ಗಾಯಾಳು ರಿಷಭ್ ಪಂತ್ ಹಣೆಗೆ ಪ್ಲಾಸ್ಟಿಕ್ ಸರ್ಜರಿ.!

By Naveen KodaseFirst Published Dec 31, 2022, 5:45 PM IST
Highlights

ರಸ್ತೆ ಅಪಘಾತದಲ್ಲಿ ರಿಷಭ್ ಪಂತ್‌ಗೆ ಗಂಭೀರ ಗಾಯ
ಡೆಹರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ರಿಷಭ್‌ ಪಂತ್‌ಗೆ ಪ್ಲಾಸ್ಟಿಕ್ ಸರ್ಜರಿ
ಪ್ರಾಣಾಪಾಯದಿಂದ ಪಾರಾದ ವಿಕೆಟ್ ಕೀಪರ್ ಬ್ಯಾಟರ್ ಪಂತ್

ನವದೆಹಲಿ(ಡಿ.31): ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಿಷಭ್ ಪಂತ್, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಅಪಘಾತದಲ್ಲಿ ರಿಷಭ್ ಪಂತ್ ಹಣೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದರಿಂದ, ಆ ಭಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯಗಳಲ್ಲಿ ಎಂದು ಡೆಲ್ಲಿ ಡಿಸ್ಟ್ರಿಕ್ಟ್‌ ಕ್ರಿಕೆಟ್ ಅಸೋಸಿಯೇಷನ್ ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.

ತಮ್ಮ ಮರ್ಸಿಡೀಸ್‌ ಬೆಂಜ್ ಕಾರಿನಲ್ಲಿ ಡೆಲ್ಲಿಯಿಂದ ಡೆಹರಾಡೂನ್‌ನತ್ತ ಪ್ರಯಾಣ ಬೆಳೆಸುತ್ತಿದ್ದ ವೇಳೆ, ಉತ್ತರಖಂಡ್‌ನ ರೂರ್ಕಿ ಎಂಬಲ್ಲಿ ರಸ್ತೆ ವಿಭಜಕಕ್ಕೆ ಕಾರು ಅಪ್ಪಳಿಸಿದೆ. ಕಾರು ಅಪ್ಪಳಿಸಿದ ಪರಿಣಾಮ ಕಾರಿನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಅಪಘಾತದಿಂದಾಗಿ  ಪಂತ್‌ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ. ಎಂಆರ್‌ಐ ಸ್ಕ್ಯಾನ್‌ ಮೂಲಕ ಅವರ ಮಿದುಳು, ಬೆನ್ನು ಹುರಿ(ಸ್ಪೈನಲ್‌ ಕಾರ್ಡ್‌)ಗೆ ಪೆಟ್ಟು ಬಿದ್ದಿಲ್ಲ ಎಂದು ದೃಢಪಟ್ಟಿದೆ. 

" ರಿಷಭ್ ಪಂತ್ ಸದ್ಯ ಹಣೆಯ ಭಾಗದಲ್ಲಿ ಸಣ್ಣ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ. ಡಿಡಿಸಿಎನ ಮೂವರು ಮಂದಿ ಈಗಾಗಲೇ ರಿಷಭ್ ಪಂತ್ ದಾಖಲಾಗಿರುವ ಆಸ್ಪತ್ರೆ ತಲುಪಿದ್ದಾರೆ. ಬಿಸಿಸಿಐ ಕೂಡಾ ಮ್ಯಾಕ್ಸ್‌ ಆಸ್ಪತ್ರೆಯ ವೈದ್ಯರು ಹಾಗೂ ರಿಷಭ್ ಪಂತ್ ಕುಟುಂಬದ ಜತೆ ನಿರಂತರ ಸಂಪರ್ಕದಲ್ಲಿದೆ. ರಿಷಭ್ ಪಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಡೆಹರಾಡೂನ್‌ನಿಂದ ಡೆಲ್ಲಿಗೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಇನ್ನಷ್ಟೇ ತೀರ್ಮಾನ ಮಾಡಬೇಕಿದೆ ಎಂದು ಡಿಡಿಸಿಎ ಡೈರೆಕ್ಟರ್ ಶ್ಯಾಮ್‌ ಶರ್ಮಾ ತಿಳಿಸಿದ್ದಾರೆ.

ಅತಿವೇಗದ ಚಾಲನೆ, ನಿದ್ದೆ; ಸೀಟ್‌ಬೆಲ್ಟ್‌ ಕೂಡಾ ಇಲ್ಲ!

ಮೆರ್ಸಿಡಿಸ್‌ ಕಂಪನಿಯ ದುಬಾರಿ ಕಾರಿನಲ್ಲಿ ತೆರಳುತ್ತಿದ್ದ ರಿಷಭ್‌ ಕಾರನ್ನು ಸ್ವತಃ ತಾವೇ ಚಲಾಯಿಸುತ್ತಿದ್ದರು. ಕಾರಿನಲ್ಲಿ ಒಬ್ಬರೇ ಇದ್ದಿದ್ದು, ಚಾಲನೆ ವೇಳೆ ನಿದ್ದೆಯ ಮಂಪರಿನಲ್ಲಿ ತೂಕಡಿಸಿದ್ದಾರೆ. ಹೀಗಾಗಿ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಹರಿದ್ವಾರ ನಗರ ಎಸ್‌ಪಿ ಎಸ್‌ಕೆ ಸಿಂಗ್‌ ತಿಳಿಸಿದ್ದಾರೆ. ಪಂತ್‌ ಕಾರನ್ನು ಅತಿವೇಗದಲ್ಲಿ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಅಪಘಾತದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಕೆಲ ಮೀಟರ್‌ ದೂರಕ್ಕೆ ಬಿದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ರಿಷಭ್‌ ಕಾರು ಚಾಲನೆ ವೇಳೆ ಸೀಟ್‌ಬೆಲ್ಟ್‌ ಕೂಡಾ ಧರಿಸಿರಲಿಲ್ಲ ಎಂದು ಗೊತ್ತಾಗಿದೆ.

ರಿಷಭ್ ಪಂತ್ ಕಾಪಾಡಿದ ಡ್ರೈವರ್‌ ರಿಯಲ್ ಹೀರೋ ಎಂದು ಬಣ್ಣಿಸಿದ ವಿವಿಎಸ್ ಲಕ್ಷ್ಮಣ್‌..! ಟ್ವೀಟ್ ವೈರಲ್

ರಿಷಭ್ ಪಂತ್ ಅವರ ಕಾರು ಅಪಘಾತವಾಗಿದ್ದನ್ನು ಎದುರಿನಿಂದ ಬರುತ್ತಿದ್ದ ಬಸ್‌ ಡ್ರೈವರ್ ಸುಶೀಲ್ ಮನ್‌ ನೋಡಿ ತಕ್ಷಣವೇ ಪಂತ್ ರಕ್ಷಣೆಗೆ ಧಾವಿಸಿದ್ದಾರೆ. ಸುಶೀಲ್ ಮನ್ ಅವರೇ ಹೇಳಿದಂತೆ ಮೊದಲಿಗೆ ಅಪಘಾತವಾದ ವ್ಯಕ್ತಿ ಯಾರೆಂಬುದೇ ಅವರಿಗೆ ತಿಳಿದಿರಲಿಲ್ಲವಂತೆ. ತಕ್ಷಣ ಪಂತ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಆಂಬುಲೆನ್ಸ್‌ಗೆ ಕರೆಮಾಡಿ ಮಾನವೀಯತೆ ಮೆರೆದಿದ್ದರು.

click me!