ಟೀಂ ಇಂಡಿಯಾ ಏಷ್ಯಾಕಪ್ ಆಡಲು ಪಾಕ್‌ ಪ್ರವಾಸ ಕೈಗೊಳ್ಳದಿರುವ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು..?

By Naveen Kodase  |  First Published Oct 22, 2022, 3:30 PM IST

ಏಷ್ಯಾಕಪ್ ಟೂರ್ನಿಗೆ ಪಾಕ್ ಪ್ರವಾಸ ಮಾಡಲು ಭಾರತ ಹಿಂದೇಟು
ತಟಸ್ಥ ಸ್ಥಳದಲ್ಲಿ ನಡೆದರೆ ಮಾತ್ರ ಭಾರತ ಟೂರ್ನಿಯಲ್ಲಿ ಪಾಲ್ಗೊಳ್ಳಿದೆ ಎಂದ ಜಯ್ ಶಾ
ಈ ವಿಚಾರದ ಕುರಿತಂತೆ ಮೊದಲ ಬಾರಿಗೆ ತುಟಿಬಿಚ್ಚಿದ ನಾಯಕ ರೋಹಿತ್ ಶರ್ಮಾ


ಮೆಲ್ಬರ್ನ್‌(ಅ.22): ಭಾರತ ತಂಡವು ಮುಂದಿನ ವರ್ಷ ಏಷ್ಯಾಕಪ್ ಟೂರ್ನಿಯನ್ನಾಡಲು ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ, ಒಂದು ವೇಳೆ ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಟೂರ್ನಿ ನಡೆದರೆ ಮಾತ್ರ ಭಾರತ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡಿದ ಹೇಳಿಕೆ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವನ್ನೇ ಮೂಡಿಸಿದೆ. 

ಒಂದು ವೇಳೆ ಏಷ್ಯಾಕಪ್ ಟೂರ್ನಿಯನ್ನಾಡಲು ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡದೇ ಹೋದರೆ, 2023ರಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಡ್ಡಿದೆ. ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ನ ಸದಸ್ಯ ರಾಷ್ಟ್ರಗಳ ಜತೆಗೆ ಚರ್ಚಿಸದೇ, ಜಯ್ ಶಾ ಈ ರೀತಿ ಹೇಳಿಕೆ ನೀಡಿರುವುದು, ಪಾಕಿಸ್ತಾನ ತಂಡವು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಚ್ಚರಿಸಿದೆ. ಹೀಗಾಗಿ ಸದ್ಯ ಉಭಯ ದೇಶಗಳ ನಡುವೆ ಈ ವಿಚಾರ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈ ವಿಚಾರದ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Latest Videos

undefined

ಸದ್ಯಕ್ಕೆ ನಮ್ಮ ಗಮನವೇನಿದ್ದರೂ, ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚೆನ್ನಾಗಿ ಆಡುವುದಾಗಿದೆ. ಯಾಕೆಂದರೆ ಈ ವಿಶ್ವಕಪ್ ನಮ್ಮ ಪಾಲಿಗೆ ತುಂಬಾ ಮುಖ್ಯ. ಇದಾದ ನಂತರ ಏನೇನು ನಡೆಯಲಿದೆ ಎನ್ನುವುದು ನಮಗೆ ಮುಖ್ಯವಾಗುವುದಿಲ್ಲ. ಈ ಬಗ್ಗೆ ಈಗಲೇ ಯೋಚಿಸುವುದರಲ್ಲಿ ಅರ್ಥವಿಲ್ಲ. ಏಷ್ಯಾಕಪ್ ಟೂರ್ನಿಗೆ ಭಾರತ ಪಾಕಿಸ್ತಾನ ಪ್ರವಾಸ ಮಾಡಬೇಕೇ ಎನ್ನುವುದರ ಬಗ್ಗೆ ಬಿಸಿಸಿಐ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ನಾವಂತೂ ಸದ್ಯ ನಾಳಿನ ಪಂದ್ಯದ ಕಡೆ ಗಮನ ಹರಿಸುತ್ತಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Asia Cup 2023: ಭಾರತಕ್ಕೆ ಪರೋಕ್ಷ ಬೆದರಿಕೆಯೊಡ್ಡಿದ ಪಾಕಿಸ್ತಾನ..!

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬರ್ನ್‌ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದ್ದು, ಪಂದ್ಯದ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ಕಳೆದ ವರ್ಷ ಯುಎಇನ ದುಬೈ ಮೈದಾನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು 10 ವಿಕೆಟ್‌ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ವಿಶ್ವಕಪ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಶರಣಾಗಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಳೆದ ಸೋಲಿನ ಲೆಕ್ಕಾ ಚುಕ್ತಾ ಮಾಡಲು ಎದುರು ನೋಡುತ್ತಿದೆ.

ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ವೇಳಾಪಟ್ಟಿ ಹೀಗಿದೆ ನೋಡಿ

23-10-22: ಭಾರತ-ಪಾಕಿಸ್ತಾನ-ಭಾನುವಾರ- 1:30 PM (ಭಾರತೀಯ ಕಾಲಮಾನ)

27-10-22: ಭಾರತ- ಗ್ರೂಪ್ 'ಎ' ರನ್ನರ್ ಅಪ್ ತಂಡ - ಗುರುವಾರ - 12:30 PM

30-10-22: ಭಾರತ - ದಕ್ಷಿಣ ಆಫ್ರಿಕಾ - ಭಾನುವಾರ - 4:30 PM

02-11-22: ಭಾರತ - ಬಾಂಗ್ಲಾದೇಶ - ಬುಧವಾರ - 1:30 PM

06-11-22: ಭಾರತ -   ಗ್ರೂಪ್ 'ಬಿ' ವಿನ್ನರ್ ತಂಡ - ಭಾನುವಾರ - 1:30 PM

ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಶದೀಪ್ ಸಿಂಗ್, ಮೊಹಮ್ಮದ್ ಶಮಿ.

ಮೀಸಲು ಆಟಗಾರರು:

ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.

click me!