ಇಂಡೋ-ಕಿವೀಸ್ ಟಿ20: ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ

By Suvarna News  |  First Published Jan 24, 2020, 3:49 PM IST

ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನ ಸೋಲಿಗೆ ಪ್ರತಿಕಾರ ತೀರಿಸಿಕೊಂಡಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಆಕ್ಲೆಂಡ್(ಜ.24): ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನೊಂದಿಗೆ ವಿರಾಟ್ ಪಡೆ 2019ರ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿದೆ.

1st T20I. It's all over! India won by 6 wickets https://t.co/5NdtfFsdlA

— BCCI (@BCCI)

204 ರನ್‌ಗಳ ಕಠಿಣ ಗುರಿ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಎರಡನೇ ಓವರ್‌ನಲ್ಲೇ  ರೋಹಿತ್ ಶರ್ಮಾ ವಿಕೆಟ್‌ ಕಳೆದುಕೊಂಡ ಭಾರತ ಆಘಾತಕ್ಕೊಳಗಾಯಿತು. ಆ ಬಳಿಕ ಎರಡನೇ ವಿಕೆಟ್‌ಗೆ ರಾಹುಲ್ ಜೊತೆಗೂಡಿದ ನಾಯಕ ಕೊಹ್ಲಿ ಉತ್ತಮ ಜತೆಯಾಟ ನಿಭಾಯಿಸಿದರು. ಈ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

Latest Videos

ಕೇನ್‌, ಮನ್ರೋ ಫಿಫ್ಟಿ: ಟೀಂ ಇಂಡಿಯಾಗೆ ಕಠಿಣ ಗುರಿ ನೀಡಿದ ಕಿವೀಸ್

ಎರಡನೇ ವಿಕೆಟ್‌ಗೆ ಈ ಜೋಡಿ 99 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಕೇವಲ 27 ಎಸೆತಗಳನ್ನು ಎದುರಿಸಿದ ರಾಹುಲ್ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿ ಇಶ್ ಸೋದಿಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ನಾಯಕ ಕೊಹ್ಲಿ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 45 ರನ್ ಬಾರಿಸಿ ಕೇವಲ 5 ರನ್ ಅಂತರದಲ್ಲಿ ಅರ್ಧಶತಕವಂಚಿತರಾದರು. ಕೊಹ್ಲಿ ವಿಕೆಟ್ ಒಪ್ಪಿಸಿದಾಗ ಟೀಂ ಇಂಡಿಯಾ ಗೆಲ್ಲಲು ಇನ್ನೂ 83 ರನ್‌ಗಳ ಅವಶ್ಯಕತೆಯಿತ್ತು. ಶಿವಂ ದುಬೆ ಕೇವಲ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ಭಾರತದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು.

ಆಸರೆಯಾದ ಅಯ್ಯರ್-ಪಾಂಡೆ ಜೋಡಿ: ರಾಹುಲ್-ಕೊಹ್ಲಿ ಜತೆಯಾಟದ ಬಳಿಕ ಟೀಂ ಇಂಡಿಯಾ ಪರ ಉತ್ತಮ ಜತೆಯಾಟ ಮೂಡಿ ಬರಲಿಲ್ಲ. ಆದರೆ 5ನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್-ಮನೀಶ್ ಪಾಂಡೆ 62 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. ಶ್ರೇಯಸ್ ಅಯ್ಯರ್ 58 ರನ್ ಬಾರಿಸಿದರೆ, ಮನೀಶ್ ಪಾಂಡೆ 14 ರನ್ ಸಿಡಿಸಿ ಅಜೇಯರಾಗುಳಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಕಾಲಿನ್ ಮನ್ರೋ, ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಆಕರ್ಷಕ ಅರ್ಧಶತಕಗಳ ನೆರವಿನಿಂದ 203 ರನ್ ಬಾರಿಸಿತ್ತು.

ಸಂಕ್ಷಿಪ್ತ ಸ್ಕೋರ್:

ಭಾರತ: 204/4

ಶ್ರೇಯಸ್ ಅಯ್ಯರ್ 58

ಕೆ.ಎಲ್. ರಾಹುಲ್: 56

ನ್ಯೂಜಿಲೆಂಡ್: 203/5

ಕಾಲಿನ್ ಮನ್ರೋ: 59

ರಾಸ್ ಟೇಲರ್: 54*

(ಭಾರತಕ್ಕೆ 6 ವಿಕೆಟ್‌ಗಳ ಜಯ, 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ )

 

ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!