ಗಾಯಗೊಂಡ ಮೊಹಮ್ಮದ್ ಶಮಿಗೆ 6 ವಾರ ವಿಶ್ರಾಂತಿ..!

By Suvarna NewsFirst Published Dec 23, 2020, 3:50 PM IST
Highlights

ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಡಿಲೇಡ್(ಡಿ.23): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ವೈದ್ಯರು 6 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬ್ಯಾಟಿಂಗ್ ಮಾಡುತ್ತಿದ್ದಾಗ ಪ್ಯಾಟ್ ಕಮಿನ್ಸ್‌ ಬೌಲಿಂಗ್‌ನಲ್ಲಿ ಚೆಂಡು ನೇರವಾಗಿ ಶಮಿ ಕೈಗೆ ಬಡಿದಿತ್ತು. ಪರಿಣಾಮ ಶಮಿ ರಿಟೈರ್ಡ್‌ ಹರ್ಟ್‌ ತೆಗೆದುಕೊಂಡು ಪೆವಿಲಿಯನ್ ಸೇರಿದ್ದರು. ಇದರೊಂದಿಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿಕೊಂಡಿತ್ತು.

ಮೊಹಮ್ಮದ್ ಶಮಿ ಕೈ ಮೂಳೆಗೆ ಬಲವಾದ ಪೆಟ್ಟು ಬಡಿದಿದ್ದರಿಂದ ಮೆಲ್ಬರ್ನ್, ಸಿಡ್ನಿ ಹಾಗೂ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳಿಂದ ಹೊರಬಿದ್ದಿದ್ದರು. ಮೊಹಮ್ಮದ್ ಶಮಿ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಿದಾಗ ಮೊಳಕೈಗೆ ಬಲವಾದ ಪೆಟ್ಟುಬಿದ್ದಿರುವುದು ಖಚಿತವಾಗಿತ್ತು. ಬುಧವಾರ(ಡಿ.23) ಶಮಿ ಆಸ್ಟ್ರೇಲಿಯಾದಿಂದ ತವರಿಗೆ ಮರಳಲಿದ್ದು, ಮತ್ತೆ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ಮೊಹಮ್ಮದ್ ಶಮಿಗೆ 6 ವಾರಗಳ ಕಾಲ ವಿಶ್ರಾಂತಿ ಪಡೆಯಲು ತಜ್ಞರು ಸೂಚಿಸಿದ್ದಾರೆ. ಬುಧವಾರ ಶಮಿ ಆಸ್ಟ್ರೇಲಿಯಾ ತೊರೆಯಲಿದ್ದಾರೆ ಎಂದು ದ ಸ್ಟೇಟ್ಸ್‌ಮನ್‌ ವರದಿ ಮಾಡಿದೆ. ಇನ್ನು ಶಮಿ ಜನವರಿ ತಿಂಗಳಂತ್ಯದ ವೇಳೆಗೆ ಸಂಪೂರ್ಣ ಫಿಟ್‌ ಆಗುವ ವಿಶ್ವಾಸವಿದ್ದು, ಫೆಬ್ರವರಿ 05ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ತವರಿನ ಸರಣಿಗೆ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಪಿಂಕ್ ಬಾಲ್‌ ಟೆಸ್ಟ್‌ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ; ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್..!

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಿಂದ ಶಮಿ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಇಶಾಂತ್ ಶರ್ಮಾ ಕೂಡಾ ಮಹತ್ವದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇನ್ನು ಉಮೇಶ್ ಯಾದವ್ ಕೂಡಾ ಉತ್ತಮ ಲಯದಲ್ಲಿಲ್ಲ. ಶಮಿ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಮೊಹಮ್ಮದ್ ಶಮಿ 2018-19ರ ಆಸ್ಟ್ರೇಲಿಯಾ ಸರಣಿಯಲ್ಲಿ ಟೀಂ ಇಂಡಿಯಾ ಕಬಳಿಸಿದ ಒಟ್ಟು 48  ವಿಕೆಟ್‌ಗಳ ಪೈಕಿ ಶಮಿ 16 ಪಡೆದಿದ್ದರು.

2018ರಲ್ಲಿ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಈ ತ್ರಿವಳಿ ವೇಗಿಗಳು ಒಟ್ಟಾಗಿ 136 ವಿಕೆಟ್‌ ಕಬಳಿಸುವ ಮೂಲಕ ಮೈಕಲ್ ಹೋಲ್ಡಿಂಗ್ಸ್, ಮಾಲ್ಕಮ್ ಮಾರ್ಷಲ್ ಹಾಗೂ ಜೊಯೆಲ್ ಗಾರ್ನರ್ ಹೆಸರಿನಲ್ಲಿದ್ದ(130 ವಿಕೆಟ್ 1984ರಲ್ಲಿ) ದಾಖಲೆಯನ್ನು ಅಳಿಸಿಹಾಕಿದ್ದರು ಎನ್ನುವುದನ್ನು ಸ್ಮರಿಸಬಹುದಾಗಿದೆ.

click me!