
ರಾಂಚಿ(ಅ.23): ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಗೆಲುವು ಸಾಧಿಸೋ ಮೂಲಕ ಟೀಂ ಇಂಡಿಯಾ 120 ಅಂಕ ಸಂಪಾದಿಸಿದೆ. ಈ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿದೆ. ಇಷ್ಟೇ ಅಲ್ಲ ಈ ಸರಣಿಯಲ್ಲಿ ಕೊಹ್ಲಿ ಸೈನ್ಯ ಹಲವು ದಾಖಲೆ ಬರೆದಿದೆ.
ಇದನ್ನೂ ಓದಿ: ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ 5 ಕ್ರೀಡಾಂಗಣ ಸಾಕು; ವಿರಾಟ್ ಕೊಹ್ಲಿ!
11ನೇ ಸರಣಿ ಜಯ: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇದು ಭಾರತಕ್ಕೆ ಸಿಕ್ಕ 11ನೇ ಸರಣಿ ಜಯ. ಜತೆಗೆ ತವರಿನಲ್ಲಿ ಸತತ 11ನೇ ಸರಣಿವೂ ಹೌದು. ತವರಿನಲ್ಲಿ 6ನೇ ಬಾರಿಗೆ ಸರಣಿ ಕ್ಲೀನ್ ಸ್ವೀಪ್ ಮಾಡಿದ ಹಿರಿಮೆಗೆ ಭಾರತ ತಂಡ ಪಾತ್ರವಾಯಿತು.
ಸರಣಿ ಶ್ರೇಷ್ಠ
ಈ ಪಂದ್ಯದಲ್ಲಿ ದ್ವಿಶತಕದೊಂದಿಗೆ ಸರಣಿಯಲ್ಲಿ ಒಟ್ಟು 529 ರನ್ ಗಳಿಸಿದ ರೋಹಿತ್ ಶರ್ಮಾಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ದೊರೆಯಿತು.
60 ವಿಕೆಟ್
ಸರಣಿಯಲ್ಲಿ ಭಾರತೀಯ ಬೌಲರ್‌ಗಳು ಒಟ್ಟು 60 ವಿಕೆಟ್ ಕಬಳಿಸಿದರು. ಮೂರು ಟೆಸ್ಟ್‌ಗಳ ಎರಡೂ ಇನ್ನಿಂಗ್ಸ್‌ಗಳಲ್ಲಿ ದ.ಆಫ್ರಿಕಾ ಆಲೌಟ್ ಆಯಿತು.
25 ವಿಕೆಟ್
ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಕೇವಲ 25 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು. ಭಾರತ ಒಮ್ಮೆಯೂ ಆಲೌಟ್ ಆಗಲಿಲ್ಲ.
47 ಸಿಕ್ಸರ್
ಸರಣಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಒಟ್ಟು 47 ಸಿಕ್ಸರ್ ಸಿಡಿಸಿದರು. ಸರಣಿಯೊಂದರಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಸಿಕ್ಸರ್ ದಾಖಲೆಯಿದು.
ವೇಗಿಗಳ ಪ್ರಾಬಲ್ಯ
ಭಾರತದಲ್ಲಿ ಸ್ಪಿನ್ನರ್‌ಗಳೇ ಹೆಚ್ಚು ಪ್ರಾಬಲ್ಯ ಸಾಧಿಸುತ್ತಾರೆ. ಆದರೆ ಈ ಸರಣಿ ವೇಗದ ಬೌಲರ್‌ಗಳು ಹೊಸ ದಿಕ್ಕಿನತ್ತ ಸಾಗಿರುವುದನ್ನು ತೋರಿಸಿತು. ಸರಣಿಯಲ್ಲಿ ಪ್ರಮುಖ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ (13 ವಿಕೆಟ್) ಹಾಗೂ ಆರ್.ಅಶ್ವಿನ್ (15 ವಿಕೆಟ್) ಸೇರಿ ಒಟ್ಟು 28 ವಿಕೆಟ್ ಕಿತ್ತರೆ, ಪ್ರಮುಖ ವೇಗಿಗಳಾದ ಮೊಹಮದ್ ಶಮಿ (3 ಟೆಸ್ಟಲ್ಲಿ 13 ವಿಕೆಟ್), ಉಮೇಶ್ ಯಾದವ್ (2 ಟೆಸ್ಟಲ್ಲಿ 11 ವಿಕೆಟ್) ಹಾಗೂ ಇಶಾಂತ್ ಶರ್ಮಾ (2 ಟೆಸ್ಟಲ್ಲಿ 2 ವಿಕೆಟ್) ಸೇರಿ ಒಟ್ಟು 26 ವಿಕೆಟ್ ಕಿತ್ತರು.
ನಾವು ಹೇಗೆ ಆಡುತ್ತಿದ್ದೇವೆ ಎನ್ನುವುದನ್ನು ಎಲ್ಲರೂ ನೋಡುತ್ತಿದ್ದಾರೆ. ನಮಗೆ ಸಹಕರಿಸದ ಪಿಚ್‌ಗಳಲ್ಲೂ ನಾವು ಯಶಸ್ಸು ಕಾಣುತ್ತಿದ್ದೇವೆ. ಈ ವಿಚಾರಕ್ಕೆ ನನಗೆ ಬಹಳ ಹೆಮ್ಮೆ ಇದೆ. ತವರಿನಾಚೆಯೂ ನಾವು ಇದೇ ರೀತಿ ಆಟವಾಡಲಿದ್ದೇವೆ.
- ವಿರಾಟ್ ಕೊಹ್ಲಿ, ಭಾರತದ ನಾಯಕ
ಪ್ರತಿ ಪಂದ್ಯದಲ್ಲೂ ನಾವು ತಪ್ಪುಗಳನ್ನು ಮಾಡಿದೆವು. ಭಾರತೀಯರು ನಮ್ಮ ಮೇಲೆ ನಿರ್ದಯವಾಗಿ ಸವಾರಿ ಮಾಡಿದರು. ಈ ಆಘಾತದಿಂದ ಹೊರಬರಲು ಸಮಯ ಹಿಡಿಯಲಿದೆ. ಭಾರತ ಸದ್ಯ ಅತ್ಯಂತ ಬಲಿಷ್ಠ ತಂಡ.
- ಫಾಫ್ ಡು ಪ್ಲೆಸಿ, ದ.ಆಫ್ರಿಕಾ ನಾಯಕ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.