ಇಂದೋರ್‌ನಲ್ಲಿ ರನ್‌ ಸುರಿಮಳೆ; ಆಕರ್ಷಕ ಶತಕ ಸಿಡಿಸಿದ ಟೀಂ ಇಂಡಿಯಾ ಓಪನರ್ಸ್‌..!

Published : Jan 24, 2023, 03:37 PM ISTUpdated : Jan 24, 2023, 03:48 PM IST
ಇಂದೋರ್‌ನಲ್ಲಿ ರನ್‌ ಸುರಿಮಳೆ; ಆಕರ್ಷಕ ಶತಕ ಸಿಡಿಸಿದ ಟೀಂ ಇಂಡಿಯಾ ಓಪನರ್ಸ್‌..!

ಸಾರಾಂಶ

* ಮೂರನೇ ಏಕದಿನ ಪಂದ್ಯದಲ್ಲಿ ಶತಕ ಚಚ್ಚಿದ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ * ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ ಉಭಯ ಓಪನರ್ಸ್‌ * ಸಾಕಷ್ಟು ಸಮಯದ ಬಳಿಕ ಮೂರಂಕಿ ಮೊತ್ತ ದಾಖಲಿಸಿದ ರೋಹಿತ್ ಶರ್ಮಾ

ಇಂದೋರ್‌(ಜ.24): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್‌ ಗಿಲ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಟೀಂ ಇಂಡಿಯಾ ಆರಂಭಿಕರಿಬ್ಬರು ಶತಕ ಸಿಡಿಸಿ ವಿಕೆಟ್ ಒಪ್ಪಿಸಿದ್ದು, 28 ಓವರ್ ಅಂತ್ಯದ ವೇಳೆಗೆ ಭಾರತ 2 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿದೆ. 

ಇಲ್ಲಿನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆದಿದೆ. ಬ್ಯಾಟರ್‌ಗಳ ಪಾಲಿಗೆ ಸ್ವರ್ಗ ಎನಿಸಿಕೊಂಡಿರುವ ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಟೀಂ ಇಂಡಿಯಾ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಸ್ಪೋಟಕ ಆರಂಭವನ್ನೇ ಒದಗಿಸಿಕೊಟ್ಟರು.

ಆರಂಭದಲ್ಲಿಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಈ ಜೋಡಿ ಕೇವಲ 13 ಓವರ್‌ಗಳನ್ನು ಎದುರಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಇದು ಟೀಂ ಇಂಡಿಯಾ ಪರ ಶುಭ್‌ಮನ್‌ ಗಿಲ್‌ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಮೂರನೇ ಬಾರಿಗೆ ಮೂರಂಕಿ ಮೊತ್ತದ ಜತೆಯಾಟವಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕವೂ ಈ ಜೋಡಿ ಕಿವೀಸ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸುವ ಮೂಲಕ ಪ್ರವಾಸಿ ಪಡೆಯನ್ನು ತಬ್ಬಿಬ್ಬಾಗುವಂತೆ ಮಾಡಿದರು.

Ind vs NZ ಭಾರತ ಎದುರು ಟಾಸ್ ಗೆದ್ದ ಕಿವೀಸ್ ಬೌಲಿಂಗ್ ಆಯ್ಕೆ; ಉಭಯ ತಂಡದಲ್ಲೂ ಮಹತ್ವದ ಬದಲಾವಣೆ..! 

ಶತಕ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ: ಟೀಂ ಇಂಡಿಯಾ, ಕೊನೆಗೂ ಶತಕದ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬರೋಬ್ಬರಿ 80 ಇನಿಂಗ್ಸ್‌ಗಳ ಬಳಿಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಇದು ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ 30ನೇ ಏಕದಿನ ಶತಕವಾಗಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜತೆ ಜಂಟಿ ಮೂರನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡುಲ್ಕರ್(49) ಹಾಗೂ ವಿರಾಟ್ ಕೊಹ್ಲಿ(46*) ರೋಹಿತ್ ಶರ್ಮಾ ಅವರಿಗಿಂತ ಮುಂದಿದ್ದಾರೆ. ರೋಹಿತ್ ಶರ್ಮಾ 85 ಎಸೆತಗಳನ್ನು ಎದುರಿಸಿ 101 ರನ್ ಬಾರಿಸಿ ಬ್ರಾಸ್‌ವೆಲ್‌ಗೆ ವಿಕೆಟ್ ಒಪ್ಪಿಸಿದರು.

ಗಿಲ್‌ಗೆ ಮತ್ತೊಂದು ಶತಕ: ಟೀಂ ಇಂಡಿಯಾ ಮತ್ತೋರ್ವ ಪ್ರತಿಭಾನ್ವಿತ ಬ್ಯಾಟರ್ ಶುಭ್‌ಮನ್‌ ಗಿಲ್‌ ಕೂಡಾ ಮತ್ತೊಮ್ಮೆ ಆಕರ್ಷಕ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಗಿಲ್ ಕಳೆದ 4 ಏಕದಿನ ಇನಿಂಗ್ಸ್‌ನಲ್ಲಿ 3ನೇ ಶತಕ ಇದಾಗಿದೆ. ಶುಭ್‌ಮನ್ ಗಿಲ್‌ ಕೇವಲ 72 ಎಸೆತಗಳನ್ನು ಎದುರಿಸಿ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು. ಅಂತಿಮವಾಗಿ ಗಿಲ್‌ 78 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 112 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಕಿವೀಸ್ ಪರ ಗರಿಷ್ಠ ಮೊದಲ ವಿಕೆಟ್ ಜತೆಯಾಟ ನಿಭಾಯಿಸಿದ ವಿಶ್ವದಾಖಲೆ:

212 ರೋಹಿತ್ ಶರ್ಮಾ - ಶುಭ್‌ಮನ್ ಗಿಲ್, ಇಂದೋರ್, 2023
201* ವಿರೇಂದ್ರ ಸೆಹ್ವಾಗ್ - ಗೌತಮ್ ಗಂಭೀರ್, ಹ್ಯಾಮಿಲ್ಟನ್, 2009
201 ಸನತ್ ಜಯಸೂರ್ಯ - ಉಪುಲ್ ತರಂಗ, ನೇಪಿಯರ್, 2006

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!
U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!