
ವೆಲ್ಲಿಂಗ್ಟನ್: ಬೌಲರ್ಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದ ವೆಲ್ಲಿಂಗ್ಟನ್ನ ಬೇಸಿನ್ ರಿವರ್ಸ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಬ್ಯಾಟರ್ಗಳು ಉತ್ತಮ ಹೋರಾಟ ಪ್ರದರ್ಶಿಸಿ ಮೊದಲ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ. ದಾಖಲೆಯ ರನ್ ಕಲೆಹಾಕಿ, ಗೆಲುವಿನ ವಿಶ್ವಾಸದಲ್ಲಿದ್ದ ಭಾರತ ತಂಡ ಕೊನೆ ದಿನವಾದ ಸೋಮವಾರ ಬೌಲಿಂಗ್ನಲ್ಲಿ ಜಾದೂ ಮಾಡಲು ಸಾಧ್ಯವಾಗದೆ ಡ್ರಾಗೆ ತೃಪ್ತಿಪಟ್ಟುಕೊಂಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ 368 ರನ್ ಗಳಿಸಿದ್ದರೆ, ಭಾರತ 9 ವಿಕೆಟ್ಗೆ 720 ರನ್ ಕಲೆಹಾಕಿ 352 ರನ್ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಭಾನುವಾರ 45 ಓವರ್ ಆಡಿ 2 ವಿಕೆಟ್ ನಷ್ಟದಲ್ಲಿ 119 ರನ್ ಗಳಿಸಿದ್ದ ಕಿವೀಸ್, ಇನ್ನಿಂಗ್ಸ್ ಸೋಲು ತಪ್ಪಿಸಲು ಪಂದ್ಯದ 5ನೇ ದಿನ ಇನ್ನೂ 233 ರನ್ ಕಲೆಹಾಕಬೇಕಿತ್ತು. ಭಾರತಕ್ಕೆ ಗೆಲ್ಲಲು 8 ವಿಕೆಟ್ ಅಗತ್ಯವಿತ್ತು.
ದಿನದ ಮೊದಲ ಅವಧಿಯಲ್ಲಿ ಡೆವೋನ್ ಕಾನ್ವೇ(65) ವಿಕೆಟ್ ಕಿತ್ತ ವಾಷಿಂಗ್ಟನ್ ಸುಂದರ್ ಭಾರತದ ಆತ್ಮವಿಶ್ವಾಸ ಹೆಚ್ಚಿಸಿದರು. ಬಳಿಕ ರಚಿನ್ ರವೀಂದ್ರ(37), ಕನ್ನಡಿಗ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಔಟಾದರು. ಆಗ ಕಿವೀಸ್ ಸ್ಕೋರ್ 4 ವಿಕೆಟ್ಗೆ 139. ಟಾಮ್ ಬ್ಲಂಡೆಲ್ 15 ರನ್ ಗಳಿಸಿ ನಿರ್ಗಮಿಸಿದಾಗ ಕಿವೀಸ್ ಸ್ಕೋರ್ 176 ಆಗಿತ್ತು. ಪಂದ್ಯ ಡ್ರಾ ಸಾಧಿಸಬೇಕಿದ್ದರೆ ಕಿವೀಸ್ ಇನ್ನೂ 60 ಓವರ್ ಕ್ರೀಸ್ನಲ್ಲಿ ಇರಬೇಕಿತ್ತು.
6ನೇ ವಿಕೆಟ್ ಜೊತೆಯಾದ ಡ್ಯಾರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಭಾರತವನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿ ರಕ್ಷಣಾತ್ಮಕ ಆಟವಾಡಿ ವಿಕೆಟ್ ಉಳಿಸಿಕೊಂಡಿತು. ಮಿಚೆಲ್ 187 ಎಸೆತಗಳಲ್ಲಿ ಔಟಾಗದೆ 49 ರನ್ ಸಿಡಿಸಿದರೆ, ಫಿಲಿಪ್ಸ್ 126 ಎಸೆತಗಳನ್ನು ಎದುರಿಸಿ ಔಟಾಗದೆ 26 ರನ್ ಬಾರಿಸಿದರು. ಈ ಜೋಡಿ 259 ಎಸೆತಗಳಲ್ಲಿ 63 ರನ್ ಜತೆಯಾಟವಾಡಿ ಭಾರತಕ್ಕೆ ಗೆಲುವು ನಿರಾಕರಿಸಿತು. ತಂಡ 5 ವಿಕೆಟ್ಗೆ 239 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.
ಸೋಮವಾರದ ನಿಗದಿತ 90 ಓವರ್ ಆಟ ನಡೆಯಬೇಕಿತ್ತು. ಆದರೆ ಇನ್ನೂ 15 ಓವರ್ ಬಾಕಿ ಇರುವಾಗಲೇ ಭಾರತದ ನಾಯಕ ಶುಭ್ಮನ್ ಗಿಲ್ ಡ್ರಾಗೆ ಸಮ್ಮತಿಸಿದರು. ಕಿವೀಸ್ ಬ್ಯಾಟರ್ಗಳ ಜೊತೆ ಕೈಕುಲುಕಿ ಪಂದ್ಯ ಡ್ರಾ ಮಾಡಿಕೊಂಡರು. 15 ಓವರ್ ಆಡಿದರೂ ಉಳಿದ 5 ವಿಕೆಟ್ ಪಡೆಯುವುದು ಸಾಧ್ಯವಿಲ್ಲ ಎಂದುಕೊಂಡು ಅವಧಿಗೂ ಮುನ್ನವೇ ಡ್ರಾಗೆ ಒಪ್ಪಿಕೊಂಡರು.
ಪಂದ್ಯ ಡ್ರಾ ಆಗುತ್ತಿದ್ದಂತೆ ಟೀಂ ಇಂಡಿಯಾ ಕ್ಯಾಪ್ಟನ್ ಗಿಲ್ ವಿರುದ್ಧ ಆಕ್ರೋಶ ಹೊರ ಹಾಕಿರುವ ಮಾಜಿ ಆಟಗಾರ ಆರ್ ಅಶ್ವಿನ್, ಗಿಲ್ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಕ್ಯಾಪ್ಟನ್ ಆಗಿ ಇನ್ನು ಕಲಿಯಬೇಕಿರೋದು ಹೆಚ್ಚಿದೆ. ಆತ ಮಾಡಿದ ತಪ್ಪುಗಳಿಂದಲೇ ಟೀಂ ಇಂಡಿಯಾ ಗೆಲ್ಲುವ ಅವಕಾಶ ಮಿಸ್ ಆಗಿದೆ. ಗಿಲ್ ಹೊಸ ನಾಯಕ ಆಗಿರುವ ಕಾರಣ ಆತನಿಗೆ ಯಾರಾದರೂ ಒಬ್ಬರು ಮಾರ್ಗದರ್ಶನ ನೀಡಬೇಕು. ಈ ಹಿಂದೆ ವಿರಾಟ್ ಕೊಹ್ಲಿ ಕೂಡ ತಪ್ಪು ಮಾಡಿದ್ದರು. ಆದರೆ ಕೊಹ್ಲಿ ಅನುಸರಿಸಿದ್ದ ವಿಧಾನಗಳು ಅವರ ತಪ್ಪುಗಳನ್ನು ಮುಚ್ಚಿ ಹಾಕಿತ್ತು. ಯಾವುದೇ ಗೆಲುವಿನ ಹಂಬಲವಿಲ್ಲದೆ ಡ್ರಾ ಆಗುತ್ತಿದ್ದ ಪಂದ್ಯವನ್ನು ಆಸಕ್ತಿಯುತವಾಗಿ ಮಾಡಲು ಏನೋ ಒಂದು ಮಾಡುತ್ತಿದ್ದರು. ಭಾರತ ಆಟಗಾರರಲ್ಲಿ ಗೆಲ್ಲಬೇಕೆಂಬ ಭಾವನೆಯೇ ಕಾಣಲಿಲ್ಲ. ಗೆಲುವಿಗಾಗಿ ಪ್ರಯತ್ನ ಕೂಡ ಮಾಡಿಲ್ಲ. ಕೊನೆಯ ಕ್ಷಣವರೆಗೂ ಭಾರತ ಹೋರಾಟ ಮಾಡಬೇಕಿತ್ತು.
ಆನ್ ಫೀಲ್ಡ್ನಲ್ಲಿ ಬ್ಯಾಟ್ ಮಾಡುತ್ತಿದ್ದ ಡ್ಯಾರಿಲ್ ಮಿಚೆಲ್ ಬ್ಯಾಟ್ ಮಾಡುತ್ತಾ ಪದೇ ಪದೇ ಕ್ಯಾಪ್ಟನ್ ಬಳಿ, ಆಟಗಾರರ ಹೋಗಿ ಮಾತನಾಡುತ್ತಿದ್ದರು. ಎರಡು ತಂಡದ ಆಟಗಾರರು ನಗು ನಗುತ್ತಾ ಮಾತನಾಡುತ್ತಿದ್ದರು. ನಮ್ಮ ಕೈ ಮೇಲೆ ಆಗಬೇಕು ಅಂದರೆ, ನಮ್ಮ ಟಾರ್ಗೆಟ್ ಕಡೆ ಮಾತ್ರ ಗಮನಿಸಬೇಕು. ಇಲ್ಲ ಎಂದರೆ ಬ್ಯಾಟರ್ಗಳು ಯಾವುದೇ ಒತ್ತಡವಿಲ್ಲದೆ, ಆರಾಮಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಅಶ್ವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
A draw it is in the Wellington Test.
Both teams share the honours after a hard-fought contest.
#TeamIndia will now aim to win the series in the 2nd #NZvIND Test in Christchurch 🇮🇳
Scorecard ▶️ https://t.co/SaMcNXtAVG https://t.co/GF8A2ALHbD
— BCCI (@BCCI) November 23, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.