U19 Women's T20 World Cup ಚೊಚ್ಚಲ ಅಂಡರ್-19 ಟಿ20 ವಿಶ್ವಕಪ್‌ ಗೆಲ್ಲುತ್ತಾ ಭಾರತ?

By Kannadaprabha NewsFirst Published Jan 29, 2023, 10:57 AM IST
Highlights

ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ ಪಂದ್ಯಕ್ಕೆ ಕ್ಷಣಗಣನೆ
ಭರ್ಜರಿ ಫಾರ್ಮ್‌ನಲ್ಲಿರುವ ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್‌
ಆಸ್ಟ್ರೇಲಿಯಾ ಎದುರು ಗೆದ್ದು ಫೈನಲ್‌ ಪ್ರವೇಶಿಸಿರುವ ಇಂಗ್ಲೆಂಡ್

ಪಾಚೆಫ್‌ಸ್ಟ್ರೋಮ್‌(ಜ.29): 16 ತಂಡಗಳೊಂದಿಗೆ ಆರಂಭಗೊಂಡ ಚೊಚ್ಚಲ ಆವೃತ್ತಿಯ ಅಂಡರ್‌-19 ಮಹಿಳಾ ಟಿ20 ಟೂರ್ನಿಯಲ್ಲಿ ಕೇವಲ 2 ತಂಡಗಳು ಉಳಿದುಕೊಂಡಿವೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ಪ್ರಶಸ್ತಿಗಾಗಿ ಸೆಣಸಲಿವೆ.

ನ್ಯೂಜಿಲೆಂಡ್‌ ವಿರುದ್ಧ ಸೆಮಿಫೈನಲ್‌ನಲ್ಲಿ 8 ವಿಕೆಟ್‌ಗಳ ಅಧಿಕಾರಯುತ ಜಯ ಸಾಧಿಸಿ ಭಾರತ ಫೈನಲ್‌ ಪ್ರವೇಶಿಸಿದರೆ, ಆಸ್ಪ್ರೇಲಿಯಾ ವಿರುದ್ಧ 100 ರನ್‌ ಗುರಿಯನ್ನು ರಕ್ಷಿಸಿಕೊಂಡು 3 ರನ್‌ಗಳ ರೋಚಕ ಗೆಲುವಿನೊಂದಿಗೆ ಇಂಗ್ಲೆಂಡ್‌ ಪ್ರಶಸ್ತಿ ಸುತ್ತಿಗೇರಿತು.

ಭಾರತ ಹಿರಿಯರ ತಂಡದಲ್ಲಿ ಆಡುವ ಶಫಾಲಿ ವರ್ಮಾ ಹಾಗೂ ರಿಚಾ ಘೋಷ್‌, ಕಿರಿಯರ ತಂಡದಲ್ಲಿ ಆಡುತ್ತಿದ್ದರೂ ಇಬ್ಬರಿಂದ ದೊಡ್ಡ ಕೊಡುಗೆ ಮೂಡಿಬಂದಿಲ್ಲ. ಆದರೆ ಟೂರ್ನಿಯಲ್ಲಿ ಗರಿಷ್ಠ ರನ್‌(292) ಕಲೆಹಾಕಿರುವ ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್‌ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಎನಿಸಿದ್ದು, ಬೌಲಿಂಗ್‌ನಲ್ಲಿ 16ರ ಲೆಗ್‌ ಸ್ಪಿನ್ನರ್‌ ಪಾರ್ಶವಿ ಚೋಪ್ರಾ ಭಾರತದ ಟ್ರಂಪ್‌ ಕಾರ್ಡ್‌ ಎನಿಸಿದ್ದಾರೆ. ಈ ಇಬ್ಬರ ಪ್ರದರ್ಶನ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. 8 ವಿಕೆಟ್‌ ಕಬಳಿಸಿರುವ ಮನ್ನತ್‌ ಕಶ್ಯಪ್‌ ಸಹ ಭಾರತದ ಪ್ರಮುಖ ಬೌಲಿಂಗ್‌ ಅಸ್ತ್ರವೆನಿಸಿದ್ದಾರೆ.

U19 Women's T20 World Cup: ಶ್ವೇತಾ ಶೆರಾವತ್‌ ಭರ್ಜರಿ ಬ್ಯಾಟಿಂಗ್, ಫೈನಲ್‌ಗೆ ಲಗ್ಗೆಯಿಟ್ಟ ಭಾರತ..!

ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದ ಭಾರತ, ಸೂಪರ್‌-6 ಹಂತದಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೋತಿತ್ತು. ಆದರೆ ಇಂಗ್ಲೆಂಡ್‌ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಗುಂಪು ಹಂತದಲ್ಲಿ 3 ಜಯ ಪಡೆದ ಇಂಗ್ಲೆಂಡ್‌, ಸೂಪರ್‌-6ನಲ್ಲಿ ಆಡಿದ ಎರಡೂ ಪಂದ್ಯ ಜಯಿಸಿತ್ತು. ಸೆಮೀಸ್‌ನಲ್ಲೂ ತನ್ನ ಬೌಲರ್‌ಗಳ ಸಾಹಸದಿಂದ ಗೆದ್ದು ಬೀಗಿತು.

ಟೂರ್ನಿಯಲ್ಲಿ 289 ರನ್‌ ಕಲೆಹಾಕಿರುವ ಗ್ರೇಸ್‌ ಸ್ಕ್ರೀವೆನ್ಸ್‌ ಇಂಗ್ಲೆಂಡ್‌ನ ಪ್ರಮುಖ ಬ್ಯಾಟರ್‌ ಆಗಿದ್ದು, ಬೌಲಿಂಗ್‌ನಲ್ಲಿ ಹನ್ನಾ ಬೇಕರ್‌(9 ವಿಕೆಟ್‌)ರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಡಾವಿನಾ ಪೆರ್ರಿನ್‌ ಸಹ ಉತ್ತಮ ಲಯದಲ್ಲಿದ್ದಾರೆ.

ಪಂದ್ಯ ಆರಂಭ: ಸಂಜೆ 5.15ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಗುಜರಾತ್‌ ಜೈಂಟ್ಸ್‌ಗೆ ಮಿಥಾಲಿ ರಾಜ್‌ ಮೆಂಟರ್‌

ನವದೆಹಲಿ: ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್‌ ಚೊಚ್ಚಲ ಆವೃತ್ತಿಯ ವುವೆಮ್ಸ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡದ ಮಾರ್ಗದರ್ಶಕಿಯಾಗಿ ನೇಮಕಗೊಂಡಿದ್ದಾರೆ. ಶನಿವಾರ ತಂಡ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಭಾರತ ಪರ 89 ಟಿ20 ಪಂದ್ಯಗಳನ್ನಾಡಿರುವ ಮಿಥಾಲಿ 2364 ರನ್‌ ಗಳಿಸಿದ್ದಾರೆ. 

ಇದೇ ವೇಳೆ ದೆಹಲಿ ತಂಡದ ಕೋಚ್‌ಗಳ ಹುದ್ದೆಗೆ ಫ್ರಾಂಚೈಸಿಯು ಮಾಜಿ ವೇಗಿ ಜೂಲನ್‌ ಗೋಸ್ವಾಮಿ ಹಾಗೂ ಭಾರತದ ಮಾಜಿ ಕೋಚ್‌ ಡಬ್ಲ್ಯುವಿ ರಾಮನ್‌ರನ್ನು ನೇಮಿಸುವ ಸಾಧ್ಯತೆ ಇದೆ.

click me!