Mayank Agarwal Success Secret: ಫಾರ್ಮ್‌ಗೆ ಮರಳಲು ರಾಹುಲ್ ದ್ರಾವಿಡ್‌ ನೆರವನ್ನು ಸ್ಮರಿಸಿದ ಕನ್ನಡಿಗ..!

By Suvarna NewsFirst Published Dec 10, 2021, 7:28 PM IST
Highlights

* ನ್ಯೂಜಿಲೆಂಡ್ ಎದುರು ಮಿಂಚಿನ ಪ್ರದರ್ಶನ ತೋರಿದ ಮಯಾಂಕ್ ಅಗರ್‌ವಾಲ್‌

* ಫಾರ್ಮ್‌ಗೆ ಮರಳಲು ರಾಹುಲ್ ದ್ರಾವಿಡ್‌ ನೀಡಿದ ಸಲಹೆ ಸ್ಮರಿಸಿಕೊಂಡ ಆರಂಭಿಕ ಬ್ಯಾಟರ್‌

* ಮುಂಬೈ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಅಗರ್‌ವಾಲ್

ಬೆಂಗಳೂರು(ಡಿ.10): ಟೀಂ ಇಂಡಿಯಾ (Team India) ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್‌ವಾಲ್‌ (Mayank Agarwal), ನ್ಯೂಜಿಲೆಂಡ್ ವಿರುದ್ದದ ಮುಂಬೈ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದರು. ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೆಸ್ಟ್‌ ಶ್ರೇಯಾಂಕದಲ್ಲಿ ಅಗರ್‌ವಾಲ್‌ 11ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದೆಲ್ಲದರ ಆಚೆ ಫಾರ್ಮ್‌ಗೆ ಮರಳಲು ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ನೀಡಿದ ಸಲಹೆಯನ್ನು ಕನ್ನಡಿಗ ಅಗರ್‌ವಾಲ್ ಬಿಚ್ಚಿಟ್ಟಿದ್ದಾರೆ.

ಹೌದು, ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ ಮಯಾಂಕ್‌ ಅಗರ್‌ವಾಲ್‌ ಮುಂಬೈ ಟೆಸ್ಟ್‌ (Mumbai Test) ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಿದರೆ, ಅಗರ್‌ವಾಲ್ ಮಾತ್ರ ಮೊದಲ ಇನಿಂಗ್ಸ್‌ನಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ 150 ರನ್‌ ಚಚ್ಚಿ ಮಿಂಚಿದ್ದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕದ ಮಯಾಂಕ್‌ ಅಗರ್‌ವಾಲ್ 62 ರನ್ ಚಚ್ಚುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಯಾಂಕ್‌ ಅಗರ್‌ವಾಲ್‌ ಬರೋಬ್ಬರಿ ಒಂದು ವರ್ಷಗಳ ಬಳಿಕ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಲ್ಲದೇ, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2020-21ನೇ ಸಾಲಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಮಯಾಂಕ್‌ ಅಗರ್‌ವಾಲ್, ಇದಾದ ಬಳಿಕ ತವರಿನಲ್ಲಿ ಹಾಗೂ ತವರಿನಾಚೆ ಇಂಗ್ಲೆಂಡ್ ವಿರುದ್ದ ನಡೆದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದರು. ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹಾಗೂ ಕೆ.ಎಲ್‌. ರಾಹುಲ್ ವಿಶ್ರಾಂತಿ ಪಡೆದಿದ್ದರಿಂದ ಮಯಾಂಕ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿತ್ತು. ಕಾನ್ಪುರ ಟೆಸ್ಟ್‌ನಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದ ಮಯಾಂಕ್‌, ಮುಂಬೈ ಟೆಸ್ಟ್‌ನಲ್ಲಿ ಅಬ್ಬರಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. 

ಮಯಾಂಕ್‌ ಅಗರ್‌ವಾಲ್ ಅವರ ಅಮೋಘ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ದ ಭಾರೀ ಅಂತರದ ಗೆಲುವು(372 ರನ್‌ಗಳ ಗೆಲುವು) ದಾಖಲಿಸಿ ಟೆಸ್ಟ್‌ ಸರಣಿಯನ್ನು 1-0 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ತಾವು ಫಾರ್ಮ್‌ಗೆ ಮರಳಲು ಕೋಚ್ ರಾಹುಲ್ ದ್ರಾವಿಡ್ ನೀಡಿದ್ದ ಸಲಹೆಯೇ ಪ್ರಮುಖ ಕಾರಣ ಎಂದು ಮಯಾಂಕ್‌ ಅಗರ್‌ವಾಲ್ ಒಪ್ಪಿಕೊಂಡಿದ್ದಾರೆ.

India Tour of South Africa: 44 ದಿನಗಳ ಬಯೋ ಬಬಲ್‌ಗೆ ಸಜ್ಜಾದ ಟೀಂ ಇಂಡಿಯಾ..!
 
ನನಗೆ ಗೊತ್ತು, ನೀನು ಇತ್ತೀಚೆಗೆ ಅಷ್ಟೊಂದು ಒಳ್ಳೆಯ ಸ್ಕೋರ್ ಮಾಡಿಲ್ಲ, ಹಾಗಂತ ತಾಳ್ಮೆ ಕಳೆದುಕೊಳ್ಳಬೇಡ. ಫಾರ್ಮ್‌ ಬಗ್ಗೆ ಅಷ್ಟೊಂದು ಯೋಚಿಸಬೇಡ. ಮಾನಸಿಕವಾಗಿ ಗಟ್ಟಿಯಾಗಲು ದ್ರಾವಿಡ್ ನಮಗೆ ನೆರವಾದರು ಎಂದು ಹಿಂದುಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಯಾಂಕ್ ತಮ್ಮ ಸಕ್ಸಸ್ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.  ಇನ್ನು ತಾಂತ್ರಿಕ ಕೌಶಲ್ಯದ ವಿಚಾರದಲ್ಲಿ ನನ್ನ ಸಾಮರ್ಥ್ಯದ ಬಗ್ಗೆ ಹೆಚ್ಚು ಒತ್ತು ನೀಡಿದರು. ನಿನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿಡು. ರನ್‌ ಅನಾಯಾಸವಾಗಿ ಬರಲಿದೆ ಎಂದು ಮಯಾಂಕ್‌ ಅಗರ್‌ವಾಲ್ ಹೇಳಿದ್ದಾರೆ.

India Tour of South Africa: ಅಜಿಂಕ್ಯ ರಹಾನೆ ಆಯ್ಕೆಯನ್ನು ಸಮರ್ಥಿಸಿಕೊಂಡ ಎಂಸ್‌ಕೆ ಪ್ರಸಾದ್‌

ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದ ಮಯಾಂಕ್ ಅಗರ್‌ವಾಲ್, ಮುಂಬೈ ಟೆಸ್ಟ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದ ಸಹಾಯದಿಂದ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ. 

click me!