ಟೀಂ ಇಂಡಿಯಾಗೆ ಶುರುವಾಗಿದೆ ವೇಗಿಗಳ ಕೊರತೆ! ಹೀಗಾಗಲು ಕಾರಣವೇನು?

By Kannadaprabha News  |  First Published Dec 30, 2023, 9:47 AM IST

ಸೆಂಚೂರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ಮೂವರು ಅನುಭವಿ ಬೌಲರ್‌ಗಳಾದ ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌ ಹಾಗೂ ಆರ್‌.ಅಶ್ವಿನ್‌ - ಒಟ್ಟಾರೆ 69.4 ಓವರ್‌ ಬೌಲ್‌ ಮಾಡಿ 201 ರನ್‌ಗೆ 7 ವಿಕೆಟ್‌ ಕಿತ್ತರು.


- ಕನ್ನಡಪ್ರಭ ವಿಶ್ಲೇಷಣೆ

ಬೆಂಗಳೂರು(ಡಿ.30): ಮೂರು, ನಾಲ್ಕನೇ ಬೌಲರ್‌ಗಳ ಗುಣಮಟ್ಟದ ಪ್ರದರ್ಶನ ಸಾಮಾನ್ಯವಾಗಿ ಟೆಸ್ಟ್‌ ಪಂದ್ಯಗಳ ಫಲಿತಾಂಶವನ್ನು ನಿರ್ಧರಿಸುತ್ತದೆ. ಆರಂಭಿಕ ಸ್ಪೆಲ್‌ಗಳ ಬಳಿಕವೂ ಬೌಲಿಂಗ್‌ ದಾಳಿ ದುರ್ಬಲಗೊಳ್ಳದಿದ್ದರೆ, ಎದುರಾಳಿ ಬ್ಯಾಟರ್‌ಗಳಿಗೆ ಉಳಿಗಾಲವಿಲ್ಲ.

Latest Videos

undefined

ಸೆಂಚೂರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ಮೂವರು ಅನುಭವಿ ಬೌಲರ್‌ಗಳಾದ ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌ ಹಾಗೂ ಆರ್‌.ಅಶ್ವಿನ್‌ - ಒಟ್ಟಾರೆ 69.4 ಓವರ್‌ ಬೌಲ್‌ ಮಾಡಿ 201 ರನ್‌ಗೆ 7 ವಿಕೆಟ್‌ ಕಿತ್ತರು.

ಮೊದಲ ದಿನಕ್ಕೆ ಹೋಲಿಸಿದರೆ ಇನ್ನೆರಡು ದಿನ ಬ್ಯಾಟ್‌ ಮಾಡಲು ಅನುಕೂಲಕರ ವಾತಾವರಣವೇ ಇದ್ದಿದ್ದರಿಂದ 7 ವಿಕೆಟ್‌ಗೆ 201 ಅನ್ನು ಉತ್ತಮ ಎಂದೇ ಪರಿಗಣಿಸಬಹುದು, ಆದರೆ ಇಬ್ಬರು ಅನನುಭವಿಗಳಾದ ಶಾರ್ದೂಲ್‌ ಠಾಕೂರ್‌ (11ನೇ ಟೆಸ್ಟ್‌) ಹಾಗೂ ಪ್ರಸಿದ್ಧ್‌ ಕೃಷ್ಣ (ಮೊದಲ ಟೆಸ್ಟ್‌) ಒಟ್ಟು 39 ಓವರ್‌ ಎಸೆದು 194 ರನ್‌ಗೆ ಕೇವಲ 2 ವಿಕೆಟ್ ಕಿತ್ತರು. ಭಾರತದ ಸೋಲಿಗೆ ಇದೇ ಪ್ರಮುಖ ಕಾರಣ.

ಅಪ್ರಾಪ್ತೆ ಮೇಲೆ ರೇಪ್‌: ಕ್ರಿಕೆಟಿಗ ಸಂದೀಪ್ ಲಮಿಚ್ಚಾನೆ ದೋಷಿ, ಮತ್ತೆ ಜೈಲು ಶಿಕ್ಷೆಗೆ ಕ್ಷಣಗಣನೆ..!

ಮೊಹಮದ್‌ ಶಮಿ ಅನುಪಸ್ಥಿತಿ ತಂಡಕ್ಕೆ ಎಂತಹ ಡ್ಯಾಮೇಜ್‌ ಮಾಡಬಹುದು ಎನ್ನುವ ಸತ್ಯವನ್ನು ಸೆಂಚೂರಿಯನ್‌ ಟೆಸ್ಟ್‌ ಭಾರತೀಯರಿಗೆ ತೋರಿಸಿಕೊಟ್ಟಿತು. ತಂಡದ 2ನೇ ಸ್ತರದಲ್ಲಿರುವ ವೇಗಿಗಳು ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನುವ ನಿಜವೂ ಭಾರತ ತಂಡದ ಆಡಳಿತಕ್ಕೆ ಮನವರಿಕೆಯಾಗಿದೆ.

ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌, ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ರಿಂದಾಗಿ ತಂಡ ಅಬ್ಬರಿಸುತ್ತಿದ್ದ ದಿನಗಳು ಕೊನೆಗೊಳ್ಳುವ ಹಂತ ತಲುಪಿದೆಯೇ ಎನ್ನುವ ಆತಂಕವೂ ಶುರುವಾಗಿದೆ.

ಇಶಾಂತ್‌ ಹಾಗೂ ಉಮೇಶ್‌ರ ಟೆಸ್ಟ್‌ ವೃತ್ತಿಬದುಕು ಅನಧಿಕೃತವಾಗಿ ಮುಗಿದಿದೆ. ಶಮಿ ಬಹುತೇಕ ನಿವೃತ್ತಿಯ ಅಂಚಿನಲ್ಲಿದ್ದಾರೆ. ಪದೇ ಪದೇ ಬೂಮ್ರಾ ಒಬ್ಬರೇ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವುದು ಅಸಾಧ್ಯ. ಇನ್ನು ಸಿರಾಜ್‌, ತ್ರಿಕೋನದಲ್ಲಿ 3ನೇ ಕೋನವಿದ್ದಂತೆ. ಶಮಿ, ಬೂಮ್ರಾರಿಂದ ಬೆಂಬಲ ಸಿಕ್ಕರಷ್ಟೇ ಸಿರಾಜ್‌ ಪರಿಣಾಮಕಾರಿಯಾಗಬಲ್ಲರು ಎನ್ನುವುದು ಹಲವು ಬಾರಿ ಸಾಬೀತಾಗಿದೆ.

ಬಿಸಿಸಿಐ ಆತುರ!:

ಪ್ರಸಿದ್ಧ್‌ ಕೃಷ್ಣ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಮೊದಲು ದ.ಆಫ್ರಿಕಾ ‘ಎ’ ವಿರುದ್ಧ ಒಂದು 4 ದಿನಗಳ ಟೆಸ್ಟ್‌ ಆಡಿದರು. 21 ತಿಂಗಳ ಬಳಿಕ ಅವರಾಡಿದ ಮೊದಲ ಪ್ರಥಮ ದರ್ಜೆ ಪಂದ್ಯವದು.

ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌, ಅವರಾಡಿದ ಕೇವಲ 13ನೇ ಪ್ರಥಮ ದರ್ಜೆ ಪಂದ್ಯ. ಇಶಾಂತ್‌ರ ಪಾತ್ರವನ್ನು ನಿರ್ವಹಿಸಲು ಬಿಸಿಸಿಐ ಪ್ರಸಿದ್ಧ್‌ರನ್ನು ಗುರುತಿಸಿದೆಯಾದರೂ, ಅವರಿಗೆ ಬೇಕಿರುವ ಸೂಕ್ತ ತರಬೇತಿ ನೀಡಿಲ್ಲ. ಪ್ರಸಿದ್ಧ್‌ ಈ ವರೆಗೂ ಒಮ್ಮೆಯೂ ಒಂದು ಇಡೀ ರಣಜಿ ಋತುವನ್ನು ಆಡಿಲ್ಲ.

Ind vs SA: ನಿವೃತ್ತಿಯ ಪಂದ್ಯದಲ್ಲಿ ಡೀನ್ ಎಲ್ಗರ್‌ಗೆ ದಕ್ಷಿಣ ಆಫ್ರಿಕಾ ನಾಯಕ ಸ್ಥಾನ!

ಇನ್ನು ಮೊದಲ ಟೆಸ್ಟ್‌ನಲ್ಲಿ ಪ್ರಸಿದ್ಧ್‌ ನಿರೀಕ್ಷೆ ಉಳಿಸಿಕೊಳ್ಳದ ಕಾರಣ, ಮತ್ತೊಬ್ಬ ಯುವ ವೇಗಿ ಆವೇಶ್‌ ಖಾನ್‌ರನ್ನು ತಂಡಕ್ಕೆ ಕರೆತರಲಾಗುತ್ತಿದೆ. ಗುಣಮಟ್ಟದ ವೇಗಿಗಳ ಕೊರತೆ ತಂಡದ ಆಡಳಿತವನ್ನು ಎಷ್ಟರ ಮಟ್ಟಿಗೆ ಕಾಡಲು ಶುರು ಮಾಡಿದೆ ಎನ್ನುವುದಕ್ಕೆ ಇದೊಂದು ನಿದರ್ಶನವಷ್ಟೇ.

ಶಾರ್ದೂಲ್‌ಗೆ ಇನ್ನೆಷ್ಟು ಅವಕಾಶ?

ಬ್ಯಾಟಿಂಗ್‌ ಪಡೆಗೆ ಬಲ ತುಂಬಬಲ್ಲರು ಎಂದು ನಂಬಿ ಶಾರ್ದೂಲ್‌ ಠಾಕೂರ್‌ಗೆ ಪದೇ ಪದೇ ಅವಕಾಶ ಕೊಡಲಾಗುತ್ತಿದೆ, ಆದರೆ ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಉಪಯೋಗವಾಗುತ್ತಿಲ್ಲ.

ಕಳೆದ 5 ಟೆಸ್ಟ್‌ನಲ್ಲಿ ಅವರ ಬೌಲಿಂಗ್‌ ಸರಾಸರಿ ಪ್ರತಿ ವಿಕೆಟ್‌ಗೆ 56 ರನ್‌ ಇದೆ. ಶಾರ್ದೂಲ್‌ರನ್ನು ತಂಡದಲ್ಲಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗುತ್ತಿದೆ.

ವೇಗಿಗಳ ಕೊರತೆಗೆ ಪ್ರಮುಖ ಕಾರಣವೇನು?

ಕೋವಿಡ್‌ ಬಳಿಕ ಬಿಸಿಸಿಐ ಅಭಿವೃದ್ಧಿ ಕಾರ್ಯಕ್ರಮಗಳತ್ತ ಹೆಚ್ಚು ಗಮನ ಹರಿಸುವುದನ್ನು ನಿಲ್ಲಿಸಿದೆ. 2018ರಲ್ಲಿ ಸಿರಾಜ್‌ರನ್ನು ಬೆಳೆಸುವ ಕೆಲಸ ಆರಂಭಿಸಿದ್ದಕ್ಕೆ 2020ರಲ್ಲಿ ಫಲಿತಾಂಶ ಸಿಕ್ಕಿತ್ತು.

ಸಿರಾಜ್‌ ಭಾರತ ತಂಡಕ್ಕೆ ಕಾಲಿಡುವ ಮೊದಲು ಭಾರತ ‘ಎ’ ತಂಡದೊಂದಿಗೆ ಹಲವು ಪ್ರವಾಸ ಮಾಡಿ ಪಳಗಿದ್ದರು. ಬಿಸಿಸಿಐ ಈಗ ಭಾರತ ‘ಎ’ ತಂಡಕ್ಕೆ ಹೆಚ್ಚು ಪ್ರವಾಸಗಳನ್ನು ಆಯೋಜಿಸುತ್ತಿಲ್ಲ.

ಗುಣಮಟ್ಟದ ಆಟಗಾರರು, ಪ್ರಮುಖವಾಗಿ ವೇಗಿಗಳ ಕೊರತೆ ಎದುರಾಗಲು ಇದೇ ಪ್ರಮುಖ ಕಾರಣ. ಮುಂದಿನ 2-3 ವರ್ಷ ಈ ಸಮಸ್ಯೆ ಮುಂದುವರಿದರೂ ಅಚ್ಚರಿಯಿಲ್ಲ.

2024ರಲ್ಲಿ ಭಾರತಕ್ಕೆ ಕಠಿಣ ಸವಾಲು!

ದ.ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಸರಿಯಾದ ಸಿದ್ಧತೆ ಇಲ್ಲದೆ ತೆರಳಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 2024ರಲ್ಲಿ ಭಾರತ ಎರಡು ಮಹತ್ವದ ಟೆಸ್ಟ್‌ ಸರಣಿಗಳನ್ನು ಆಡಲಿದೆ.

ವರ್ಷದ ಆರಂಭದಲ್ಲಿ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಸರಣಿ ಆಡಲಿರುವ ಭಾರತ, ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಬಲಿಷ್ಠ ವೇಗದ ಬೌಲಿಂಗ್‌ ಪಡೆಯನ್ನು ಸಿದ್ಧಗೊಳಿಸದೆ ಇದ್ದಲ್ಲಿ, ಎರಡೂ ಸರಣಿಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.
 

click me!