
ನವದೆಹಲಿ (ಏ.2): ಅಂತಾರಾಷ್ಟ್ರೀಯ ಅಂಪೈರಿಂಗ್ ಜೀವನಕ್ಕೆ ಶ್ರೇಷ್ಠ ಅಂಪೈರ್ ಮಾರಿಸ್ ಎರಾಸ್ಮಸ್ ವಿದಾಯ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ತಮ್ಮ ಅಂಪೈರಿಂಗ್ ಜೀವನದಲ್ಲಿ ಆದ ದೊಡ್ಡ ತಪ್ಪಿನ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಚೊಚ್ಚಲ ವಿಶ್ವಕಪ್ ಗೆಲುವಿಗೆ ಅಂಪೈರಿಂಗ್ ತಪ್ಪು ಕಾರಣವಾಗಿತ್ತು ಎಂದು ಹೇಳಿದ್ದಾರೆ. ದಿ ಟೆಲಿಗ್ರಾಫ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾರಿಸ್ ಎರಾಸ್ಮಸ್, ಫೈನಲ್ ಪಂದ್ಯದ ವೇಳೆ ತಾವು ಹಾಗೂ ಇನ್ನೊಬ್ಬ ಅಂಪೈರ್ ಕುಮಾರ ಧರ್ಮಸೇನ ಮಾಡಿದ್ದು ತಪ್ಪು ಎನ್ನುವುದು ಮರುದಿನ ಬೆಳಗ್ಗೆ ಗೊತ್ತಾಗಿತ್ತು ಎಂದು ಹೇಳಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಐತಿಹಾಸಿಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್‌ಅನ್ನು ಮಣಿಸಿ ಮೊಟ್ಟಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯ ಚಾಂಪಿಯನ್ ಆಗಿತ್ತು.
ನಾವು ಮಾಡಿದ ರಪ್ಪಯ, ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ಐಕಾನಿಕ್ ಕ್ಷಣವಾಗಿ ಉಳಿದುಕೊಂಡಿದೆ ಎಂದು ಹೇಳಿದ್ದಾರೆ. 2019ರಲ್ಲಿ ನಡೆದ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ 3 ಎಸೆತಗಳಲ್ಲಿ 9 ರನ್ ಬೇಕಿದ್ದವು. ಈ ಹಂತದಲ್ಲಿ ಡೀಪ್‌ಮಿಡ್‌ವಿಕೆಟ್‌ನತ್ತ ಚೆಂಡನ್ನು ತಳ್ಳಿದ್ದ ಬೆನ್ ಸ್ಟೋಕ್ಸ್ ಎರಡು ರನ್ ಕದ್ದಿದ್ದರು. ಈ ಹಂತದಲ್ಲಿ ಎಸೆದ ಥ್ರೋ, ಕ್ರೀಸ್ ಬಳಿ ಡೈವ್ ಮಾಡಿದ ಬೆನ್ ಸ್ಟೋಕ್ಸ್ ಅವರ ಬ್ಯಾಟ್‌ಗೆ ತಾಕಿ ಬೌಂಡರಿಗೆ ಹೋಗಿತ್ತು. ಈ ವೇಳೆ ಅಂಪೈರ್ ಆಗಿದ್ದ ಎರಾಸ್ಮಸ್ ಹಾಗೂ ಧರ್ಮಸೇನ 6 ರನ್ (2 ರನ್ + 4 ಓವರ್‌ಥ್ರೋ ರನ್) ನೀಡಿದ್ದರು. ಈ ಹಂತದಲ್ಲಿ ಅವರು ಮಾಡಿದ್ದ ತಪ್ಪು ಏನು ಎನ್ನುವುದೇ ಅರ್ಥವಾಗಿರಲಿಲ್ಲ.
ಈ ರನ್‌ಗಳು ಇಂಗ್ಲೆಂಡ್‌ಗೆ ಎಷ್ಟು ಪ್ರಮುಖವಾಗಿತ್ತೆಂದರೆ, ಆ ಬಳಿಕ ಪಂದ್ಯ ಟೈ ಆದರೆ, ಸೂಪರ್ ಓವರ್ ಕೂಡ ಟೈ ಆಯಿತು. ಕೊನೆಗೆ ಬೌಂಡರಿ ಕೌಂಟ್ ನಿಯಮದ ಅನುಸಾರ ಇಂಗ್ಲೆಂಡ್ ಗೆಲುವು ಕಂಡಿತು. ಬೌಂಡರಿ ಕೌಂಟ್ ವಿವಾದದ ಮುಂದೆ ಅಂಪೈರ್ ಮಾಡಿದ ತಪ್ಪು ಎಲ್ಲಿಯೂ ಗೊತ್ತಾಗಿಯೇ ಇದ್ದಿರಲಿಲ್ಲ. ಪಂದ್ಯ ಮುಗಿದ ಬಳಿಕ ಹೈಲೈಟ್ಸ್ ಗಮನಿಸಿದಾಗ, ಅಂಪೈರ್‌ಗಳು ಅಲ್ಲಿ 6 ರನ್ ನೀಡುವ ಬದಲು ಐದು ರನ್ ನೀಡಬೇಕಿತ್ತು. ಯಾಕೆಂದರೆ, ಫೀಲ್ಡರ್ ಚೆಂಡನ್ನು ವಿಕೆಟ್‌ಕೀಪರ್‌ನತ್ತ ಎಸೆಯುವ ವೇಳೆ ಬ್ಯಾಟರ್‌ಗಳ ಕ್ರಾಸ್ ಆಗಿಯೇ ಇದ್ದಿರಲಿಲ್ಲ.
'ಮರುದಿನ ಬೆಳಗ್ಗೆ ನಾನು ನನ್ನ ಹೋಟೆಲ್ ರೂಮ್‌ನ ಡೋರ್‌ಅನ್ನು ತೆಗೆದೆ, ಅದೇ ಸಮಯದಲ್ಲಿ ಕುಮಾರ (ಧರ್ಮಸೇನ) ಕೂಡ ತಮ್ಮ ರೂಮ್‌ನ ಡೋರ್ ತೆಗೆದಿದ್ದರು. ಈ ವೇಳೆ ಅವರು, 'ನೀವು ನೋಡಿದ್ರಾ ನಾವು ಬಹಳ ದೊಡ್ಡ ತಪ್ಪು ಮಾಡಿದ್ದೇವೆ? ಎಂದು ಹೇಳಿದರು. ಈ ಹಂತದಲ್ಲಿ ನನಗೆ ತಪ್ಪಿನ ಅರಿವಾಗಿತ್ತು. ಆದರೆ, ಮೈದಾನದಲ್ಲಿದ್ದ ವೇಳೆ ಇದು ಆರು ರನ್ ಎಂದೇ ಮಾತನಾಡಿದ್ದೆವು. ನಾವು ಮಾತನಾಡುವ ವೇಳೆಯಲ್ಲೂ, 'ಆರು, ಆರು, ಇದು ಆರು..' ಎಂದೇ ಹೇಳಿದ್ದವು. ಈ ಹಂತದಲ್ಲಿ ಚೆಂಡು ಎಸೆಯುವ ವೇಳೆ ಬ್ಯಾಟ್ಸ್‌ಮನ್‌ಗಳು ಕ್ರಾಸ್ ಆಗಿದ್ದರೇ ಎನ್ನುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ' ಎಂದು ಎರಾಸ್ಮಸ್ ಒಪ್ಪಿಕೊಂಡಿದ್ದಾರೆ. ಮಾಜಿ ಅಂಪೈರ್ ಸೈಮನ್ ಟೌಫೆಲ್ ಅವರು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ಫೈನಲ್‌ನ ದಿನದಂದೇ ಇದನ್ನು ಖಚಿತಪಡಿಸಿ, ಅಂಪೈರ್‌ಗಳು ಇಲ್ಲಿ ಐದು ರನ್ ನೀಡಬೇಕಿತ್ತು ಎಂದು ಹೇಳಿದ್ದರು.
ಮುಂಬರುವ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್..! ಕಾರಣ 'ತ್ಯಾಗ'
ಇದು ಅತ್ಯಂತ ಕ್ಲಿಯರ್ ಮಿಸ್ಟೇಕ್. ತೀರ್ಪು ನೀಡಿರುವಲ್ಲಿ ಆಗಿರುವ ಪ್ರಮಾದ ಎಂದು ಸೈಮನ್ ಟೌಫೆಲ್ ಹೇಳಿದ್ದರು. ಇಂಗ್ಲೆಂಡ್‌ಗೆ 6 ರನ್ ಬದಲಾಗಿ ಐದು ರನ್ ನೀಡಬೇಕಿತ್ತು ಎಂದು ಅವರು ತಿಳಿಸಿದ್ದರು.
ಕೇವಲ 60 ನಿಮಿಷದಲ್ಲಿ ರಾಜ್ಯದ ಕ್ರಿಕೆಟಿಗ ಕೆ ಸಿ ಕಾರಿಯಪ್ಪಗೆ ವೀಸಾ ಮಂಜೂರು..!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.