ಕೇವಲ 20 ದಿನಗಳಲ್ಲಿ 2 ಅಪರೂಪದ ದಾಖಲೆ ಮುರಿದ ವೈಭವ್ ಸೂರ್ಯವಂಶಿ! ಭಾರತದ ಭವಿಷ್ಯದ ಬ್ರಹಾಸ್ತ್ರವಾಗ್ತಾರಾ 15 ವರ್ಷದ ಆಟಗಾರ

Published : Jul 24, 2026, 04:41 PM IST
Vaibhav Sooryavanshi

ಸಾರಾಂಶ

15 ವರ್ಷ 99 ದಿನಗಳಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಸಚಿನ್ ದಾಖಲೆ ಮುರಿದಿದ್ದ ವೈಭವ್ ಸೂರ್ಯವಂಶಿ, ಇದೀಗ ಮತ್ತೊಂದು ವಿಶ್ವದಾಖಲೆ ಬರೆದಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಾಫ್ ಸೆಂಚುರಿ ಬಾರಿಸಿದ ಅತಿಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಹರಾರೆ: ಭಾರತದ ವಂಡರ್‌ಕಿಡ್ ವೈಭವ್ ಸೂರ್ಯವಂಶಿ, ಕಳೆದ ಜುಲೈ 3ರಂದು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 15 ವರ್ಷ 99 ದಿನಗಳು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತಿಕಿರಿಯ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಮೊದಲು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಭಾರತದ ಅತಿಕಿರಿಯ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 16 ವರ್ಷ 205 ದಿನಗಳಾಗಿದ್ದವು.

ಇನ್ನು ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ತಾವಾಡಿದ ಮೊದಲ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ಯಶಸ್ವಿಯಾಗಿರಲಿಲ್ಲ. ಇಂಗ್ಲೆಂಡ್ ಎದುರು ವೈಭವ್ ಕ್ರಮವಾಗಿ 14,13 ಹಾಗೂ 15 ಹೀಗೆ ಒಟ್ಟು 42 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಇಂಗ್ಲೆಂಡ್ ಎದುರಿನ ಐದನೇ ಪಂದ್ಯದಿಂದ ವೈಭವ್ ಅವರನ್ನು ಕೈಬಿಡಲಾಗಿತ್ತು.

ಕೇವಲ 20 ದಿನಗಳ ಅಂತರದಲ್ಲಿ ಮತ್ತೊಂದು ದಾಖಲೆ ಬರೆದ ವೈಭವ್ ಸೂರ್ಯವಂಶಿ:

ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಇನ್ನೂ 20 ದಿನ ತುಂಬುವುದರೊಳಗಾಗಿ ವೈಭವ್ ಸೂರ್ಯವಂಶಿ ಮತ್ತೊಂದು ಅಪರೂಪದ ವಿಶ್ವದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಎನ್ನುವ ಅಪರೂಪದಲ್ಲೇ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ಜಿಂಬಾಬ್ವೆ ಎದುರಿನ ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ತಮ್ಮ 15 ವರ್ಷ 118 ದಿನಗಳ ವಯಸ್ಸಿನಲ್ಲೇ ಸ್ಪೋಟಕ ಅರ್ಧಶತಕ ಚಚ್ಚಿದ್ದಾರೆ.

ಸ್ಮರಣೀಯ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ:

ಜಿಂಬಾಬ್ವೆ ಗೆಲ್ಲಲು ನೀಡಿದ್ದ 126 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಆರಂಭದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಜಿಂಬಾಬ್ವೆ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅಂತಿಮವಾಗಿ ವೈಭವ್ 19 ಎಸೆತಗಳನ್ನು ಎದುರಿಸಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಹಿತ 50 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವೈಭವ್ ಸೂರ್ಯವಂಶಿ ಸ್ಪೋಟಕ ಅರ್ಧಶತಕ ಹಾಗೂ ಮಯಾಂಕ್ ಯಾದವ್ ಮಾರಕ ದಾಳಿಯ ನೆರವಿನಿಂದ ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೊದಲ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಮರ್ಥ್ಯ ಅನಾವರಣ ಮಾಡಿದ ವೈಭವ್ ಸೂರ್ಯವಂಶಿ:

ಬಿಹಾರ ಮೂಲದ ಪ್ರತಿಭಾನ್ವಿತ ಅಗ್ರಕ್ರಮಾಂಕದ ಬ್ಯಾಟರ್ ವೈಭವ್ ಸೂರ್ಯವಂಶಿ, ಈಗಾಗಲೇ ಭಾರತ ಅಂಡರ್-19, ರಣಜಿ ಟ್ರೋಫಿ, ಐಪಿಎಲ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಇದೀಗ ಭಾರತ ಸೀನಿಯರ್ಸ್ ತಂಡದಲ್ಲೂ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಮುಂದಿನ ಟಾರ್ಗೆಟ್‌ ಏನು?

ಸದ್ಯ ವೈಭವ್ ಸೂರ್ಯವಂಶಿ ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಯಿಡುತ್ತಿದ್ದಾರೆ. ವೈಭವ್ ಸೂರ್ಯವಂಶಿ, ಏಷ್ಯನ್ ಗೇಮ್ಸ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ವೈಭವ್ ಸೂರ್ಯವಂಶಿ ಮುಂಬರುವ ಒಲಿಂಪಿಕ್ಸ್ ಹಾಗೂ 2028ರ ಟಿ20 ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ. ವೈಭವ್ ಸೂರ್ಯವಂಶಿ ಭಾರತದ ಭವಿಷ್ಯದ ಬ್ರಹಾಸ್ತ್ರವಾಗ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಿಂಬಾಬ್ವೆ ಎದುರಿನ ಸರಣಿ ಬೆನ್ನಲ್ಲೇ ಮತ್ತೊಂದು ಟಿ20 ಸರಣಿ ಘೋಷಣೆ! ಈ ಮೈದಾನದಲ್ಲಿ ನಡೆಯಲಿದೆ 3 ಬ್ಯಾಕ್ ಟು ಬ್ಯಾಕ್ ಮ್ಯಾಚ್
ಪುತ್ರನ ಯಶಸ್ಸಿಗಾಗಿ ಅಪ್ಪ ಮಥುರಾದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದರು.. ಇತ್ತ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತ ಮಯಾಂಕ್