
ಬೆಂಗಳೂರು: ಭಾರತ ಕ್ರಿಕೆಟ್ ತಂಡವು ಪ್ರತಿಭಾನ್ವಿತ ಆಟಗಾರರಿಂದ ತುಂಬಿ ತುಳುಕುತ್ತಿದೆ. ಒಂದು ಕಡೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ನಿವೃತ್ತಿಯ ಹೊಸ್ತಿಲಲ್ಲಿದ್ದರೇ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶುಭ್‌ಮನ್ ಗಿಲ್ ಅವರಂತಹ ಯುವ ಆಟಗಾರರು ಭವಿಷ್ಯದ ತಾರೆಗಳಾಗಿ ಹೊರಹೊಮ್ಮುತ್ತಿದ್ದಾರೆ. ಇದೀಗ ಶ್ರೀಲಂಕಾದ ಮಾಜಿ ದಿಗ್ಗಜ ಕ್ರಿಕೆಟಿಗ ಸನತ್ ಜಯಸೂರ್ಯ, ಭಾರತದ ಭವಿಷ್ಯದ ಸೂಪರ್ ಸ್ಟಾರ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಶ್ರೀಲಂಕಾ ಮಾಜಿ ನಾಯಕ ಸನತ್ ಜಯಸೂರ್ಯ ಅವರು ಭಾರತೀಯ ಕ್ರಿಕೆಟ್‌ನ ಹೊಸ ತಾರೆ 15ರ ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ್ದು, ‘ವೈಭವ್ ಭಿನ್ನ ರೀತಿಯ ಪ್ರತಿಭೆ. ಅವರು ಭಾರತದ ಭವಿಷ್ಯ’ ಎಂದು ಬಣ್ಣಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ನನ್ನ ಪ್ರಕಾರ ವೈಭವ್ ಭಾರತದ ಭವಿಷ್ಯ. ಅವರಿಗೆ ಇನ್ನೂ ಸಾಕಷ್ಟು ಸಮಯವಿದೆ. ಇನ್ನೂ ಉತ್ತಮವಾಗಿ ಆಟ ಆಡಲು ಅವಕಾಶ ನೀಡಿ. ಅದನ್ನು ಅವರು ಬಳಸಿಕೊಳ್ಳುತ್ತಾರೆ. ಅವರಿಗೆ ಅವಕಾಶಗಳು ಬರುತ್ತವೆ. ಆದರೆ ಯಾವ ಸ್ಥಾನದಲ್ಲಿ ಆಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬಂದಾಗ ಅವರು ಅದನ್ನು ಕಸಿದುಕೊಂಡು ಉತ್ತಮವಾಗಿ ಬಳಸಿಕೊಳ್ಳುತ್ತಾರೆ’ ಎಂದಿದ್ದಾರೆ.
15 ವರ್ಷದ ವೈಭವ್ ಸೂರ್ಯವಂಶಿ, ಕೆಲ ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಪುರುಷ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಗೂ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದರು. ಇಂಗ್ಲೆಂಡ್ ಎದುರು ಮೂರು ಪಂದ್ಯಗಳನ್ನಾಡಿ ಕೇವಲ 42 ರನ್ ಗಳಿಸಿದ್ದ ವೈಭವ್ ಸೂರ್ಯವಂಶಿ, ಇದಾದ ಬಳಿಕ ಜಿಂಬಾಬ್ವೆ ಎದುರಿನ ಟಿ20 ಸರಣಿಯ 3 ಪಂದ್ಯಗಳನ್ನಾಡಿ 50.33ರ ಬ್ಯಾಟಿಂಗ್ ಸರಾಸರಿಯಲ್ಲಿ 151 ರನ್ ಸಿಡಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು. ಹೀಗಿದ್ದೂ ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಕಮ್‌ಬ್ಯಾಕ್ ಮಾಡಿದ್ದರಿಂದ, ವೈಭವ್ ಸೂರ್ಯವಂಶಿ ಬೆಂಚ್ ಕಾಯಿಸಬೇಕಾಗಿ ಬಂದಿತು.
ವೈಭವ್ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದ್ದೂ ಒಳ್ಳೆಯ ಫಲಿತಾಂಶವೇ ಹೊರಬೀಳುವಂತೆ ಮಾಡಿತು. 2026ರ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ಆರಂಭಿಕ ಜೋಡಿಯಾದ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಆಫ್ಘಾನ್ ಎದುರು 3 ಪಂದ್ಯಗಳಿಂದ 346 ರನ್‌ಗಳ ಜತೆಯಾಟವಾಡಿತು. ಅಭಿಷೇಕ್ ಶರ್ಮಾ ದಾಖಲೆಯ ಶತಕ ಸಿಡಿಸಿದರೆ, ಸಂಜು ಸ್ಯಾಮ್ಸನ್ ಸತತ ಎರಡು ಅರ್ಧಶತಕ ಚಚ್ಚಿದರು.
ರೋಹಿತ್ ನಿವೃತ್ತಿಗೆ ಹಠಹಿಡಿದು ಎಕ್ಸಿಟ್ ಆದ ಅಜಿತ್ ಅಗರ್ಕರ್?
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಿಂದ ಅಜಿತ್ ಅಗರ್ಕರ್ ಕೆಳಗಿಳಿಯುವುದು ಬಹುತೇಕ ಖಚಿತವಾಗಿದ್ದು, ಶೀಘ್ರ ಹೊಸ ಮುಖ್ಯಸ್ಥನ ನೇಮಕವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ರೋಹಿತ್ ಶರ್ಮಾ ನಿವೃತ್ತಿಗೆ ಪಟ್ಟು ಹಿಡಿದಿದ್ದೇ ಅಜಿತ್ ನಿರ್ಗಮನಕ್ಕೆ ಪ್ರಮುಖ ಕಾರಣ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ರೋಹಿತ್ 2027ರ ವಿಶ್ವಕಪ್ ಆಡಲು ಸಿದ್ಧವಾಗುತ್ತಿದ್ದಾರೆ. ಬಿಸಿಸಿಐ ಕೂಡಾ ಅವರಿಗೆ ಅವಕಾಶ ಕೊಡುವ ಸಾಧ್ಯತೆಯಿದೆ. ಆದರೆ ರೋಹಿತ್ ವಿಚಾರದಲ್ಲಿ ಅಜಿತ್ ನಿಲುವು ಬೇರೆ ಇತ್ತು. ಇದಕ್ಕೆ ಒಪ್ಪದ ಬಿಸಿಸಿಐ, ರೋಹಿತ್ ಆಟದಲ್ಲಿ ಮುಂದುವರಿಯಲಿದ್ದಾರೆ ಎಂದಿತ್ತು. ಇದು ಬಿಸಿಸಿಐ-ಅಜಿತ್ ಮಧ್ಯೆ ಮನಸ್ತಾಪಕ್ಕೆ ಕಾರಣವಾಗಿತ್ತು.
ಇನ್ನು, ಆಟಗಾರರ ಗಾಯದ ವಿಚಾರದಲ್ಲಿ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಜೊತೆಗಿನ ಭಿನ್ನಾಭಿಪ್ರಾಯದ ಕಾರಣದಿಂದಲೂ ಅಜಿತ್‌ರನ್ನು ಮುಖ್ಯಸ್ಥ ಸ್ಥಾನದಲ್ಲಿ ಬಿಸಿಸಿಐ ಮುಂದುವರಿಸುತ್ತಿಲ್ಲ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.