
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ಮೂರು ಟೆಸ್ಟ್ ಪಂದ್ಯಗಳ ಬಳಿಕ ಪಾಕಿಸ್ತಾನದ ಇಡೀ ತಂಡ ಗಳಿಸಿರುವ ಒಟ್ಟು ರನ್ಗಿಂತ, ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತದ ಶುಭಮನ್ ಗಿಲ್ ಒಬ್ಬರೇ ಗಳಿಸಿದ್ದ ರನ್ ಹೆಚ್ಚಿದೆ.
ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಶುಭಮನ್ ಗಿಲ್ ಒಟ್ಟು 754 ರನ್ ಗಳಿಸಿದ್ದರು. ಆದರೆ ಪಾಕಿಸ್ತಾನದ ತಂಡ ಮೊದಲ ಎರಡು ಟೆಸ್ಟ್ ಪಂದ್ಯಗಳು ಹಾಗೂ ಎಜ್ಬಾಸ್ಟನ್ನಲ್ಲಿ ನಡೆದ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ ಸೇರಿ ಕೇವಲ 743 ರನ್ ಗಳಿಸಿದೆ. ಬುಧವಾರ ಪಾಕಿಸ್ತಾನ ಕೇವಲ 133 ರನ್ಗೆ ಆಲೌಟ್ ಆಗಿದ್ದು, ತಂಡದ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಬಹಿರಂಗವಾಗಿದೆ.
ಇತ್ತೀಚಿನ ವೈಫಲ್ಯಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿತ್ತು. ಹೆಡಿಂಗ್ಲಿ ಹಾಗೂ ಲಾರ್ಡ್ಸ್ನಲ್ಲಿ ಸೋಲು ಕಂಡ ಬಳಿಕ ಏಳು ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು. ಕೋಚಿಂಗ್ ಸಿಬ್ಬಂದಿಯನ್ನೂ ವಜಾಗೊಳಿಸಲಾಗಿತ್ತು. ಆದರೆ ಈ ಬದಲಾವಣೆಗಳು ಯಾವುದೇ ದೊಡ್ಡ ಪರಿಣಾಮ ಬೀರಿಲ್ಲ. ಟಾಸ್ ವೇಳೆ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರಿಗೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವುದು ಎಷ್ಟು ಕಷ್ಟ ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೆ ಬಾಬರ್, ಕಷ್ಟವಿಲ್ಲ. ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ. ಹೊಸ ಆಟಗಾರರಿಗೆ ಇದು ಉತ್ತಮ ಅವಕಾಶ. ಈ ಪಂದ್ಯದಲ್ಲಿ ನಮ್ಮ ಕೈಲಾದಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು. ಆದರೆ ಪಂದ್ಯ ಆರಂಭವಾದ ಮೊದಲ ಸೆಷನ್ನಲ್ಲೇ ಪಾಕಿಸ್ತಾನದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂಬುದು ಸ್ಪಷ್ಟವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಆರಂಭದಿಂದಲೇ ವಿಕೆಟ್ಗಳ ಪತನ ಶುರುವಾಯಿತು. ಅಂತಿಮವಾಗಿ ಇಡೀ ತಂಡ ಕೇವಲ 133 ರನ್ಗೆ ಆಲೌಟ್ ಆಯಿತು. ಮೊದಲ ದಿನದ ಆಟದ ಅಂತ್ಯಕ್ಕೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ಈ ಮೂಲಕ ಪಾಕಿಸ್ತಾನದ ವಿರುದ್ಧ 23 ರನ್ಗಳ ಮುನ್ನಡೆ ಸಾಧಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.