ಲಂಕಾ ಸರಣಿಗೆ ನಾಯಕನಾಗಲು ಧವನ್ ಪರ ಬ್ಯಾಟ್‌ ಬೀಸಿದ ದೀಪಕ್ ಚಹಾರ್

By Suvarna NewsFirst Published May 22, 2021, 1:56 PM IST
Highlights

* ಜುಲೈನಲ್ಲಿ ಲಂಕಾ ಪ್ರವಾಸ ಕೈಗೊಳ್ಳಲಿದೆ ಟೀಂ ಇಂಡಿಯಾ

* ಲಂಕಾ ಸರಣಿಗೆ ಧವನ್ ನಾಯಕರಾದರೇ ಬೆಸ್ಟ್ ಎಂದ ದೀಪಕ್ ಚಹರ್

* ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಸರಣಿ ಆಡಲಿರುವ ಭಾರತ

ನವದೆಹಲಿ(ಮೇ.22): ಮುಂಬರುವ ಶ್ರೀಲಂಕಾ ಪ್ರವಾಸದ ವೇಳೆ ಅನುಭವಿ ಕ್ರಿಕೆಟಿಗ ಶಿಖರ್ ಧವನ್‌ ಭಾರತ ತಂಡದ ನಾಯಕತ್ವ ವಹಿಸುವುದು ಒಳ್ಳೆಯ ತೀರ್ಮಾನ ಎನಿಸಲಿದೆ ಎಂದು ಯುವ ವೇಗಿ ದೀಪಕ್ ಚಹಾರ್ ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವಾಗಲೇ, ಮತ್ತೊಂದೆಡೆ ಭಾರತದ ಸೀಮಿತ ಓವರ್‌ ತಜ್ಞ ಆಟಗಾರರನ್ನೊಳಗೊಂಡ ತಂಡ ಜುಲೈನಲ್ಲಿ ಶ್ರೀಲಂಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಗೆ ನಾಯಕ ಯಾರಾಗಬೇಕು ಎನ್ನುವ ಬಿಸಿಬಿಸಿ ಚರ್ಚೆ ಜೋರಾಗುತ್ತಿದೆ. ಲಂಕಾ ಸರಣಿಗೆ ಟೀಂ ಇಂಡಿಯಾ ಮುನ್ನಡೆಸಲು ಶಿಖರ್ ಧವನ್‌, ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್‌ ಪಾಂಡ್ಯ ಪ್ರಬಲ ಸ್ಪರ್ಧಿಗಳೆನಿಸಿದ್ದಾರೆ. 

ಲಂಕಾ ಸರಣಿಗೆ ನಾಯಕರಾಗಲು ಶಿಖರ್ ಧವನ್ ಉತ್ತಮ ಆಯ್ಕೆ ಎನಿಸಲಿದ್ದಾರೆ. ಧವನ್ ಭಾರತ ಪರ ದೀರ್ಘಕಾಲದಿಂದ ಆಡುತ್ತಾ ಬಂದಿದ್ದಾರೆ ಹಾಗೂ ಅವರಿಗೆ ಸಾಕಷ್ಟು ಅನುಭವ ಇದೆ. ನನ್ನ ಪ್ರಕಾರ ಅನುಭವಿ ಆಟಗಾರರಾದವರು ತಂಡವನ್ನು ಮುನ್ನಡೆಸುವುದು ಒಳ್ಳೆಯ ಅಯ್ಕೆ. ಏಕೆಂದರೆ ಹಿರಿಯ ಆಟಗಾರರಿಗೆ ಕಿರಿಯರು ಗೌರವ ಕೊಡುತ್ತಾರೆ ಹಾಗೂ ಅವರ ಮಾತುಗಳನ್ನು ಕೇಳುತ್ತಾರೆ. ಆಟಗಾರರು ಯಾವಾಗಲೂ ನಾಯಕನಿಗೆ ಗೌರವ ಕೊಡಬೇಕು. ಹೀಗಾಗಿ ಧವನ್ ಲಂಕಾ ಪ್ರವಾಸಕ್ಕೆ ಉತ್ತಮ ಆಯ್ಕೆಯಾಗಬಲ್ಲರು ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ದೀಪಕ್ ಚಹಾರ್ ಅಭಿಪ್ರಾಯಪಟ್ಟಿದ್ದಾರೆ.

ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಆಯ್ಕೆ

ದೀಪಕ್ ಚಹಾರ್ ಲಂಕಾ ಪ್ರವಾಸದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಜತೆಗೆ ಹೊಸ ಚೆಂಡಿನೊಂದಿಗೆ ದಾಳಿ ನಡೆಸುವ ಸಾಧ್ಯತೆಯಿದೆ. ಭುವಿ, ದೀಪಕ್‌ ಚಹಾರ್ ಮಾತ್ರವಲ್ಲದೇ ನವದೀಪ್ ಸೈನಿ ಕೂಡಾ ಟೀಂ ಇಂಡಿಯಾ ವೇಗದ ಬೌಲಿಂಗ್ ಪಡೆ ಕೂಡಿಕೊಳ್ಳುವ ಸಾಧ್ಯತೆಯಿದೆ.

ಭಾರತ 13 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಿರುವ ದೀಪಕ್‌ ಚಹಾರ್ ಇದುವರೆಗೂ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ. ತಮ್ಮ ಕರಾರುವಕ್ಕಾದ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬು ಮಾಡುವ ಸಾಮರ್ಥ್ಯವಿರುವ ಚಹಾರ್‌ಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಕ್ ಚಹಾರ್, ಟೆಸ್ಟ್‌ ಕ್ರಿಕೆಟ್‌ ಆಡುವುದು ನನ್ನ ಜೀವನದ ಪರಮ ಗುರಿಯಾಗಿದೆ. ನನಗೆ ಚಂಡನ್ನು ಸ್ವಿಂಗ್ ಮಾಡುವುದು ಹೇಗೆಂದು ಕರಗತವಾಗಿದೆ. ನಮ್ಮ ತಂಡ ಟೆಸ್ಟ್‌ ಪಂದ್ಯವನ್ನಾಡಲು ಇಂಗ್ಲೆಂಡ್‌ ಪ್ರವಾಸಕ್ಕೆ ಸಜ್ಜಾಗಿದೆ. ಅವರಿಗೆಲ್ಲಾ ಶುಭ ಹಾರೈಸುತ್ತೇನೆ. ಮುಂದೊಂದು ದಿನ ಆಯ್ಕೆಗಾರರು ನನಗೂ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡುವ ನಿರೀಕ್ಷೆಯಿದೆ. ನಾನು ದೇಶದ ಪರ ಟೆಸ್ಟ್‌ ಪಂದ್ಯವನ್ನಾಡಲು ಎದುರು ನೋಡುತ್ತಿದ್ದೇನೆ ಎಂದು ದೀಪಕ್ ಚಹಾರ್ ಹೇಳಿದ್ದಾರೆ.
 

click me!