ಡೆಲ್ಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆಯುತ್ತಿದೆ ಎನ್ನಲಾದ ಸ್ವಜನಪಕ್ಷಪಾತದ ವಿರುದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಡಿ.23): ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ತಮ್ಮ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಪ್ರತಿಮೆಯನ್ನು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪ್ರತಿಷ್ಟಾಪಿಸಲು ನಿರ್ಧರಿಸಿರುವ ಕ್ರಮವನ್ನು ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ಬಲವಾಗಿ ಖಂಡಿಸಿದ್ದಾರೆ. ಮುಂದುವರೆದು ತಮ್ಮ ಹೆಸರಿನಲ್ಲಿರುವ ವೀಕ್ಷಕರ ಗ್ಯಾಲರಿಯ ಹೆಸರನ್ನು ತೆಗೆದುಹಾಕಿ ಎಂದು ಬೇಡಿ ಅಸಮಾಧಾನ ಹೊರಹಾಕಿದ್ದಾರೆ.
ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಸದಸ್ಯರೂ ಆಗಿರುವ ಬಿಷನ್ ಸಿಂಗ್ ಬೇಡಿ, ಡಿಡಿಸಿಎ ನಡೆಸುತ್ತಿರುವ ಸ್ವಜನಪಕ್ಷಪಾತದ ಬಗ್ಗೆ ಕಿಡಿಕಾರಿದ್ದಾರೆ. ಡಿಡಿಸಿಎ ನಿರ್ಧಾರ ಖಂಡಿಸಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಡಿಡಿಸಿಎಯ ಹಾಲಿ ಅಧ್ಯಕ್ಷ ಹಾಗೂ ದಿವಂಗತ ಅರುಣ್ ಜೇಟ್ಲಿ ಪುತ್ರನಾಗಿರು ರೋಹನ್ ಜೇಟ್ಲಿಗೆ ದೀರ್ಘವಾದ ಪತ್ರ ಬರೆದಿದ್ದು, ಡಿಡಿಸಿಎ ಕ್ರಿಕೆಟಿಗರಿಗಿಂತ ಆಡಳಿತಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
undefined
1999ರಿಂದ 2013ರ ಅವಧಿಯಲ್ಲಿ ಅರುಣ್ ಜೇಟ್ಲಿ ಡಿಡಿಸಿಎಯ ಚುಕ್ಕಾಣಿ ಹಿಡಿದಿದ್ದರು. 14 ವರ್ಷಗಳ ಸಂಸ್ಥೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಸ್ಮರಣಾರ್ಥವಾಗಿ ಡಿಡಿಸಿಎ 6 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲು ಡಿಡಿಸಿಎ ಮುಂದಾಗಿದೆ.
ಫಿರೋಜ್ ಶಾ ಕೋಟ್ಲಾ ಮೈದಾನ ಇನ್ಮುಂದೆ ಅರುಣ್ ಜೇಟ್ಲಿ ಸ್ಟೇಡಿಯಂ..!
ಒಬ್ಬ ವ್ಯಕ್ತಿಯಾಗಿ ಇಲ್ಲಿಯವರೆಗೆ ಸಹನೆ ಹಾಗೂ ತಾಳ್ಮೆಯಿಂದ ಇದ್ದಿದ್ದಕ್ಕೆ ನನಗೆ ನನ್ನ ಮೇಲೆ ಹೆಮ್ಮೆಯಿದೆ. ಡಿಡಿಸಿಎ ನಿಜಕ್ಕೂ ನನ್ನ ತಾಳ್ಮೆಯನ್ನು ಪರೀಕ್ಷಿಸಿದೆ. ನಾನು ಈ ರೀತಿಯ ಕಠಿಣ ನಿರ್ಧಾರ ತಾಳಲು ಡಿಡಿಸಿಎ ಕಾರಣ ಎಂದು ಬೇಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2017ರಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದ ಗ್ಯಾಲರಿಗೆ ಬಿಷನ್ ಸಿಂಗ್ ಬೇಡಿ ಹೆಸರಿಡಲಾಗಿತ್ತು. ಅಧ್ಯಕ್ಷರೇ ತಕ್ಷಣವೇ ಗ್ಯಾಲರಿಗೆ ನನ್ನ ಹೆಸರನ್ನು ಅಳಿಸಿ ಹಾಕಿ. ನಾನು ಡಿಡಿಸಿಎಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
2019ರ ಆಗಸ್ಟ್ ತಿಂಗಳಿನಲ್ಲಿ ಫಿರೋಜ್ ಶಾ ಕೋಟ್ಲಾ ಮೈದಾನದ ಹೆಸರನ್ನು ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಬದಲಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.