ಭಾರತದಲ್ಲಿ ಧೋನಿಗಿಂತ ದೊಡ್ಡ ಕ್ರಿಕೆಟಿಗ ಮತ್ತೊಬ್ಬರಿಲ್ಲ: ಹರ್ಭಜನ್ ಸಿಂಗ್

By Naveen KodaseFirst Published Apr 21, 2023, 5:18 PM IST
Highlights

* ಎಂ ಎಸ್ ಧೋನಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಹರ್ಭಜನ್ ಸಿಂಗ್
* ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಧೋನಿ
* ಭಾರತದಲ್ಲಿ ಧೋನಿಗಿಂತ ದೊಡ್ಡ ಕ್ರಿಕೆಟಿಗ ಮತ್ತೊಬ್ಬರಿಲ್ಲವೆಂದ ಭಜ್ಜಿ

ನವದೆಹಲಿ(ಏ.21): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗಿಂತ ದೊಡ್ಡ ಕ್ರಿಕೆಟಿಗ ಭಾರತದಲ್ಲಿ ಮತ್ತೊಬ್ಬರಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡವು 2007ರಲ್ಲಿ ನಡೆದ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಷ್ಟೇ ಅಲ್ಲದೇ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 5 ಬಾರಿ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 

ಇನ್ನು ಇತ್ತೀಚೆಗಷ್ಟೇ ಮಹೇಂದ್ರ ಸಿಂಗ್ ಧೋನಿ, ಐಪಿಎಲ್‌ನಲ್ಲಿ 200 ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಇದೀಗ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಏಪ್ರಿಲ್‌ 21ರಂದು ನಡೆಯಲಿರುವ ಪಂದ್ಯಕ್ಕೂ ಮುನ್ನ ಮಾತನಾಡಿರುವ ಹರ್ಭಜನ್ ಸಿಂಗ್, ಧೋನಿ ಅವರಿಗಿರುವಷ್ಟು ದೊಡ್ಡ ಫ್ಯಾನ್‌ಬೇಸ್ ಮತ್ತೊಬ್ಬರಿಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

" ಮಹೇಂದ್ರ ಸಿಂಗ್ ಧೋನಿ ಎನ್ನುವವರು ಒಬ್ಬರೆ, ಅವರಿಗೆ ಸರಿಸಾಟಿ ಮತ್ತೊಬ್ಬರಿಲ್ಲ. ಭಾರತದಲ್ಲಿ ಅವರಿಗಿಂತ ದೊಡ್ಡ ಕ್ರಿಕೆಟಿಗ ಮತ್ತೊಬ್ಬರಿಲ್ಲ. ಕೆಲವರು ಧೋನಿಯವರಿಗಿಂತಲೂ ಹೆಚ್ಚು ರನ್ ಬಾರಿಸಿರಬಹುದು. ಇನ್ನು ಕೆಲವರು ಅವರಿಗಿಂತ ಹೆಚ್ಚು ವಿಕೆಟ್ ಕಬಳಿಸಿರಬಹುದು. ಆದರೆ ಧೋನಿ ಅವರಿಗಿರುವ ಅಭಿಮಾನಿ ಬಳಗ ಮತ್ತೊಬ್ಬ ಕ್ರಿಕೆಟಿಗನಿಗಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

IPL 2023: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿಶೇಷ ವ್ಯಕ್ತಿಗೆ ಅರ್ಪಿಸಿದ ಮೊಹಮ್ಮದ್ ಸಿರಾಜ್‌..!

ಧೋನಿ ತಮ್ಮ ಅಭಿಮಾನಿಗಳನ್ನು ಹೃದಯದಲ್ಲಿಟ್ಟುಕೊಂಡಿದ್ದಾರೆ ಹಾಗೂ ಅವರ ಭಾವನೆಗಳನ್ನು ಗೌರವಿಸುತ್ತಾರೆ. ಅವರು ಯಾವಾಗಲು ಎಲ್ಲರನ್ನೂ ಇಷ್ಟಪಡುವ ಗುಣದವರು. ಅಭಿಮಾನಿಗಳ ಮೇಲೆ ಇದೇ ಪ್ರೀತಿ ಹಾಗೂ ವಿಶ್ವಾಸವನ್ನು ಕಳೆದ 15 ವರ್ಷಗಳಿಂದ ಮುಂದುವರೆಸಿಕೊಂಡು ಹೋಗಿದ್ದಾರೆ. ಅವರಲ್ಲಿ ಯಾವುದೂ ಬದಲಾಗಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆಡಿದ 5 ಪಂದ್ಯಗಳಲ್ಲಿ 3 ಗೆಲುವು ಹಾಗೂ 2 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇದೀಗ ತವರಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಚೆನ್ನೈ ತಂಡವು ಎದುರು ನೋಡುತ್ತಿದೆ.

click me!