ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನೋ ಬಾಲ್ ತೀರ್ಪನ್ನು ಮೂರನೇ ಅಂಪೈರ್ ನೀಡಲಿದ್ದಾರೆ. ಈ ಹೊಸ ತೀರ್ಮಾನ ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ...
ದುಬೈ[ಡಿ.06]: ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ಬೌಲರ್‌ಗಳು ನೋಬಾಲ್ ಎಸೆದರೆ ಅದನ್ನು ಮೈದಾನದಲ್ಲಿರುವ ಅಂಪೈರ್ ಬದಲಿಗೆ ಮೂರನೇ ಅಂಪೈರ್ ನಿರ್ಧರಿಸಲಿದ್ದಾರೆ ಎಂದು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಘೋಷಿಸಿತು.
ಇಂಡೋ-ವಿಂಡೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ
ನೋಬಾಲ್ ನಿರ್ಧರಿಸಲು ತಂತ್ರಜ್ಞಾನದ ಸಹಾಯ ಪಡೆಯಲಿದ್ದು, 3ನೇ ಅಂಪೈರ್ ಪ್ರತಿ ಎಸೆತವನ್ನು ಗಮನಿಸಲಿದ್ದಾರೆ. ಇದೇ ಮೊದಲು 2016ರಲ್ಲಿ ಈ ಪ್ರಯೋಗ ನಡೆದಿತ್ತು. ಆದರೆ ಭಾರತ ಆಡುವ ಪಂದ್ಯದಲ್ಲಿ ಇಂತಹ ಪ್ರಯೋಗ ಇದೇ ಮೊದಲು. ಇದೇ ವರ್ಷ ಆಗಸ್ಟ್‌ನಲ್ಲಿ ನೋಬಾಲ್ ನಿರ್ಧಾರಿಸುವ ಜವಾಬ್ದಾರಿ 3ನೇ ಅಂಪೈರ್‌ನದ್ದು ಎಂದು ಐಸಿಸಿ ಘೋಷಿಸಿತ್ತು. ಆ ಪ್ರಯೋಗವನ್ನು ಸರಣಿಯಲ್ಲಿ ನಡೆಸಲಿದೆ. ಮುಂಬರುವ ದಿನಗಳಲ್ಲಿ ಕೆಲ ಆಯ್ದ ಸರಣಿಗಳಲ್ಲಿ ಈ ಪ್ರಯೋಗ ನಡೆಸಿ, ತಂತ್ರಜ್ಞಾನ ಸಹಾಯದ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ನೋಬಾಲ್ ಘೋಷಣೆ ಹೇಗೆ?
3ನೇ ಅಂಪೈರ್ ಪ್ರತಿ ಎಸೆತವನ್ನು ಟೀವಿ ಪರದೆಯಲ್ಲಿ ವೀಕ್ಷಿಸಲಿದ್ದಾರೆ. ನೋಬಾಲ್ ಎಂದು ನಿರ್ಧರಿಸಿದ ಬಳಿಕ ಆ ತೀರ್ಪನ್ನು ಮೈದಾನದಲ್ಲಿರುವ ಅಂಪೈರ್‌ಗೆ ತಿಳಿಸಲಿದ್ದಾರೆ. ಒಂದೊಮ್ಮೆ ನೋಬಾಲ್‌ನಲ್ಲಿ ವಿಕೆಟ್ ಪತನಗೊಂಡಿದ್ದರೆ, ಬ್ಯಾಟ್ಸ್‌ಮನ್‌ನನ್ನು ಕ್ರೀಸ್‌ಗೆ ಮರಳುವಂತೆ ಸೂಚಿಸಲಾಗುತ್ತದೆ. 3ನೇ ಅಂಪೈರ್‌ನ ಸೂಚನೆ ಇಲ್ಲದೆ ಮೈದಾನದಲ್ಲಿರುವ ಅಂಪೈರ್‌ಗಳು ನೋಬಾಲ್ ಘೋಷಿಸುವುದಿಲ್ಲ.