರ್ಘಕಾಲದ ಗಾಬಾ ದಾಖಲೆಯನ್ನು ಮುರಿದು, ಸ್ಮರಣೀಯ ಸರಣಿ ಗೆಲುವು ದಾಖಲಿಸಿತು.

ಇದೀಗ 2027ರ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಹಾಗೂ ಹಾಲಿ ಆಟಗಾರರು ಆ ಐತಿಹಾಸಿಕ ಗೆಲುವಿನ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಜಿಯೋಸ್ಟಾರ್ ಜೊತೆಗಿನ ಸಂಭಾಷಣೆಯಲ್ಲಿ ವಿರಾಟ್ ಕೊಹ್ಲಿ, ರವಿಶಾಸ್ತ್ರಿ, ರಿಷಭ್ ಪಂತ್ ಮತ್ತು ಹನುಮ ವಿಹಾರಿ ಗಾಬಾ ಟೆಸ್ಟ್‌ನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಂಡದ ಆತ್ಮವಿಶ್ವಾಸ, ಯುವ ಆಟಗಾರರ ಪ್ರದರ್ಶನ ಮತ್ತು ಕಠಿಣ ಪರಿಸ್ಥಿತಿಯಲ್ಲೂ ಭಾರತೀಯ ಆಟಗಾರರು ತೋರಿದ ಧೈರ್ಯದ ಬಗ್ಗೆ ಮಾತನಾಡಿದ್ದಾರೆ.

ಆಸ್ಪತ್ರೆಯಿಂದ ಗಾಬಾ ಟೆಸ್ಟ್ ವೀಕ್ಷಿಸಿದ್ದ ವಿರಾಟ್ ಕೊಹ್ಲಿ

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಗಾಬಾ ಟೆಸ್ಟ್‌ನ ಅಂತಿಮ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದ ಭಾಗವಾಗಿರಲಿಲ್ಲ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಅವರು ಭಾರತಕ್ಕೆ ಮರಳಿದ್ದರು. ಆದರೂ ಆಸ್ಪತ್ರೆಯಲ್ಲಿದ್ದಾಗಲೇ ಮೊಬೈಲ್‌ನಲ್ಲಿ ಪಂದ್ಯದ ಕ್ಷಣಕ್ಷಣದ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ವಿಶೇಷವಾಗಿ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ನಡುವಿನ ಮಹತ್ವದ ಜೊತೆಯಾಟವನ್ನು ನೆನಪಿಸಿಕೊಂಡಿದ್ದಾರೆ.

“ನನ್ನ ಮಗುವಿನ ಜನನಕ್ಕಾಗಿ ನಾನು ಆಸ್ಪತ್ರೆಯಲ್ಲಿದ್ದೆ. ಮೊಬೈಲ್‌ನಲ್ಲಿ ಪಂದ್ಯವನ್ನು ನೋಡುತ್ತಿದ್ದೆ. ಶಾರ್ದೂಲ್ ಮತ್ತು ವಾಷಿಂಗ್ಟನ್ ನಡುವಿನ ಜೊತೆಯಾಟವನ್ನು ನಾವು ವಿರಾಮಕ್ಕೆ ಹೋಗಬೇಕಾದ ಸುಮಾರು 15 ನಿಮಿಷಗಳ ಮುಂಚಿನವರೆಗೂ ನೋಡಿದೆ. ಆ ಜೊತೆಯಾಟ ಎಷ್ಟು ವಿಶೇಷವಾಗಿತ್ತು ಎಂಬುದಕ್ಕೆ ಇದು ಸಾಕ್ಷಿ.

“ಆ ಸರಣಿಯುದ್ದಕ್ಕೂ ಮತ್ತು ಗಾಬಾ ಟೆಸ್ಟ್‌ನಲ್ಲಿ ಇಡೀ ತಂಡ ತೋರಿಸಿದ ಮನೋಭಾವ ಹಾಗೂ ನಂಬಿಕೆ ಅದ್ಭುತವಾಗಿತ್ತು. ಸಿಕ್ಕ ಅವಕಾಶದಲ್ಲಿ ಹಲವು ಯುವ ಆಟಗಾರರು ಮುಂದೆ ಬಂದು ಪ್ರದರ್ಶನ ನೀಡಿದರು. ಇದರಿಂದ ಈ ಗೆಲುವು ಅತ್ಯಂತ ವಿಶೇಷವಾಯಿತು. ಇದಕ್ಕಿಂತ ವಿಶೇಷವಾದ ಗೆಲುವು ಮತ್ತೊಂದಿದೆ ಎಂದು ನನಗೆ ಅನಿಸುವುದಿಲ್ಲ,” ಎಂದು ಕೊಹ್ಲಿ ಹೇಳಿದರು.

ಕ್ರಿಕೆಟ್‌ನಲ್ಲಿ ಇದಕ್ಕೆ ಸಮಾನವಾದದ್ದು ನೋಡಿಲ್ಲ ಎಂದ ರವಿಶಾಸ್ತ್ರಿ

ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಪಂದ್ಯದ ಕೊನೆಯ ಹಂತದಲ್ಲಿ ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ತೋರಿದ ನಿರ್ಭೀತ ಮನೋಭಾವವನ್ನು ಪ್ರಶಂಸಿಸಿದ್ದಾರೆ. ಬಲಿಷ್ಠ ಆಸ್ಟ್ರೇಲಿಯಾ ಬೌಲಿಂಗ್ ದಾಳಿಯ ಎದುರು ಗುರಿ ಬೆನ್ನಟ್ಟುವಾಗ ಇಬ್ಬರೂ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿದ್ದನ್ನು ಅವರು ಸ್ಮರಿಸಿದರು.

“ಚಹಾ ವಿರಾಮದ ವೇಳೆಗೆ ರಿಷಭ್ ಪಂತ್ ರನ್ ಚೇಸ್‌ಗೆ ಮುಂದಾಗಲಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿತ್ತು. ಕೊನೆಯ ಗಂಟೆಯಲ್ಲಿ ವಾಷಿಂಗ್ಟನ್ ಮತ್ತು ರಿಷಭ್ ಆಡಿದ ರೀತಿ, ಪರಸ್ಪರ ಬೆಂಬಲಿಸಿದ ರೀತಿ ನಂಬಲಾಗದಂತಿತ್ತು. “ಅವರ ಆಟದಲ್ಲಿ ಯಾವುದೇ ಭಯ ಇರಲಿಲ್ಲ. ಪಂದ್ಯದ ಮಹತ್ವ ಅಥವಾ ಆಸ್ಟ್ರೇಲಿಯಾ ಬೌಲಿಂಗ್ ದಾಳಿಯಿಂದ ಅವರು ಒತ್ತಡಕ್ಕೆ ಒಳಗಾಗಲಿಲ್ಲ. ಭಾರತೀಯ ಕ್ರಿಕೆಟ್‌ನ ಪ್ರದರ್ಶನಗಳ ಬಗ್ಗೆ ಮಾತನಾಡುತ್ತೀರಿ. ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತೇನೆ. ಕ್ರಿಕೆಟ್ ಇತಿಹಾಸದಲ್ಲಿ ಇದಕ್ಕೆ ಸಮಾನವಾದದ್ದನ್ನು ನೋಡಿದ್ದೇನೆ ಎಂದು ನನಗೆ ಅನಿಸುವುದಿಲ್ಲ,” ಎಂದು ಶಾಸ್ತ್ರಿ ಹೇಳಿದರು.

ನವದೀಪ್ ಸೈನಿಗೆ ಪಂತ್ ನೀಡಿದ್ದ ಸೂಚನೆ ಏನು?

ಗಾಬಾ ಟೆಸ್ಟ್‌ನಲ್ಲಿ ರಿಷಭ್ ಪಂತ್ ಅಜೇಯ 89 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯದ ಅಂತಿಮ ಕ್ಷಣಗಳನ್ನು ನೆನಪಿಸಿಕೊಂಡ ಪಂತ್, ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಬಳಲುತ್ತಿದ್ದ ನವದೀಪ್ ಸೈನಿಗೆ ರನ್‌ಗಳಿಗಾಗಿ ಓಡುವ ಬಗ್ಗೆ ಏನು ಹೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

“ನನ್ನ ಮನಸ್ಸಿನಲ್ಲಿ ಒಂದು ಯೋಜನೆ ಇತ್ತು. ಅದಕ್ಕಾಗಿ ನಾನ್-ಸ್ಟ್ರೈಕರ್ ತುದಿಯಿಂದ ಸೈನಿಯನ್ನು ಕರೆದು ಮಾತನಾಡಿದ್ದೆ. ಅವರ ಹ್ಯಾಮ್‌ಸ್ಟ್ರಿಂಗ್ ಗಾಯಗೊಂಡಿತ್ತು. ‘ನೀನು ಎಲ್ಲೇ ಇದ್ದರೂ ಸಾಧ್ಯವಾದಷ್ಟು ವೇಗವಾಗಿ ಓಡು’ ಎಂದು ಹೇಳಿದ್ದೆ. “ಅವರು ರನ್‌ಔಟ್ ಆಗಬಹುದು ಎಂದು ನಾನು ಭಾವಿಸಿದ್ದೆ. ಆದರೆ ಅದರಿಂದ ನಮಗೆ ಸಮಸ್ಯೆ ಇರಲಿಲ್ಲ. ಏಕೆಂದರೆ ಆಗ ನಾವು ಎಂಟು ವಿಕೆಟ್ ಕಳೆದುಕೊಂಡಿರುತ್ತಿದ್ದೆವು. ನಾನು ನನ್ನ ಕ್ರೀಸ್ ತಲುಪುತ್ತೇನೆ ಎಂಬ ನಂಬಿಕೆ ನನಗಿತ್ತು,” ಎಂದು ಪಂತ್ ಹೇಳಿದರು.

ಭಾರತದ ಹೋರಾಟದ ಮನೋಭಾವ ನೆನಪಿಸಿಕೊಂಡ ಹನುಮ ವಿಹಾರಿ

2021ರಲ್ಲಿ ಬ್ರಿಸ್ಬೇನ್‌ಗೆ ಬಂದಾಗ ತಂಡದ ಪರಿಸ್ಥಿತಿ ಎಷ್ಟು ಕಠಿಣವಾಗಿತ್ತು ಎಂಬುದನ್ನು ಹನುಮ ವಿಹಾರಿ ನೆನಪಿಸಿಕೊಂಡಿದ್ದಾರೆ. ಹಲವು ಪ್ರಮುಖ ಆಟಗಾರರು ಲಭ್ಯವಿರಲಿಲ್ಲ. ಆದರೂ ತಂಡ ಹೋರಾಟ ಮುಂದುವರಿಸಿತ್ತು. ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ನಡುವಿನ ಜೊತೆಯಾಟ ಭಾರತವನ್ನು ಪಂದ್ಯದಲ್ಲಿ ಉಳಿಸಿಕೊಳ್ಳಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

“2021ರಲ್ಲಿ ಗಾಬಾ ಟೆಸ್ಟ್‌ಗಾಗಿ ನಾವು ಬ್ರಿಸ್ಬೇನ್‌ಗೆ ಹೋದಾಗಿನ ಕ್ಷಣ ನನಗೆ ನಿಖರವಾಗಿ ನೆನಪಿದೆ. ಅಶ್ವಿನ್ ಭಾಯ್ ಜೊತೆ ಮಾತನಾಡುತ್ತಾ, ನಾವು ಯಾವುದೋ ಯುದ್ಧಕ್ಕೆ ಬಂದಿದ್ದೇವೆ ಎಂಬ ಭಾವನೆ ಬರುತ್ತಿದೆ ಎಂದು ಹೇಳಿದ್ದೆ. “ನಾವು ಗಾಯಗಳಿಂದ ಬಳಲಿದ್ದೆವು, ದೈಹಿಕವಾಗಿ ಕುಗ್ಗಿದ್ದೆವು. ಆದರೆ ಹೋರಾಟವನ್ನು ಕೈಬಿಟ್ಟಿರಲಿಲ್ಲ. ಗಾಬಾಗೆ ಹೋದಾಗ ನಮ್ಮ ಪರಿಸ್ಥಿತಿ ಹೀಗಿತ್ತು. ನಮ್ಮ ಮೊದಲ ಆಯ್ಕೆಯ ಹಲವು ಪ್ರಮುಖ ಆಟಗಾರರು ಲಭ್ಯವಿರಲಿಲ್ಲ. ಅದು ನಮ್ಮ ಧೈರ್ಯ ಮತ್ತು ದೃಢತೆಯ ಪರೀಕ್ಷೆಯಾಗಿತ್ತು.

“ಆ ಪರಿಸ್ಥಿತಿಯಲ್ಲಿ ಗಾಬಾದಲ್ಲಿ ಆಡುವುದು ಸುಲಭವಲ್ಲ. ಆದರೆ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ನೀಡಿದ ಜೊತೆಯಾಟ, ವಿಶೇಷವಾಗಿ ಶಾರ್ದೂಲ್ ಬಂದು ಆಕ್ರಮಣಕಾರಿಯಾಗಿ ಆಡಿದ ರೀತಿ, ಪಂದ್ಯದಲ್ಲಿ ನಾವು ಉಳಿಯಲು ಬಹಳ ಸಹಾಯ ಮಾಡಿತು,” ಎಂದು ಹನುಮ ವಿಹಾರಿ ಹೇಳಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Kohli vs Rohit: ಐಪಿಎಲ್‌ನಲ್ಲಿ ಸ್ಯಾಲರಿಗಾಗಿ ಬಿಗ್ ಫೈಟ್, 19 ಆವೃತ್ತಿಗಳಲ್ಲಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?
ರೋಹಿತ್‌ಗೆ ಸಿಕ್ಕ ಬೆಂಬಲ ಪಾಂಡ್ಯಗೆ ಯಾಕೆ ಸಿಗಲಿಲ್ಲ? ಅರ್ಹತೆ ಇದ್ದರೂ ಮುಂಬೈ ಅಖಾಡದಲ್ಲಿ ಹಾರ್ದಿಕ್ ಏಕಾಂಗಿಯಾಗಿದ್ದೇಗೆ?