
ಲಾಹೋರ್(ಸೆ.26): ಉಸ್ಮಾನ್ ಖಾನ್ ಶೆನ್ವಾರಿ ಕ್ರಿಕೆಟ್ ಆಡುತ್ತಿರುವಾಗಲೇ ದಿಢೀರ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭರಸಿಡಿಲಿನಂತೆ ಅಪ್ಪಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೃದಯಾಘಾತದ ವಿಡಿಯೋ ಕೂಡಾ ವೈರಲ್ ಆಗಿತ್ತು. ಪಾಕಿಸ್ತಾನ ಕಾರ್ಪೊರೇಟ್ ಲೀಗ್ ಟೂರ್ನಿಯ ವೇಳೆ ಈ ದುರ್ಘಟನೆ ನಡೆದಿದೆ. ಆದರೆ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ ಆಟಗಾರನ ಹೆಸರು ಉಸ್ಮಾನ್ ಶೆನ್ವಾರಿ ಆಗಿದ್ದರೂ ಸಹಾ ಆತ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನಲ್ಲ.
ಪಾಕಿಸ್ತಾನ್ ಕಾರ್ಪೊರೇಟ್ ಲೀಗ್ ಟೂರ್ನಿಯಲ್ಲಿ ಬರ್ಗರ್ ಪೇಯಿಂಟ್ಸ್ ಹಾಗೂ ಫ್ರೈಸ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲೇ ಉಸ್ಮಾನ್ ಶೆನ್ವಾರಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾರೆ. ಎಲ್ಲಾ ಆಟಗಾರರು ಹಾಗೂ ಅಂಪೈರ್ಸ್ ಉಸ್ಮಾನ್ ಶೆನ್ವಾರಿಯತ್ತ ಓಡಿದ್ದಾರೆ. ಈ ವಿಡಿಯೋ ವೈರಲ್ ಆಗಿತ್ತು. ಇನ್ನು ಇದೇ ವಿಡಿಯೋವನ್ನು ಪಾಕಿಸ್ತಾನದ ಅಂತಾರಾಷ್ಟ್ರೀಯ ಕ್ರಿಕೆಟಿಗ ಉಸ್ಮಾನ್ ಶೆನ್ವಾರಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಸಾಮಾಜಿಕ ವೈರಲ್ ಮಾಡಲಾಗಿತ್ತು.
ಆದರೆ ಕೊನೆಯುಸಿರೆಳೆದ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟಿಗ ಉಸ್ಮಾನ್ ಶೆನ್ವಾರಿ ಅಲ್ಲ ಅವರ ಬದಲಾಗಿ ಅದೇ ಹೆಸರಿನ ಪಾಕಿಸ್ತಾನದ ಕ್ಲಬ್ ಕ್ರಿಕೆಟಿಗನಾಗಿದ್ದಾರೆ. ಮೈದಾನದಿಂದ ಉಸ್ಮಾನ್ ಶೆನ್ವಾರಿ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರ ಸಾವನ್ನು ಖಚಿತಪಡಿಸಿದರು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗ ಉಸ್ಮಾನ್ ಶೆನ್ವಾರಿ ಅವರೇ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಸ್ವತಃ ಉಸ್ಮಾನ್ ಶೆನ್ವಾರಿ ಅವರೇ ತಾವು ಸುರಕ್ಷಿತವಾಗಿ ಹಾಗೂ ಚೆನ್ನಾಗಿರುವುದಾಗಿ ಟ್ವೀಟ್ ಮಾಡಿ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಅಲ್ಲಾನ ದಯೆಯಿಂದ ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜನರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಈ ರೀತಿಯ ಸುದ್ದಿಯನ್ನು ಹರಡುವ ಮುನ್ನ ಸರಿಯಾದ ಮಾಹಿತಿಯೊಂದಿಗೆ ಸುದ್ದಿಯನ್ನು ಹಂಚಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಶಿಸ್ತು ತೋರಿದ ಯಶಸ್ವಿ ಜೈಸ್ವಾಲ್‌ಗೆ ಶಿಸ್ತಿನ ಪಾಠ ಮಾಡಿ ಮೈದಾನದ ಹೊರಗೆ ಕಳಿಸಿದ ಅಜಿಂಕ್ಯ ರಹಾನೆ..!
ಉಸ್ಮಾನ್ ಶೆನ್ವಾರಿ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ 4 ವರ್ಷಗಳ ಬಳಿಕ ಮತ್ತೊಮ್ಮೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಉಸ್ಮಾನ್ ಶೆನ್ವಾರಿ ಅಕ್ಟೋಬರ್ 09, 2019ರಲ್ಲಿ ಕೊನೆಯ ಬಾರಿಗೆ ಲಾಹೋರ್‌ನಲ್ಲಿ ಶ್ರೀಲಂಕಾ ವಿರುದ್ದ ಪಾಕಿಸ್ತಾನ ತಂಡದ ಪರ ಕಣಕ್ಕಿಳಿದಿದ್ದರು. ಇನ್ನು ಇತ್ತೀಚೆಗಷ್ಟೇ ನಡೆದ ನ್ಯಾಷನಲ್ ಟಿ20 ಕಪ್‌ನಲ್ಲಿಯೂ ಉಸ್ಮಾನ್ ಶೆನ್ವಾರಿ ಕಣಕ್ಕಿಳಿದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.