ಜಿಂಬಾಬ್ವೆ ಸರಣಿಗೆ ನಾಯಕತ್ವದಿಂದ ಕೆಳಗಿಳಿಸಿದ್ದರ ಬಗ್ಗೆ 'ಗಬ್ಬರ್ ಸಿಂಗ್' ಧವನ್ ಹೇಳಿದ್ದೇನು..?

By Naveen KodaseFirst Published Nov 24, 2022, 3:40 PM IST
Highlights

ಭಾರತ-ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿಗೆ ಕ್ಷಣಗಣನೆ
ನವೆಂಬರ್ 25ರಿಂದ ಮೂರು ಪಂದ್ಯಗಳ ಏಕದಿನ ಸರಣಿ
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಲಿರುವ ಶಿಖರ್ ಧವನ್

ವೆಲ್ಲಿಂಗ್ಟನ್‌(ನ.24): ನ್ಯೂಜಿಲೆಂಡ್ ವಿರುದ್ದ ಟಿ20 ಸರಣಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ, ಇದೀಗ ಕಿವೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೇಲೆ ಕಣ್ಣಿಟ್ಟಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಏಕದಿನ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. 2022ರಲ್ಲಿಯೇ ಧವನ್ ಮೂರನೇ ಬಾರಿಗೆ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ಈ ಮೊದಲು 2022ರಲ್ಲಿಯೇ ಶಿಖರ್ ಧವನ್‌, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಇನ್ನು ಜಿಂಬಾಬ್ವೆ ಪ್ರವಾಸಕ್ಕೂ ಏಕದಿನ ಸರಣಿಗೆ ಶಿಖರ್ ಧವನ್‌ಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಧವನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಕೆ ಎಲ್ ರಾಹುಲ್‌ಗೆ ಭಾರತ ಏಕದಿನ ತಂಡದ ನಾಯಕ ಪಟ್ಟ ಕಟ್ಟಲಾಯಿತು. ಇದೀಗ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿರುವ ಶಿಖರ್ ಧವನ್‌ಗೆ ಈ ಪ್ರಶ್ನೆ ಕೇಳಲಾಯಿತು.

ಈ ಪ್ರಶ್ನೆಗೆ ಉತ್ತರಿಸಿದ ಧವನ್, " ನೀವು ತುಂಬಾ ಒಳ್ಳೆಯ ಪ್ರಶ್ನೆಯನ್ನು ಕೇಳಿದಿರಿ. ಈ ಹಂತದಲ್ಲಿ ನಾನು ಭಾರತ ತಂಡವನ್ನು ಮುನ್ನಡೆಸಲು ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಅದರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಇದು ಸವಾಲು ಕೂಡಾ ಹೌದು. ಯುವ ಆಟಗಾರರನ್ನು ಇಟ್ಟುಕೊಂಡು ನಾವು ಸರಣಿಗಳನ್ನು ಗೆದ್ದಿದ್ದೇವೆ. ಇನ್ನು ಜಿಂಬಾಬ್ವೆ ಪ್ರವಾಸದ ಬಗ್ಗೆ ಹೇಳುವುದಾದರೇ, ಕೆ ಎಲ್ ರಾಹುಲ್ ನಮ್ಮ ಮುಖ್ಯ ತಂಡದ ಉಪನಾಯಕರಾಗಿದ್ದಾರೆ. ಅವರು ತಂಡ ಕೂಡಿಕೊಂಡಿದ್ದರಿಂದ, ಅವರು ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಅರಿವು ನನಗಿತ್ತು. ಏಷ್ಯಾಕಪ್ ಟೂರ್ನಿಯಲ್ಲಿ ಒಂದು ವೇಳೆ ರೋಹಿತ್ ಶರ್ಮಾ ಗಾಯಗೊಂಡರೆ, ಕೆ ಎಲ್ ರಾಹುಲ್‌ಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಸಿಗುವ ಸಾಧ್ಯತೆಯಿತ್ತು. ಹೀಗಾಗಿ ಕೆ ಎಲ್ ರಾಹುಲ್‌ಗೆ ಜಿಂಬಾಬ್ವೆ ಎದುರಿನ ಸರಣಿಯಲ್ಲಿ ನಾಯಕನಾಗಿ ಅಭ್ಯಾಸ ನಡೆಸಲು ಇದು ಒಳ್ಳೆಯ ಅವಕಾಶ ಎನಿಸಿತ್ತು" ಎಂದು ಶಿಖರ್ ಧವನ್ ಹೇಳಿದ್ದಾರೆ.

ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಮಾಡಿದ ಬಿಸಿಸಿಐ!

" ನನಗೆ ನಾಯಕತ್ವದಿಂದ ಕೆಳಗಿಳಿಸಿದ್ದರ ಬಗ್ಗೆ ಯಾವುದೇ ಬೇಸರವಿಲ್ಲ. ನನ್ನ ಪ್ರಕಾರ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಭಾವಿಸುತ್ತೇನೆ. ಇದಾದ ಬಳಿಕ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಗೆ ಮತ್ತೆ ನಾಯಕನನ್ನಾಗಿ ನನ್ನನ್ನು ಆಯ್ಕೆ ಮಾಡಿದರು.  ಆಯ್ಕೆ ಸಮಿತಿ ಹಾಗೂ ಟೀಂ ಮ್ಯಾನೇಜ್‌ಮೆಂಟ್ ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ನಾಯಕತ್ವ ನೀಡಿತು. ಇಲ್ಲಿ ಬೇಸರವಾಗುವಂತಹದ್ದು ಏನೂ ಇಲ್ಲ ಎಂದು ಧವನ್ ಹೇಳಿದ್ದಾರೆ.

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಭಾರತ ತಂಡ ಹೀಗಿದೆ:

ಶಿಖರ್ ಧವನ್(ನಾಯಕ), ಶುಭ್‌ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್&ಉಪನಾಯಕ), ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್ಶದೀಪ್ ಸಿಂಗ್, ದೀಪಕ್ ಚಹರ್, ಉಮ್ರಾನ್ ಮಲಿಕ್.

click me!