Ind vs SA: ಅರ್ಧಶತಕ ಬಾರಿಸಿದ ಪೂಜಾರ, ರಹಾನೆ, ರೋಚಕಘಟ್ಟದತ್ತ 2ನೇ ಟೆಸ್ಟ್..!

By Suvarna News  |  First Published Jan 5, 2022, 3:46 PM IST

* ರೋಚಕಘಟ್ಟದತ್ತ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್

* ಜೋಹಾನ್ಸ್‌ಬರ್ಗ್‌ ಟೆಸ್ಟ್‌ನಲ್ಲಿ ಭಾರತಕ್ಕೆ 161 ರನ್‌ಗಳ ಮುನ್ನಡೆ

* ಆಕರ್ಷಕ ಅರ್ಧಶತಕ ಚಚ್ಚಿದ ಪೂಜಾರ, ರಹಾನೆ


ಜೋಹಾನ್ಸ್‌ಬರ್ಗ್(ಜ.05): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(53) ಹಾಗೂ ಅಜಿಂಕ್ಯ ರಹಾನೆ(58) ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಹೊರತಾಗಿಯೂ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ದಿಢೀರ್ ಎನ್ನುವಂತೆ 4 ವಿಕೆಟ್ ಕಳೆದುಕೊಂಡಿದೆ. ಇದೀಗ ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 188 ರನ್‌ ಬಾರಿಸಿದ್ದು, ಒಟ್ಟಾರೆ 161 ರನ್‌ಗಳ ಮುನ್ನಡೆ ಸಾಧಿಸಿದೆ.

ಇಲ್ಲಿನ ವಾಂಡರರ್ಸ್‌ ಮೈದಾನದಲ್ಲಿ 85 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟ ಆರಂಭಿಸಿದ ಭಾರತ ತಂಡಕ್ಕೆ ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆ (Ajinkya Rahane) ಉತ್ತಮ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ ಸ್ಪೋಟಕ ಜತೆಯಾಟವಾಡುವ ಮೂಲಕ ಗಮನ ಸೆಳೆಯಿತು. ಈ ಜೋಡಿ ಮೂರನೇ ವಿಕೆಟ್‌ಗೆ 144 ಎಸೆತಗಳನ್ನು ಎದುರಿಸಿ 111 ರನ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಯಿತು. ಅದರಲ್ಲೂ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಮಹತ್ವದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಿ ಗಮನ ಸೆಳೆದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಮಾರಕ ವೇಗಿ ಕಗಿಸೋ ರಬಾಡ (Kagiso Rabada) ಯಶಸ್ವಿಯಾದರು.

Latest Videos

undefined

ಅಜಿಂಕ್ಯ ರಹಾನೆ ಬರೋಬ್ಬರಿ 9 ಟೆಸ್ಟ್‌ ಬಳಿಕ ಮೊದಲ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ 78 ಎಸೆತಗಳಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 58 ರನ್‌ ಬಾರಿಸಿ ರಬಾಡ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಚೇತೇಶ್ವರ್ ಪೂಜಾರ ಕೂಡಾ ಅರ್ಧಶತಕ ಬಾರಿಸಿ ರಬಾಡ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಪೂಜಾರ 86 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 53 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು.

IND vs SA 2nd Test ಟೀಕೆಗಳ ನಡುವೆ ಪೂಜಾರ, ರಹಾನೆ ಹೋರಾಟ, ಕುತೂಹಲ ಘಟ್ಟದಲ್ಲಿ 2ನೇ ಟೆಸ್ಟ್ ಪಂದ್ಯ!

ದಿಢೀರ್ ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ: ಒಂದು ಹಂತದಲ್ಲಿ 155 ರನ್‌ಗಳವರೆಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, ಅಜಿಂಕ್ಯ ರಹಾನೆ ವಿಕೆಟ್ ಪತನವಾಗುತ್ತಿದ್ದಂತೆಯೇ ದಿಢೀರ್ ಎನ್ನುವಂತೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಇದಾದ ಭಾರತ ತನ್ನ ಖಾತೆಗೆ ಕೇವಲ 12 ರನ್‌ ಸೇರಿಸುವಷ್ಟರಲ್ಲೇ ರಹಾನೆ, ಪೂಜಾರ ಹಾಗೂ ರಿಷಭ್‌ ಪಂತ್ (Rishabh Pant) ವಿಕೆಟ್ ಕಳೆದುಕೊಂಡಿತು. ರಿಷಭ್ ಪಂತ್ ಶೂನ್ಯ ಸುತ್ತಿ ರಬಾಡಗೆ ಮೂರನೇ ಬಲಿಯಾದರೆ, ರವಿಚಂದ್ರನ್ ಅಶ್ವಿನ್ (Ravichandran Ashwin) ಚುರುಕಿನ 16 ರನ್‌ ಗಳಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು.

Lunch in Johannesburg 🍲

South Africa have wrestled control back with four wickets late in the first session.

Watch live on https://t.co/CPDKNxoJ9v (in select regions) 📺 | https://t.co/WrcdXdQlUm pic.twitter.com/f6mHNoYrUx

— ICC (@ICC)

ಸದ್ಯ ಹನುಮ ವಿಹಾರಿ(6) ಹಾಗೂ ಶಾರ್ದೂಲ್ ಠಾಕೂರ್(4) ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಕನಿಷ್ಠ 200 ರನ್‌ಗಳ ಮುನ್ನಡೆ ಸಾಧಿಸಿದರೆ, ಆತಿಥೇಯರ ಮೇಲೆ ಹೆಚ್ಚು ಒತ್ತಡ ಹೇರಬಹುದಾಗಿದೆ.

ಸಂಕ್ಷಿಪ್ತ ಸ್ಕೋರ್

ಭಾರತ: 202/10
ಕೆ.ಎಲ್. ರಾಹುಲ್: 50
ರವಿಚಂದ್ರನ್ ಅಶ್ವಿನ್‌: 46
ಮಾರ್ಕೊ ಜಾನ್ಸನ್‌: 31/4

ದಕ್ಷಿಣ ಆಫ್ರಿಕಾ:229/10
ಕೀಗನ್ ಪೀಟರ್‌ಸನ್‌: 62
ತೆಂಬ ಬವುಮಾ: 51
ಶಾರ್ದೂಲ್ ಠಾಕೂರ್: 61/7

ಭಾರತ: 188/6
ಅಜಿಂಕ್ಯ ರಹಾನೆ: 58
ಚೇತೇಶ್ವರ್ ಪೂಜಾರ: 53
ಕಗಿಸೋ ರಬಾಡ: 54/3

(* ಮೂರನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ)

 

click me!