Ind vs SA ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಭಾರತ ತಂಡ ಆಯ್ಕೆ, ಯುವ ಆಟಗಾರರಿಗೆ ಸ್ಥಾನ..?

By Naveen KodaseFirst Published May 22, 2022, 9:56 AM IST
Highlights

* ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಇಂದು ಟೀಂ ಇಂಡಿಯಾ ಆಯ್ಕೆ

* ಜೂನ್‌ 9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ

* ಮುಂಬೈ ಪರ ಮಿಂಚುತ್ತಿರುವ ತಿಲಕ್‌ ವರ್ಮಾ ಕೂಡಾ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ

ನವದೆಹಲಿ(ಮೇ.22): ಜೂನ್‌ 9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ತವರಿನ ಟಿ20 ಸರಣಿಗೆ ಭಾನುವಾರ ಭಾರತ ತಂಡದ ಆಯ್ಕೆ (Indian Cricket Team Selection) ನಡೆಯಲಿದ್ದು, ಐಪಿಎಲ್‌ನಲ್ಲಿ ಮಿಂಚುತ್ತಿರುವ ಯುವ ಆಟಗಾರರಿಗೆ ಸ್ಥಾನ ಸಿಗುವ ನಿರೀಕ್ಷೆಯಿದೆ. ನಿರಂತರ ಕ್ರಿಕೆಟ್‌ನಿಂದ ದಣಿದಿರುವ ಹಿರಿಯ ಆಟಗಾರರಿಗೆ ಸರಣಿಯಿಂದ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ಹೊಸ ಮುಖಗಳು ಈ ಬಾರಿ ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ವೇಗದ ಬೌಲರ್‌ಗಳಾದ ಉಮ್ರಾನ್‌ ಮಲಿಕ್‌ ಹಾಗೂ ಮೋಹ್ಸಿನ್‌ ಖಾನ್‌ ಆಯ್ಕೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಮುಂಬೈ ಪರ ಮಿಂಚುತ್ತಿರುವ ತಿಲಕ್‌ ವರ್ಮಾ ಕೂಡಾ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ರೋಹಿತ್‌ ಶರ್ಮಾ (Rohit Sharma) ಅನುಪಸ್ಥಿತಿಯಲ್ಲಿ ಅನುಭವಿ ಆಟಗಾರ ಶಿಖರ್‌ ಧವನ್‌ (Shikhar Dhawan) ಅಥವಾ ಚೊಚ್ಚಲ ಯತ್ನದಲ್ಲೇ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡವನ್ನು ಐಪಿಎಲ್‌ ಪ್ಲೇ-ಆಫ್ಸ್‌ಗೇರಿಸಿರುವ ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕನಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಫಿನಿಶರ್‌ ಹೊಣೆ ನಿಭಾಯಿಸಲು ಸೂಕ್ತ ಎನಿಸಿಕೊಂಡಿರುವ ಹಿರಿಯ ಬ್ಯಾಟರ್‌ ದಿನೇಶ್‌ ಕಾರ್ತಿಕ್‌ 3 ವರ್ಷಗಳ ಬಳಿಕ ತಂಡಕ್ಕೆ ಮರಳುವ ಕಾತರದಲ್ಲಿದ್ದಾರೆ. ಹಲವು ವರ್ಷ ತಂಡದ ಪರ ಒಟ್ಟಿಗೇ ಆಡಿದ್ದ ಸ್ಪಿನ್‌ ಜೋಡಿ ಯಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌ ಕೂಡಾ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

Latest Videos

ಜೂನ್ 15 ಅಥವಾ 16ರ ವೇಳೆಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇರುವುದರಿಂದಾಗಿ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ರಾಹುಲ್ ದ್ರಾವಿಡ್ ಕೂಡಾ ಇಂಗ್ಲೆಂಡ್‌ ಪ್ರವಾಸ ಮಾಡಲಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಎದುರಿನ ತವರಿನ ಟಿ20 ಸರಣಿಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಹಂಗಾಮಿ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

IPL 2022 ಡೆಲ್ಲಿ ವಿರುದ್ಧ ಮುಂಬೈಗೆ ಗೆಲುವು, ಆರ್‌ಸಿಬಿಗೆ ಸಿಕ್ತು ಪ್ಲೇ ಆಫ್ ಚಾನ್ಸ್!

ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಟೀಂ ಇಂಡಿಯಾದ ಹಲವು ತಾರಾ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಬೇಕಾದ ಒತ್ತಡಕ್ಕೆ ಸಿಲುಕಿದೆ. ಈಗಾಗಲೇ ದೀಪಕ್ ಚಹರ್, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಟಿ ನಟರಾಜನ್, ವಾಷಿಂಗ್ಟನ್ ಸುಂದರ್ ಹಾಗೂ ಹರ್ಷಲ್ ಪಟೇಲ್ ಗಾಯಗೊಂಡು ಐಪಿಎಲ್‌ನಿಂದ ಹೊರಗುಳಿದಿದ್ದಾರೆ.  ಇನ್ನು ವರ್ಕ್‌ಲೋಡ್‌ ಮ್ಯಾನೇಜ್‌ ಮಾಡುವ ಉದ್ದೇಶದಿಂದ ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ರಿಷಭ್ ಪಂತ್, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.   

ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಸರಣಿಯ ಮೊದಲ ಪಂದ್ಯ ನವದೆಹಲಿಯಲ್ಲಿ ನಡೆಯಲಿದ್ದು, ಉಳಿದ 4 ಪಂದ್ಯಗಳಿಗೆ ಕಟಕ್‌(ಜೂ.12), ವಿಶಾಖಪಟ್ಟಣಂ(ಜೂ.14), ರಾಜ್‌ಕೋಟ್‌(ಜೂ.17), ಬೆಂಗಳೂರು(ಜೂ.19) ಆತಿಥ್ಯ ವಹಿಸಲಿದೆ.

click me!