ಆಸ್ಟ್ರೇಲಿಯಾ ಮಣಿಸಿ ತಿರುಗೇಟು ನೀಡಿದ ಭಾರತ; ಸರಣಿ ಸಮಬಲ!

By Suvarna News  |  First Published Jan 17, 2020, 9:32 PM IST

ಆಸ್ಟ್ರೇಲಿಯಾ ವಿರುದ್ಧದ 2ನೇ ಹಾಗೂ ಮಹತ್ವದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಭಾರತ ಮೊದಲ ಸೋಲಿಗೆ ತಕ್ಕ ಉತ್ತರ ನೀಡಿದೆ. ರಾಜ್‌ಕೋಟ್ ಪಂದ್ಯದ ಹೈಲೈಟ್ಸ್ ಇಲ್ಲಿದೆ. 


ರಾಜ್‌ಕೋಟ್(ಜ.17): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ, 2ನೇ ಪಂದ್ಯದಲ್ಲಿ ತಿರುಗೇಟು ನೀಡಿದೆ. ರಾಜ್‌ಕೋಟ್‌ನಲ್ಲಿ ನಡೆಗ ಮಹತ್ವದ ಪಂದ್ಯದಲ್ಲಿ ಭಾರತ 36 ರನ್ ಗೆಲುವು ಸಾಧಿಸಿದೆ. ಈ ಮೂಲಕ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಫೈನಲ್ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ:  ಆಸ್ಟ್ರೇಲಿಯಾಗೆ ಕಠಿಣ ಗುರಿ ನೀಡಿದ ಟೀಂ ಇಂಡಿಯಾ.

Latest Videos

ಆಸ್ಟ್ರೇಲಿಯಾಗೆ 341 ರನ್ ಟಾರ್ಗೆಟ್ ನೀಡಿದ ಭಾರತ ಆರಂಭದಲ್ಲಿ ಒತ್ತಡ ಹೇರಿತು. ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ನಾಯಕ ಆರೋನ್ ಫಿಂಚ್ ಮೊದಲ ಪಂದ್ಯದ ರೀತಿಯಲ್ಲಿ ಅಬ್ಬರಿಸಲಿಲ್ಲ. ಅಬ್ಬರಿಸಲು ಭಾರತೀಯ ಬೌಲರ್ ಅವಕಾಶ ನೀಡಲಿಲ್ಲ. ಡೇವಿಡ್ ವಾರ್ನರ್ 15 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.

33 ರನ್ ಸಿಡಿಸಿದ ಫಿಂಚ್, ರವೀಂದ್ರ ಜಡೇಜಾ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಕನ್ನಡಿಗ ಕೆಎಲ್ ರಾಹುಲ್ ಮಾಡಿದ ಸ್ಟಂಪ್‌ನಿಂದ ಫಿಂಚ್ ಪೆವಿಲಿಯನ್ ಸೇರಿಕೊಂಡರು. ಆದರೆ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಬುಶೆನ್ ಜೊತೆಯಾಟ ಭಾರತಕ್ಕೆ ಅಪಾಯದ ಸೂಚನೆ ನೀಡಿತು.  ಇವರಿಬ್ಬರು ಆಸೀಸ್ ತಂಡಕ್ಕೆ ಚೇತರಿಕೆ ನೀಡಿದರು. ಒಂದು ಹಂತದಲ್ಲಿ ಆಸೀಸ್ ಸಂಪೂರ್ಣ ಮೇಲುಗೈ ಸಾಧಿಸಿತು.

ಇದನ್ನೂ ಓದಿ: ಟೀಂ ಇಂಡಿಯಾ ಆಯ್ಕೆಗೆ ಎಂ.ಎಸ್.ಧೋನಿ ಲಭ್ಯ; ಶೀಘ್ರದಲ್ಲೇ ಘೋಷಣೆ?.

ಲಬುಶೇನ್ ಹಾಗೂ ಸ್ಮಿತ್ ಜೋಡಿ ಬೇರ್ಪಡಿಸುವಲ್ಲಿ ರವೀಂಜ್ರ ಜಡೇಜಾ ಯಶಸ್ವಿಯಾದರು. ಲಬುಶೇನ್ 46 ರನ್ ಸಿಡಿಸಿ ಔಟಾದರು. ಅಲೆಕ್ಸ್ ಕ್ಯಾರಿ 18 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಶತಕದತ್ತ ಮುನ್ನಗ್ಗುತ್ತಿದ್ದ ಸ್ಮಿತ್, ಭಾರತದ ಆತಂಕ ಹೆಚ್ಚಿಸಿದ್ದರು. ಆದರೆ ಕುಲ್ದೀಪ್ ಯಾದವ್ ಎಸೆತದಲ್ಲಿ ಸ್ಮಿತ್ ಇನ್‌ಸೈಡ್ ಎಡ್ಜ್ ಮೂಲಕ ಬೋಲ್ಡ್ ಆದರು.  ಸ್ಮಿತ್ 98 ರನ್ ಸಿಡಿಸಿ ಔಟಾದರು.

ಸ್ಮಿತ್ ಬೆನ್ನಲ್ಲೇ ಆಶ್ಟನ್ ಟರ್ನರ್ ಹಾಗೂ ಪ್ಯಾಟ್ ಕಮಿನ್ಸ್ ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಹ್ಯಾಟ್ರಿಕ್ ಅವಕಾಶ ಪಡೆದುಕೊಂಡರು. ಮೂರನೇ ಎಸೆತದವನ್ನೂ ಯಾರ್ಕರ್ ಎಸೆದ ಶಮಿ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.  ಇತ್ತ ನವದೀಪ್ ಸೈನಿ ಕೂಡ ಯಾರ್ಕರ್ ಮೂಲಕ ಆಸ್ಟನ್ ಅಗರ್ ವಿಕೆಟ್ ಕಬಳಿಸಿದರು. 

ಮಿಚೆಲ್ ಸ್ಟಾರ್ಕ್ ಕೂಡ ಸೈನಿಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ 49.1 ಓವರ್‌ಗಳಲ್ಲಿ 304 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತ 36 ರನ್ ಗೆಲುವು ಸಾಧಿಸಿತು. 3 ಪಂದ್ಯಗಳ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ ಜನವರಿ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

 

click me!