
ಮುಂಬೈ(ನ.25): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಮಣಿಸಿದ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಾಂಗರೂ ಪಡೆ 6 ವಿಕೆಟ್ ಭರ್ಜರಿ ಜಯ ಸಾಧಿಸುವ ಮೂಲಕ ಆರನೇ ಬಾರಿಗೆ ಏಕದಿನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಇದರ ಬೆನ್ನಲ್ಲೇ ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಪ್ರತಿಷ್ಠಿತ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಉದ್ದಟತನ ಪ್ರದರ್ಶಿಸಿದ್ದರು. ಮಾರ್ಷ್ ಅವರ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಇದೀಗ ಈ ಘಟನೆಯ ಕುರಿತಂತೆ ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡಾ ಪ್ರತಿಕ್ರಿಯೆ ನೀಡಿದ್ದು, ಮಾರ್ಷ್ ಅವರ ನಡೆ ನನಗೆ ನೋವುಂಟು ಮಾಡಿತು ಎಂದಿದ್ದಾರೆ.
ಹೌದು, ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದಂತೆಯೇ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೆಲುವಿನ ಸಂಭ್ರಮಾಚರಣೆಯ ಹಲವು ಫೋಟೋಗಳನ್ನು ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಈ ಪೈಕಿ ಒಂದು ಫೋಟೋದಲ್ಲಿ ಮಿಚೆಲ್ ಮಾರ್ಷ್ ಸೋಫಾ ಮೇಲೆ ಕುಳಿತು ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಟ್ಟುಕೊಂಡು ಫೋಸ್ ಕೊಟ್ಟಿರುವ ಫೋಟೋ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಫೋಟೋದ ಬಗ್ಗೆ ಭಾರತದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದಿದ್ದವು.
ಡಿಸೆಂಬರ್ 09ರಂದು ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು; ಇಲ್ಲಿದೆ RCB ರೀಟೈನ್ ಮಾಡಿಕೊಂಡ ಡೀಟೈಲ್ಸ್
ಇದೀಗ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಮಿ, "ನನಗಂತೂ ಇದು ನೋವುಂಟು ಮಾಡಿತು. ಈ ಟ್ರೋಫಿಗಾಗಿಯೇ ಎಲ್ಲಾ ತಂಡಗಳು ಕಾದಾಟ ನಡೆಸುತ್ತವೆ. ಈ ಟ್ರೋಫಿಯನ್ನು ತಲೆಮೇಲೆ ಹೊತ್ತು ಸಂಭ್ರಮಿಸಲು ಎಲ್ಲಾ ತಂಡಗಳು ಎದುರು ನೋಡುತ್ತಿರುತ್ತವೆ. ಆದರೆ ಅವರು ಟ್ರೋಫಿ ಮೇಲೆ ಕಾಲಿಟ್ಟಿದ್ದು ನನಗಂತೂ ಸರಿಕಾಣಲಿಲ್ಲ' ಎಂದು ಅನುಭವಿ ವೇಗಿ ಮೊಹಮ್ಮದ್ ಶಮಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಲೆಜೆಂಡ್ ಕ್ರಿಕೆಟರ್ ಆದಮೇಲೆ ಕೊಹ್ಲಿ ಹೆಗಲೇರಿದೆಯಾ ಬ್ಯಾಡ್‌ಲಕ್?
ಶಮಿ ಪಾಲಿಗೆ ಸ್ಮರಣೀಯವಾದ ವಿಶ್ವಕಪ್: ಅನುಭವಿ ವೇಗಿ ಮೊಹಮ್ಮದ್ ಶಮಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಸಾಧನೆ ಮಾಡುವ ಮೂಲಕ ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆಡಿದ ಕೇವಲ 7 ಪಂದ್ಯಗಳಲ್ಲಿ ಶಮಿ 24 ವಿಕೆಟ್ ಕಬಳಿಸಿ ಭಾರತ ತಂಡವು ಫೈನಲ್ ಪ್ರವೇಶಿಸಲು ಮಹತ್ವದ ಪಾತ್ರ ವಹಿಸಿದ್ದರು. ಲೀಗ್ ಹಂತದ ಆರಂಭಿಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಶಮಿ, ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದ ಬಳಿಕ ತಂಡದ ಪ್ರಮುಖ ವೇಗಿಯಾಗಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಇದಾದ ಬಳಿಕ ಶಮಿ ಮಾರಕ ದಾಳಿ ನಡೆಸಿ ತಾವೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣ ಮಾಡುವಲ್ಲಿ ಯಶಸ್ವಿಯಾದರು. ಶಮಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಭಾರತ ಈ ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದೇ ಹೋದದ್ದು ಮಾತ್ರ ವಿಪರ್ಯಾಸವೇ ಸರಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.