Glenn Maxwell Test Positive: ಆಸೀಸ್‌ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್‌ವೆಲ್ಸ್‌ಗೆ ಕೋವಿಡ್ ಪಾಸಿಟಿವ್ ..!

By Suvarna NewsFirst Published Jan 5, 2022, 1:16 PM IST
Highlights

* ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಕೋವಿಡ್ ಪಾಸಿಟಿವ್

* ಮೆಲ್ಬೊರ್ನ್ ಸ್ಟಾರ್ಸ್‌ ತಂಡದ ನಾಯಕ ಮ್ಯಾಕ್ಸ್‌ವೆಲ್‌ಗೆ ಶಾಕ್‌

* ಬಿಗ್‌ಬ್ಯಾಶ್ ಲೀಗ್ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆ

ಮೆಲ್ಬೊರ್ನ್‌(ಜ.05): ಬಿಗ್‌ಬ್ಯಾಶ್‌ ಲೀಗ್‌ ಟೂರ್ನಿಯಲ್ಲಿ (Big Bash League Tournament) ಕೊರೋನಾ ವೈರಸ್ (Coronavirus) ಹಾವಳಿ ಜೋರಾಗಿದ್ದು, ಮೆಲ್ಬೊರ್ನ್‌ ಸ್ಟಾರ್ಸ್ ತಂಡದ ನಾಯಕ ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ (Glenn Maxwell) ಇದೀಗ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಕೋವಿಡ್ 19 ಸೋಂಕಿಗೆ ಒಳಗಾದ ಮೆಲ್ಬೊರ್ನ್‌ ಸ್ಟಾರ್ಸ್‌ನ (Melbourne Stars) 13ನೇ ಆಟಗಾರ ಇವರಾಗಿದ್ದಾರೆ. ಇಂದು(ಜ.05) ನಡೆಸಿದ ಆರ್‌ಟಿ-ಪಿಸಿಆರ್‌ ಟೆಸ್ಟ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

ಮೆಲ್ಬೊರ್ನ್‌ ರೆನೆಗೇಡ್ಸ್‌ (Melbourne Renegades) ವಿರುದ್ದದ ಪಂದ್ಯ ಮುಕ್ತಾಯದ ಬಳಿಕ ರ‍್ಯಾಪಿಡ್‌ ಆ್ಯಂಟಿಜನ್ ಟೆಸ್ಟ್ ಮಾಡಲಾಗಿತ್ತು. ರ‍್ಯಾಪಿಡ್‌ ಆ್ಯಂಟಿಜನ್ ಟೆಸ್ಟ್ ವೇಳೆಗೆ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈಗ ಮ್ಯಾಕ್ಸ್‌ವೆಲ್ ಐಸೋಲೇಷನ್‌ನಲ್ಲಿದ್ದಾರೆ ಎಂದು ಮೆಲ್ಬೊರ್ನ್ ಸ್ಟಾರ್ಸ್‌ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್ ನೇತೃತ್ವದ ಮೆಲ್ಬೊರ್ನ್ ಸ್ಟಾರ್ಸ್‌ ತಂಡವು ಕಳೆದೆರಡು ಪಂದ್ಯಗಳಲ್ಲಿ ಪರ್ತ್‌ ಸ್ಕ್ರಾಚರ್ಸ್ ಹಾಗೂ ಮೆಲ್ಬೊರ್ನ್‌ ರೆನೆಗೇಡ್ಸ್ ವಿರುದ್ದ ಆಘಾತಕಾರಿ ಸೋಲು ಕಂಡಿತ್ತು. 

ಕೋವಿಡ್ ಕಾಟ: ಬ್ರಿಸ್ಬೇನ್‌ ಹೀಟ್‌ ಹಾಗೂ ಸಿಡ್ನಿ ಸಿಕ್ಸರ್ ಪಂದ್ಯ ಮುಂದೂಡಿಕೆ

ಆಸ್ಟ್ರೇಲಿಯಾದ ಪ್ರತಿಷ್ಟಿತ ಟಿ20 ಕ್ರಿಕೆಟ್ ಟೂರ್ನಿಯಾದ ಬಿಗ್‌ಬ್ಯಾಶ್‌ ಲೀಗ್‌ ಮೇಲೆ ಕೊರೋನಾ ವೈರಸ್ ತನ್ನ ವಕ್ರದೃಷ್ಠಿಯನ್ನು ಬೀರಿದೆ. ಇದೀಗ ಇಂದು(ಜ.05) ಬ್ರಿಸ್ಬೇನ್ ಹೀಟ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವು ಕೋವಿಡ್ ಭೀತಿಯಿಂದಾಗಿ ಮುಂದೂಡಲ್ಪಟ್ಟಿದೆ. ಈಗಾಗಲೇ ಈ ಪಂದ್ಯವನ್ನು ಜನವರಿ 05ಕ್ಕೆ ಮುಂದೂಡಲಾಗಿತ್ತು. ಇದೀಗ ಬ್ರಿಸ್ಬೇನ್ ಹೀಟ್ ಪಾಳಯದಲ್ಲಿ 12 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಈ ಪಂದ್ಯವನ್ನು ಮುಂದೂಡಲು ಆಯೋಜಕರು ತೀರ್ಮಾನಿಸಿದ್ದಾರೆ.

The Melbourne Stars can confirm that Glenn Maxwell has returned a positive rapid antigen test.

— Melbourne Stars (@StarsBBL)

ಬ್ರಿಸ್ಬೇನ್ ಹೀಟ್ ಪಾಳಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗಿದ್ದರಿಂದ ಪಂದ್ಯವನ್ನು ಮುಂದೂಡುವುದನ್ನು ಬಿಟ್ಟು ನಮಗೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ. ಆಡುವ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಯುವ ಆಟಗಾರರು ಸಂಪೂರ್ಣ ಫಿಟ್ ಆಗಿರದ ಹಿನ್ನೆಲೆಯನ್ನು ಅನಿವಾರ್ಯವಾಗಿ ಪಂದ್ಯವನ್ನು ಮುಂದೂಡುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ ಜನರಲ್ ಮ್ಯಾನೇಜರ್ ಆಲಿಸ್ಟರ್ ಡಾಬ್ಸನ್ ಹೇಳಿದ್ದಾರೆ.

Big Bash League: ಟೂರ್ನಿ ಮೇಲೆ ಕೊರೋನಾ ವೈರಸ್ ಕೆಂಗಣ್ಣು, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!

ಇನ್ನು ಈ ಮೊದಲೇ ನಿಗದಿಯಾದಂತೆ ಜನವರಿ 06ರಂದು ಬ್ರಿಸ್ಬೇನ್ ಹೀಟ್ ಹಾಗೂ ಮೆಲ್ಬೊರ್ನ್‌ ರೆನೆಗೇಡ್ಸ್‌ ನಡುವಿನ ಪಂದ್ಯವು ವೇಳಾಪಟ್ಟಿಯಂತೆಯೇ ನಡೆಯಲಿದೆ. ಪಂದ್ಯದಲ್ಲಿ ಪಾಲ್ಗೊಳ್ಳುವ ಆಟಗಾರರ ಬಗ್ಗೆ ಎಲ್ಲಾ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಾಬ್ಸನ್ ತಿಳಿಸಿದ್ದಾರೆ.

ಇನ್ನು ಅಡಿಲೇಡ್‌ ಸ್ಟ್ರೈಕರ್ಸ್ ಹಾಗೂ ಹೋಬರ್ಟ್‌ ಹೊರಿಕೇನ್ಸ್‌ ನಡುವಿನ ಪಂದ್ಯವು ಕೆಲವು ಗಂಟೆಗಳ ಮುಂಚೆ ಆರಂಭವಾಗಲಿದೆ. ಈ ಪಂದ್ಯವು ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 1.45ಕ್ಕೆ ಆರಂಭವಾಗಲಿದೆ.

ಸದ್ಯ ಪರ್ತ್‌ ಸ್ಕ್ರಾಚರ್ಸ್‌ ತಂಡವು ಆಡಿದ 9 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 29 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಸಿಡ್ನಿ ಸಿಕ್ಸರ್ಸ್‌, ಸಿಡ್ನಿ ಥಂಡರ್ಸ್‌ ಹಾಗೂ ಹೋಬರ್ಟ್‌ ಹೊರಿಕೇನ್ಸ್‌ ತಂಡವು ಕ್ರಮವಾಗಿ ಮೊದಲ 4 ಸ್ಥಾನದಲ್ಲಿವೆ. ಇನ್ನು ಅಡಿಲೇಡ್ ಸ್ಟ್ರೈಕರ್ಸ್ ತಂಡವು ಆಡಿದ 8 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

click me!