ಮೈದಾನದಲ್ಲಿ ಜಾದೂ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್
ಹಲವು ಸವಾಲುಗಳನ್ನು ಮೆಟ್ಟಿನಿಂತ ಧೋನಿ ಪಡೆ
ವಿಶ್ವ ಶ್ರೇಷ್ಠ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲೂ ಟ್ರೋಫಿ ಗೆದ್ದ ಸಿಎಸ್‌ಕೆ
ಅಹಮದಾಬಾದ್(ಜೂ.01): ಹಾರ್ದಿಕ್ ಪಾಂಡ್ಯ ನೇತೃತ್ವದ ಬಲಿಷ್ಠ ಗುಜರಾತ್ ತಂಡವನ್ನು ರೋಚಕವಾಗಿ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆಯ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚೆನ್ನೈ ತಂಡದ ಈ ಪ್ರದರ್ಶನ ಸಾಕಷ್ಟು ಅಚ್ಚರಿಗೆ ಹಾಗೂ ಸ್ಪೂರ್ತಿಗೂ ಕಾರಣವಾಗಿದೆ. ಚೆನ್ನೈ ಸೂಪರ್ ಕಿಂಗ್‌್ಸ ಚಾಂಪಿಯನ್ ಪಟ್ಟಕ್ಕೇರಲು ಸವಾಲುಗಳ ಸಾಗರವನ್ನು ದಾಟಬೇಕಾಯಿತು. ಅನುನುಭವಿ ಬೌಲಿಂಗ್ ಪಡೆ, ನಿವೃತ್ತಿ ಹಂತದಲ್ಲಿರುವ ಹಲವು ಬ್ಯಾಟರ್‌ಗಳು, ವಿಶ್ವ ಶ್ರೇಷ್ಠ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅನುಪಸ್ಥಿತಿ, ಗಾಯದಿಂದಾಗಿ 6 ಪಂದ್ಯ ತಪ್ಪಿಸಿಕೊಂಡ ಪ್ರಮುಖ ಬೌಲರ್ ದೀಪಕ್ ಚಹರ್, ಟೂರ್ನಿಯಲ್ಲಿ ಕೇವಲ 57 ಎಸೆತ ಎದುರಿಸಿದ ಧೋನಿ. ಇಷ್ಟಾದರೂ ಸಿಎಸ್‌ಕೆ ಟ್ರೋಫಿ ಜಯಿಸಿತು ಎಂದರೆ ಅದಕ್ಕೆ ತಂಡದ ಆಡಳಿತದ ಅಚ್ಚುಕಟ್ಟಾದ ಯೋಜನೆ, ನಾಯಕ ಧೋನಿಯ ಚಾಣಾಕ್ಷತನ, ಆಟಗಾರರ ಸಂಘಟಿತ ಆಟವೇ ಕಾರಣ.
ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ಸೇರಿದ ಬಳಿಕ ಅವರ ಸ್ಥಾನವನ್ನು ಡೆವೊನ್ ಕಾನ್ವೇ ಸಮರ್ಥವಾಗಿ ತುಂಬಿದ್ದಾರೆ. ಋುತುರಾಜ್ ಗಾಯಕ್ವಾಡ್ ಸ್ಥಿರ ಆಟದ ಮೂಲಕ, ರೈನಾ ಅವರ ಅನುಪಸ್ಥಿತಿ ಕಾಡದಂತೆ ನೋಡಿಕೊಂಡಿದ್ದಾರೆ.
undefined
ಜಡೇಜಾ ಆಲ್ರೌಂಡ್ ಆಟಕ್ಕೆ ತಂಡ ಬೆಲೆ ಕಟ್ಟಲಾಗುವುದಿಲ್ಲ. ಎಲ್ಲಕ್ಕಿಂತ ಅಚ್ಚರಿ ಮೂಡಿಸಿದ್ದು ಶಿವಂ ದುಬೆ ಅವರ ಸ್ಫೋಟಕ ಆಟ. ಈ ಆವೃತ್ತಿಯಲ್ಲಿ ಅವರು 35 ಸಿಕ್ಸರ್ ಸಿಡಿಸಿ ತಂಡದ ಪವರ್ ಹಿಟ್ಟರ್ ಎನಿಸಿದರು. ಯಾರಿಗೂ ಬೇಡವಾಗಿದ್ದ ರಹಾನೆ, ಚೆನ್ನೈನ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ 14 ಪಂದ್ಯದಲ್ಲಿ 172.48ರ ಸ್ಟ್ರೈಕ್‌ರೇಟ್‌ನಲ್ಲಿ 326 ರನ್ ಚಚ್ಚಿದರು.
ವೇಗಿ ತುಷಾರ್ ದೇಶಪಾಂಡೆ ದುಬಾರಿಯಾದರೂ 21 ವಿಕೆಟ್ ಕಬಳಿಸಿದರು. ಲಂಕಾ ಜೋಡಿ ಪತಿರನ, ತೀಕ್ಷಣರನ್ನು ಧೋನಿ ಟ್ರಂಪ್‌ಕಾರ್ಡ್‌ಗಳಾಗಿ ಬಳಸಿದರು. ನಿರ್ಣಾಯಕ ಘಟ್ಟದಲ್ಲಿ ಚಹರ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದು ದೊಡ್ಡ ಮಟ್ಟದಲ್ಲಿ ನೆರವಾಯಿತು.
ಧೋನಿ ಮುಂದಿನ ವರ್ಷಕ್ಕೂ ಫಿಟ್ ಇರ್ತಾರಾ?: ಕುತೂಹಲ!
ಪ್ರಶಸ್ತಿ ಸಮಾರಂಭದ ವೇಳೆ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ‘ಭವಿಷ್ಯದ’ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, ‘ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ. ಆದರೆ ಎಲ್ಲೆಡೆ ಅಭಿಮಾನಿಗಳಿಂದ ಬಹಳ ಪ್ರೀತಿ ಸಿಗುತ್ತಿದೆ. ಇನ್ನೊಂದು ಆವೃತ್ತಿಯಲ್ಲಿ ಆಡಿದರೆ ಅಭಿಮಾನಿಗಳಿಗೆ ಉಡುಗೊರೆ ನೀಡಿದಂತಾಗುತ್ತದೆ. ಆದರೆ ಮುಂದಿನ ಐಪಿಎಲ್‌ನಲ್ಲಿ ಆಡಲು 9 ತಿಂಗಳು ಪರಿಶ್ರಮ ವಹಿಸಬೇಕಿದೆ’ ಎಂದರು. ಮಂಡಿ ನೋವಿನಿಂದ ಬಳಲುತ್ತಿರುವ ಧೋನಿ, ಈ ವಾರದಲ್ಲೇ ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಐಪಿಎಲ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಆಸ್ಪತ್ರೆ ದಾಖಲಾಗಲಿದ್ದಾರೆ ಧೋನಿ, ಮೊಣಕಾಲು ಸರ್ಜರಿ!
ತೆರೆ ಹಿಂದೆಯೇ ಉಳಿದ ಧೋನಿ: ವೈರಲ್!
ಸಂಭ್ರಮಾಚರಣೆ ವೇಳೆ ಧೋನಿ ಐಪಿಎಲ್ ಟ್ರೋಫಿಯನ್ನು ಯುವಕರ ಕೈಗೊಪ್ಪಿಸಿ ತಾವು ಹಿಂದಿನ ಸಾಲಿನಲ್ಲಿ ನಿಂತು ಖುಷಿ ಪಟ್ಟರು. ಆ ಸನ್ನಿವೇಶದ ದೃಶ್ಯ, ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಸದಾ ತೆರೆ ಹಿಂದೆ ನಿಂತು ಯುವಕರ ಬೆನ್ನು ತಟ್ಟುವ ನಾಯಕ ಎಂದು ಧೋನಿ ಮತ್ತೊಮ್ಮೆ ಸಾಬೀತುಪಡಿಸಿದರು.
ಇದು ವಿಧಿ ಲಿಖಿತ: ಪಾಂಡ್ಯ
ಫೈನಲಲ್ಲಿ ಸೋತ ಬಳಿಕ ಪ್ರತಿಕ್ರಿಯಿಸಿದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ‘ ಧೋನಿ ಟ್ರೋಫಿ ಗೆದ್ದಿದ್ದಕ್ಕೆ ಬಹಳ ಖುಷಿ ಇದೆ. ಇದು ವಿಧಿ ಲಿಖಿತ. ಧೋನಿ ವಿರುದ್ಧ ಸೋತರೆ ಬೇಸರವಾಗುವುದಿಲ್ಲ. ಒಳ್ಳೆಯ ಜನರಿಗೆ ಒಳ್ಳೆಯದ್ದೇ ಆಗುತ್ತದೆ. ನನಗೆ ಪರಿಚಯವಿರುವ ಶ್ರೇಷ್ಠ ವ್ಯಕ್ತಿಗಳಲ್ಲಿ ಧೋನಿ ಕೂಡಾ ಒಬ್ಬರು’ ಎಂದರು.