ಮಳೆ ಭೀತಿಯ ನಡುವೆಯೇ ಇಂದಿನಿಂದ ಬೆಂಗಳೂರಲ್ಲಿ ಭಾರತ vs ಕಿವೀಸ್ ಮೊದಲ ಟೆಸ್ಟ್

By Kannadaprabha News  |  First Published Oct 16, 2024, 9:15 AM IST

ಬೆಂಗಳೂರಿನಲ್ಲಿಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭವಾಗಬೇಕಿದೆ. ಆದರೆ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ


ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಹೈವೋಲೋಜ್ ಟೆಸ್ಟ್ ಸರಣಿಗೆ ವೇದಿಕೆ ಸಜ್ಜುಗೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಿಂದ ಇತ್ತಂಡಗಳ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. ಆದರೆ ಪಂದ್ಯದ ಫಲಿತಾಂಶ ಏನಾಗಲಿದೆ ಎಂಬುದಕ್ಕಿಂತಲೂ ಪಂದ್ಯಕ್ಕೆ ಮಳೆ ಕೃಪೆ ತೋರಲಿದೆಯೇ ಎಂಬುದೇ ಸದ್ಯ ಎಲ್ಲರಲ್ಲಿರುವ ಪ್ರಶ್ನೆ.

ಚಿನ್ನಸ್ವಾಮಿ ಕ್ರೀಡಾಂಗಣ 2 ವರ್ಷ ಬಳಿಕ ಮತ್ತೊಮ್ಮೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲು ಸಿದ್ಧವಾಗಿದೆ. ಟೆಸ್ಟ್ ಚಾಂಪಿಯನ್‌ಶಿಪ್ ದೃಷ್ಟಿಯಲ್ಲಿ ಉಭಯ ತಂಡಗಳಿಗೂ ಇದು ಮಹತ್ವದ ಸರಣಿ. ಅದರಲ್ಲೂ ಭಾರತ ತಂಡದ ಫೈನಲ್ ಭವಿಷ್ಯ ಇದೇ ಸರಣಿಯಲ್ಲಿ ನಿರ್ಧಾರವಾಗುವ ಸಾಧ್ಯತೆ ಇರುವುದರಿಂದ ಎಲ್ಲರ ಚಿತ್ತ ಸರಣಿ ಮೇಲಿದೆ.

Latest Videos

undefined

ಆರ್‌ಸಿಬಿ ಮೂಲಕ ಬೆಂಗಳೂರಿನವರೇ ಆಗಿರುವ ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್, ನಾಯಕ ರೋಹಿತ್ ಶರ್ಮಾ ಪಂದ್ಯದ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು, ಈ ಪಂದ್ಯದಲ್ಲಾದರೂ ಮಿಂಚಬಲ್ಲರೇ ಎಂಬ ಕುತೂಹಲವಿದೆ. ಕೊಹ್ಲಿ ಈ ವರ್ಷ 6 ಇನ್ನಿಂಗ್ಸ್‌ಗಳಲ್ಲಿ ಒಂದೂ ಅರ್ಧಶತಕ ಬಾರಿಸಿಲ್ಲ. ಅತ್ತ ರೋಹಿತ್ 2024ರ 15 ಇನ್ನಿಂಗ್ಸ್‌ಗಳಲ್ಲಿ 2 ಶತಕ, 1 ಅರ್ಧಶತಕ ಸೇರಿ 497 ರನ್ ಗಳಿಸಿದ್ದಾರೆ. ಕೆ.ಎಲ್. ರಾಹುಲ್ ಕೂಡಾ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದು, ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ.

ಭಾರತ vs ಕಿವೀಸ್‌ ಪಂದ್ಯಕ್ಕೆ ಅಡ್ಡಿಯಾಗುತ್ತಾ ಮಳೆ?: ಇಲ್ಲಿದೆ ಹವಾಮಾನ ಇಲಾಖೆ ವರದಿ

ಗಿಲ್ ಗೈರು?: ಯುವ ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಅಭೂತಪೂರ್ವ ಲಯ ದಲ್ಲಿದ್ದು, ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ದೊಡ್ಡ ಸ್ಕೋರ್ ಕಲೆಹಾಕಲು ಕಾಯುತ್ತಿದ್ದಾರೆ. ಆದರೆ ಗಿಲ್ ಕುತ್ತಿಗೆ ನೋವಿಗೆ ತುತ್ತಾಗಿದ್ದು, ಬುಧವಾರದ ಪಂದ್ಯಕ್ಕೂ ಮುನ್ನ ಚೇತರಿಸಿಕೊಳ್ಳದಿದ್ದರೆ ಅವರ ಬದಲು ಸರ್ಫರಾಜ್ ಖಾನ್‌ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. 

3 ವೇಗಿಗಳು ಅಥವಾ 3 ಸ್ಪಿನ್ನರ್ಸ್?: ಸಾಧಾರಣವಾಗಿ ಬೆಂಗಳೂರು ಪಿಚ್ ವೇಗಿಗಳಿಗೆ ಹೆಚ್ಚು ನೆರವು ನೀಡುತ್ತದೆ. ಆದರೆ ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಸ್ಪಿನ್ನರ್‌ಗಳ ವಿರುದ್ಧ ಅಕ್ಷರಶಃ ತತ್ತರಿಸಿ ಹೋಗಿತ್ತು. ತಂಡ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಪರದಾಡುತ್ತಿರುವ ಕಾರಣ ಭಾರತ ಈ ಪಂದ್ಯದಲ್ಲಿ ಹೆಚ್ಚುವರಿ ಸ್ಪಿನ್ನರ್ ಆಡಿಸುವ ಸಾಧ್ಯತೆಯನ್ನೂ ಅಲ್ಲ ಗಳೆಯುವಂತಿಲ್ಲ. 3 ವೇಗಿಗಳನ್ನು ಕಣಕ್ಕಿಳಿಸಲು ನಿರ್ಧರಿ ಸಿದರೆ ಜಸ್‌ಪ್ರೀತ್‌ ಬುಮ್ರಾ, ಸಿರಾಜ್ ಜೊತೆ ಆಕಾಶ್ ದೀಪ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಬಹುದು. ಅಲ್ಲದಿದ್ದರೆ ಎಡಗೈ ಸ್ಪಿನ್ನರ್ ಕುಲೀಪ್ ಯಾದವ್‌ಗೆ ಆಕಾಶ್ ದೀಪ್ ಜಾಗ ಬಿಟ್ಟುಕೊಡಬೇಕಾಗಬಹುದು.

ಸಚಿನ್ ಅಲ್ಲ, ಕೊಹ್ಲಿ ಅಲ್ಲ: ಭಾರತದ ಈ ಮಾಜಿ ಆಲ್ರೌಂಡರ್ ವಿಶ್ವದ ಶ್ರೀಮಂತ ಕ್ರಿಕೆಟಿಗ!

ವಿಲಿಯನ್ಸನ್ ಅಲಭ್ಯ: ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್‌ನಲ್ಲಿ ಕೇನ್ ವಿಲಿಯಮ್ಮನ್ ಸೇವೆಯಿಂದ ವಂಚಿತವಾಗಲಿದೆ. ಕೇನ್ ಗಾಯಗೊಂಡ ಕಾರಣ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಜೊತೆಗೆ ವೇಗದ ಬೌಲರ್ ಬೆನ್ ಸೀರ್ಸ್ ಕೂಡಾ ಪಂದ್ಯದಿಂದ ಹೊರಬಿದ್ದಿದ್ದಾರೆ. ತಂಡವನ್ನು ಟಾಮ್ ಲೇಥಮ್ ಮುನ್ನಡೆಸಲಿದ್ದಾರೆ.

ತವರಿನಲ್ಲಿ ಕಿವೀಸ್ ಎದುರು ಸರಣಿ ಸೋತಿಲ್ಲ ಭಾರತ

ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಈವ ರೆಗೂ 23 ಟೆಸ್ಟ್‌ ಸರಣಿ ಆಡಿವೆ. ಈ ಪೈಕಿ 12ರಲ್ಲಿ ಗೆದ್ದಿದ್ದರೆ, 7ರಲ್ಲಿ ಕಿವೀಸ್ ಗೆದ್ದಿದೆ. 4 ಸರಣಿ ಡ್ರಾಗೊಂಡಿವೆ. ಇನ್ನು, ಉಭಯ ತಂಡಗಳ ನಡುವೆ ಭಾರತದಲ್ಲಿ 12 ಸರಣಿಗಳು ನಡೆದಿವೆ. ಭಾರತ ಒಮ್ಮೆಯೂ ಸರಣಿ ಸೋತಿಲ್ಲ. 10 ಸರಣಿಗಳಲ್ಲಿ ಭಾರತ ಗೆದ್ದಿದ್ದರೆ, 2 ಡ್ರಾಗೊಂಡಿವೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ / ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್ /ಕುಲೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಡೆವೋನ್ ಕಾನ್‌ವೇ, ಟಾಮ್ ಲೇಥಮ್ (ನಾಯಕ), ವಿಲ್ ಯಂಗ್, ರಚಿನ್ ರವೀಂದ್ರ, ಡೇರಲ್ ಮಿಚೆಲ್, ಟಾಮ್ ಬಂಡೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟರ್ /ಬ್ರೇಸ್‌ವೆಲ್, ಸೌಥಿ, ಅಜಾಜ್, ಒ‌ರ್ಕ

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ 
ಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
 

click me!