Virat Kohli sacked as ODI captain: ಮೊದಲ ಬಾರಿಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ!

By Suvarna NewsFirst Published Dec 25, 2021, 7:52 PM IST
Highlights

ಡಿಸೆಂಬರ್ ಆರಂಭದಲ್ಲಿ ಸಂಚಲನ ಮೂಡಿಸಿದ ಪ್ರಕರಣ
ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಟೆಸ್ಟ್ ತಂಡ
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆಯೂ ಕೋಚ್ ದ್ರಾವಿಡ್ ಮಾತು
 

ಸೆಂಚುರಿಯನ್ (ಡಿ.25): ಭಾರತೀಯ ಕ್ರಿಕೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಏಕದಿನ ಕ್ರಿಕೆಟ್ ತಂಡದ (ODI Team Captaincy) ನಾಯಕತ್ವ ವಿಚಾರ ಈಗ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ಈ ಕುರಿತಾಗಿ ಸಾಕಷ್ಟು ಪರ-ವಿರೋಧದ ಚರ್ಚೆ ನಡೆದಿದ್ದರೂ, ಟೀಂ ಇಂಡಿಯಾ ಕೋಚ್ (Team India Coach) ಹಾಗೂ ದಿಗ್ಗಜ ಬ್ಯಾಟ್ಸ್ ಮನ್ ರಾಹುಲ್ ದ್ರಾವಿಡ್ (Rahul Dravid)ಮಾತ್ರ ಒಂದೇ ಒಂದು ಪ್ರತಿಕ್ರಿಯೆ ನೀಡಿರಲಿಲ್ಲ. ಈವರೆಗೂ ಈ ಪ್ರಕರಣದ ಬಗ್ಗೆ ಮೌನ ವಹಿಸಿದ್ದ ಟೀಂ ಇಂಡಿಯಾ ಕೋಚ್, ವಾಲ್ ಖ್ಯಾತಿಯ ದ್ರಾವಿಡ್ ಈಗ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ (India Tour of South Africa) ಪ್ರವಾಸದಂಥ ಪ್ರಮುಖ ಸರಣಿ ಮುಂದಿದ್ದರೂ, ಟೀಂ ಇಂಡಿಯಾದಲ್ಲಿ ಏಕದಿನ ತಂಡದ ನಾಯಕತ್ವ ಬದಲಾವಣೆ ಹಾಗೂ ಆ ನಂತರದ ವಿವಾದಗಳು ಅಗತ್ಯವಿತ್ತೇ ಎನ್ನು ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ದ್ರಾವಿಡ್, ತಂಡದ ನಾಯಕರನ್ನು ಆಯ್ಕೆ ಮಾಡುವುದಾಗಲಿ, ಸೀಮಿತ ಓವರ್ ಗಳ ತಂಡಕ್ಕೆ ನಾಯಕತ್ವವನ್ನು ಯಾರಿಗೆ ನೀಡುಬಹುದು ಎನ್ನುವ ನಿರ್ಧಾರವಾಗಲಿ ನಾನು ಮಾಡಲು ಸಾಧ್ಯವಿಲ್ಲ. ಇದು ಬಿಸಿಸಿಐನ (BCCI) ಆಯ್ಕೆ ಸಮಿತಿಯ ಕೆಲಸ, ನನ್ನದಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ನಾಯಕತ್ವದಲ್ಲಿ ಬದಲಾವಣೆ ವಿಚಾರವಾಗಲಿ ಅಥವಾ ಇತರೇ ಯಾವುದೇ ವಿಚಾರವಾಗಲಿ ಆಟಗಾರರೊಂದಿಗೆ ನಾನು ವೈಯಕ್ತಿಕ ಸಂಭಾಷಣೆ ನಡೆಸುವುದೇ ಇಲ್ಲ. ತಂಡದೊಂದಿಗೆ ಪ್ರವಾಸ ಕೈಗೊಂಡಿದ್ದಾಗ ತಂಡದ ದೃಷ್ಟಿಯಲ್ಲಿ ತಮ್ಮ ಮಾತುಗಳು ಇರುತ್ತವೆ ಎಂದು ದ್ರಾವಿಡ್ ಹೇಳಿದ್ದಾರೆ.

ಭಾರತೀಯ ಮಾಧ್ಯಮಗಳಿಂದ ಬಂದ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, "ಇವೆಲ್ಲ ಆಯ್ಕೆ ಸಮಿತಿಯ ಕೆಲಸಗಳು. ವೈಯಕ್ತಿಕ ಸಂಭಾಷಣೆಗಳು ಹಾಗೂ ಮಾತುಕತೆಗಳ ಮಧ್ಯೆ ನಾನು ತೂರುವುದಿಲ್ಲ. ಅದಲ್ಲದೆ, ಇಂಥ ಮಾತುಕತೆಗಳನ್ನು ನಡೆಸಲು ಇದು ಸಮಯವೂ ಅಲ್ಲ' ಎಂದು ಹೇಳಿದರು.

Mayank Agarwal Success Secret: ಫಾರ್ಮ್‌ಗೆ ಮರಳಲು ರಾಹುಲ್ ದ್ರಾವಿಡ್‌ ನೆರವನ್ನು ಸ್ಮರಿಸಿದ ಕನ್ನಡಿಗ..!
ಇದೇ ವೇಳೆ ವಿರಾಟ್ (Virat Kohli) ಅವರ ನಾಯಕತ್ವವನ್ನು ಶ್ಲಾಘನೆ ಮಾಡಿದ ದ್ರಾವಿಡ್, ಟೆಸ್ಟ್ ತಂಡವನ್ನು (India Test Team) ಕಟ್ಟುವಲ್ಲಿ ಹಾಗೂ ವಿದೇಶದಲ್ಲೂ ತಂಡ ಟೆಸ್ಟ್ ಸರಣಿ ಗೆಲ್ಲುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು. "ಟೆಸ್ಟ್ ತಂಡದ ನಿರ್ವಹಣೆಯ ಆಧಾರದಲ್ಲಿ ಹೇಳುವುದಾದರೆ, ನಮ್ಮ ಮುಂದೆ ಈಗ ಸರಣಿ ಗೆಲ್ಲುವ ಜವಾಬ್ದಾರಿ ಇದೆ. ನ್ಯೂಜಿಲೆಂಡ್ ವಿರುದ್ಧ ತಂಡ ಉತ್ತಮವಾಗಿ ಆಡಿತು. ಆದರೆ, ಭಾರತದ ಹೊರಗೆ ಇದು ನಮ್ಮ ಮೊದಲ ಟೆಸ್ಟ್ ಸರಣಿ. ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ (WTC) ಗೋಲ್ ಸದ್ಯಕ್ಕಿಲ್ಲ. ಒಂದು ಟೆಸ್ಟ್ ತಂಡವಾಗಿ ಪ್ರಗತಿ ಕಾಣುವುದಷ್ಟೇ ಮುಂದಿರುವ ಗುರಿ. ವಿರಾಟ್ ಕೊಹ್ಲಿ ಈಗಾಗಲೇ ದೊಡ್ಡ ಪ್ರಮಾಣದ ಪಾತ್ರ ಇಲ್ಲಿ ನಿಭಾಯಿಸಿದ್ದಾರೆ. ಅವರೊಂದಿಗೆ ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್ ನಲ್ಲಿ ಯಶಸ್ಸು ಕಾಣಬೇಕು ಎಂದು ಬಯಸುವ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ಅವರು ಒಬ್ಬರು' ಎಂದು ದ್ರಾವಿಡ್ ಹೇಳಿದರು.

Cricket News: ಮುಂಬರುವ ದಿನಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳುವ ಸುಳಿವು ಕೊಟ್ಟ ದ್ರಾವಿಡ್
ಕೋವಿಡ್-19 ಕಾರಣದಿಂದಾಗಿ ದಕ್ಷಿಣ ಅಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಯಾವುದೇ ಅಭ್ಯಾಸ ಪಂದ್ಯವಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದ್ರಾವಿಡ್, ಕಳೆದ ವಾರವಿಡೀ ಟೀಂ ಇಂಡಿಯಾ ಉತ್ತಮವಾಗಿ ನೆಟ್ಸ್ ಅಭ್ಯಾಸ ಮಾಡಿದೆ, ಆ ಮೂಲಕ ಟೆಸ್ಟ್ ಸರಣಿಗೆ ಸಿದ್ಧವಾಗಿದೆ ಎಂದಿದ್ದಾರೆ. "ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಸಾಕಷ್ಟು ಸಮಯ ನಮಗೆ ಸಿಕ್ಕಿದೆ. ಕೋವಿಡ್-19 ಕಾರಣದಿಂದಾಗಿ ಪ್ರಸ್ತುತ ಇರುವ ಸ್ಥಿತಿಯೇ ಹಾಗಿದೆ. ಈಗಾಗಲೇ 6 ರಿಂದ 7 ದಿನ ಸತತವಾಗಿ ನೆಟ್ಸ್ ಅಭ್ಯಾಸ ಮಾಡುವ ಮೂಲಕ ಸರಣಿಗೆ ಸಿದ್ಧವಾಗಿದ್ದೇವೆ' ಎಂದು ಹೇಳಿದರು. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಸೆಂಚುರಿಯನ್ ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಭಾನುವಾರ ಆರಂಭವಾಗಲಿದೆ.

click me!