Kohli Century Wait Continued : ಶತಕವಿಲ್ಲದೆ ಸತತ 2ನೇ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!

By Suvarna NewsFirst Published Dec 29, 2021, 9:34 PM IST
Highlights

ಸತತ 2 ವರ್ಷ ಶತಕವಿಲ್ಲದೇ ಕ್ಯಾಲೆಂಡರ್ ವರ್ಷ ಪೂರ್ಣ ಮಾಡಿದ ಕಿಂಗ್ ಕೊಹ್ಲಿ
ಸೆಂಚುರಿಯನ್ ಟೆಸ್ಟ್ ನ 2ನೇ ಇನ್ನಿಂಗ್ಸ್ ನಲ್ಲಿ 18 ರನ್ ಗೆ ಔಟ್
ಹಾಲಿ ವರ್ಷ 30 ಇನ್ನಿಂಗ್ಸ್ ಆಡಿದರೂ ಬಾರದ ಶತಕ
 

ಬೆಂಗಳೂರು (ಡಿ.29): ಭಾರತ ಟೆಸ್ಟ್ ತಂಡದ ನಾಯಕ (Team India Test Captain)ವಿರಾಟ್ ಕೊಹ್ಲಿಯ (Virat Kohli) 71ನೇ ಅಂತಾರಾಷ್ಟ್ರೀಯ ಶತಕಕ್ಕೆ (International Century) ಕಾದು ಕಾದು ಯಶಸ್ವಿ ಎರಡು ವರ್ಷ ಮುಕ್ತಾಯಗೊಂಡಿದೆ. 2019ರ ನವೆಂಬರ್ 23 ರಂದು ಈಡನ್ ಗಾರ್ಡನ್ಸ್ ನಲ್ಲಿ(Eden Gardens) ನಡೆದ ಅಹರ್ನಿಶಿ ಟೆಸ್ಟ್ (Day and Night Test) ಪಂದ್ಯದಲ್ಲಿ ಬಾಂಗ್ಲಾದೇಶ (Bangladesh) ವಿರುದ್ಧ ಟೆಸ್ಟ್ ಶತಕ ಬಾರಿಸಿದ್ದೇ ಕೊನೆ, ಅದಾದ ಬಳಿಕ ಕೊಹ್ಲಿ ಬ್ಯಾಟ್ ನಿಂದ ಮೂರಂಕಿ ದಾಖಲಾಗಿಲ್ಲ. ಅಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ 70ನೇ ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ, ನಿವೃತ್ತಿಯಾಗುವ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಚಿನ್ ರ 100 ಶತಕದ ದಾಖಲೆಯನ್ನು ಸರಿಗಟ್ಟಬಹುದು ಅಥವಾ ಮುರಿಯಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ಪ್ರಸ್ತುತ ಲಕ್ಷಣಗಳನ್ನು ಕಂಡರೆ ಕೊಹ್ಲಿ ಸಚಿನ್ (Sachin Tendulkar) ದಾಖಲೆಯ ಸನಿಹ ಸುಳಿಯುವುದೂ ಕೊಹ್ಲಿಗೆ ಅಸಾಧ್ಯ ಎನ್ನುವಂತಿದೆ. ಅದಕ್ಕೆ ಕಾರಣ, ವಿರಾಟ್ ಕೊಹ್ಲಿ ಸತತ 2ನೇ ವರ್ಷವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕವಿಲ್ಲದೆ ಮುಗಿಸಿದ್ದಾರೆ. 2016 ರಿಂದ 2018ರ ಅವಧಿಯಲ್ಲಿ ವಿರಾಟ್ ಕೊಹ್ಲಿ ಎಂಥ ಅದ್ಭುತ ಫಾರ್ಮ್ ನಲ್ಲಿದ್ದರೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಆಡಿದ ಪ್ರತಿ ಐದು ಇನ್ನಿಂಗ್ಸ್ ಗೆ ಒಂದರಂತೆ ಶತಕ ಸಿಡಿಸಿದ್ದರು. 

 ಬುಧವಾರ ಸೆಂಚುರಿಯನ್ ಟೆಸ್ಟ್ ನ (Centurion Test)ತಮ್ಮ 2ನೇ ಇನ್ನಿಂಗ್ಸ್ ನಲ್ಲಿ 18 ರನ್ ಗೆ ಔಟ್ ಆಗುವ ಮೂಲಕ ಕೊಹ್ಲಿ 2021ರ ವರ್ಷವನ್ನೂ ಶತಕವಿಲ್ಲದೆ ಮುಗಿಸಿದಂತಾಗಿದೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಆ ವರ್ಷ ಆಡಿದ 5 ಇನ್ನಿಂಗ್ಸ್ ಗಳಿಂದ ಶತಕ ದಾಖಲಿಸಲು ವಿಫಲರಾಗಿದ್ದರು.  2009ರಲ್ಲಿ 8 ಇನ್ನಿಂಗ್ಸ್ ಗಳಿಂದ 1 ಶತಕ ಸಿಡಿಸಿದ್ದರೆ,  2010ರಲ್ಲಿ25 ಇನ್ನಿಂಗ್ಸ್ ಗಳಿಂದ 3 ಶತಕ ಹಾಗೂ 2011ರಲ್ಲಿ 47 ಇನ್ನಿಂಗ್ಸ್ ಗಳಿಂದ 4 ಶತಕ ಸಿಡಿಸಿದ್ದರು.

2012, 2013 ಹಾಗೂ 2014ರಲ್ಲಿ ಆಡಿದ 46, 43 ಹಾಗೂ 47 ಇನ್ನಿಂಗ್ಸ್ ಗಳಿಂದ ಕ್ರಮವಾಗಿ 8, 6, 8 ಶತಕಗಳನ್ನು ಸಿಡಿಸಿದ್ದರು. 2015ರಲ್ಲಿ ಆಡಿದ 37 ಇನ್ನಿಂಗ್ಸ್ ಗಳಿಂದ 4 ಶತಕ ಸಿಡಿಸಿದ್ದರೆ, 2016ರಿಂದ ಅವರ ಬ್ಯಾಟಿಂಗ್ ವರಸೆಯೇ ಬದಲಾಗಿ ಹೋಗಿತ್ತು. 2016 ರಲ್ಲಿ ಆಡಿದ 41 ಇನ್ನಿಂಗ್ಸ್ ಗಳಿಂದ 7 ಶತಕ, 2017ರಲ್ಲಿ 52 ಇನ್ನಿಂಗ್ಸ್ ಗಳಿಂದ 11 ಶತಕ, 2018ರಲ್ಲಿ 47 ಇನ್ನಿಂಗ್ಸ್ ಗಳಿಂದ 11 ಶತಕ ಕೊನೆಗೆ 2019ರಲ್ಲಿ46 ಇನ್ನಿಂಗ್ಸ್ ಗಳಿಂದ 7 ಶತಕ ಸಿಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಬ್ಯಾಟಿಂಗ್ ರೌದ್ರಾವತಾರವನ್ನು ತೋರಿಸಿದ್ದರು. ಆದರೆ, 2020ರಿಂದ ಅವರ ಬ್ಯಾಟಿಂಗ್ ಮೇಲೆ ದೃಷ್ಟಿ ಬಿತ್ತೇನೋ ಅನ್ನೋದು ಗೊತ್ತಿಲ್ಲ. ಆಡಿದ 24 ಇನ್ನಿಂಗ್ಸ್ ಗಳಿಂದ ಒಂದೂ ಶತಕ ದಾಖಲಿಸಲು ವಿಫಲರಾಗಿದ್ದರೆ,  2021ರಲ್ಲಿ ಆಡಿದ 30 ಇನ್ನಿಂಗ್ಸ್ ಗಳ ಕಥೆಯೂ ಅದೇ ಆಗಿದೆ.

Kohli-Kumble Controversy: ಕೋಚ್-ಕ್ಯಾಪ್ಟನ್ ನಡುವೆ ವಿವಾದಕ್ಕೆ ಕಾರಣವಾಗಿದ್ದು ಈ ಆಟಗಾರನ ಆಯ್ಕೆ!
2019ರ ನವೆಂಬರ್ 23 ರಿಂದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 52 ಪಂದ್ಯವಾಡಿದ್ದು 60 ಇನ್ನಿಂಗ್ಸ್ ನಲ್ಲಿ ಕಣಕ್ಕಿಳಿದಿದ್ದಾರೆ.  7 ಬಾರಿ ಅಜೇಯವಾಗುಳಿದ ಸಾಧನೆ ಅವರದು. ಈ ಅವಧಿಯಲ್ಲಿ 39.20ರ ಸರಾಸರಿಯಲ್ಲಿ 2078 ರನ್ ಬಾರಿಸಿರುವ ಕೊಹ್ಲಿಯ ಗರಿಷ್ಠ ಮೊತ್ತ ಅಜೇಯ 94 ರನ್. ಈ ಅವಧಿಯಲ್ಲಿ ಟೀಂ ಇಂಡಿಯಾದ ಚೇಸ್ ಮಾಸ್ಟರ್ 20 ಬಾರಿ ಅರ್ಧಶತಕ ಬಾರಿಸಿದ್ದರೆ, 6 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ.  185 ಬೌಂಡರಿ ಹಾಗೂ 60 ಸಿಕ್ಸರ್ ಗಳು ಕೊಹ್ಲಿಯ ಬ್ಯಾಟ್ ನಿಂದ ಸಿಡಿದಿವೆ.  

click me!