
ಅಹಮದಾಬಾದ್(ಏ.26): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಎದುರು ರೋಹಿತ್ ಶರ್ಮಾ ನೇತೃತ್ವದ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಹೀನಾಯ ಸೋಲು ಅನುಭವಿಸಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ನೀಡಿದ್ದ 208 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಟೈಟಾನ್ಸ್ ಪರ ಆಫ್ಘಾನಿಸ್ತಾನದ ಸ್ಪಿನ್ನರ್‌ಗಳಾದ ನೂರ್ ಅಹಮ್ಮದ್(37/3) ಹಾಗೂ ರಶೀದ್ ಖಾನ್(27/2) ಮಾರಕ ದಾಳಿ ನಡೆಸುವ ಮೂಲಕ ಮುಂಬೈ ಬ್ಯಾಟರ್‌ಗಳು ತಬ್ಬಿಬ್ಬಾಗುವಂತೆ ಮಾಡಿದರು. ಮುಂಬೈ ಇಂಡಿಯನ್ಸ್ ತಂಡವು ಸೋಲು ಅನುಭವಿಸಿದ ಬೆನ್ನಲ್ಲೇ ಮಾತನಾಡಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ ಕೆಲವು ಐಪಿಎಲ್ ಪಂದ್ಯಗಳಿಂದ ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಎದುರಾಳಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ 8 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಟೀಂ ಇಂಡಿಯಾ ನಾಯಕರಾಗಿರುವ ರೋಹಿತ್ ಶರ್ಮಾ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಐಪಿಎಲ್‌ನಿಂದ ಕೆಲ ಪಂದ್ಯಗಳ ಪಟ್ಟಿಗೆ ಬಿಡುವು ಪಡೆಯಲಿ ಎಂದು ಸಲಹೆ ನೀಡಿದ್ದಾರೆ.
"ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಲವು ಬದಲಾವಣೆಯನ್ನು ನಾನು ನೋಡಲು ಬಯಸುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕೆಲವು ಪಂದ್ಯಗಳ ಮಟ್ಟಿಗಾದರೂ ರೋಹಿತ್ ಶರ್ಮಾ, ಐಪಿಎಲ್‌ನಿಂದ ಬ್ರೇಕ್ ತೆಗೆದುಕೊಳ್ಳಲಿ ಎಂದು ಬಯಸುತ್ತೇನೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಫಿಟ್ ಆಗಿರುವ ಉದ್ದೇಶದಿಂದ ರೋಹಿತ್ ಐಪಿಎಲ್‌ನಿಂದ ಬಿಡುವು ಪಡೆಯಲಿ ಎಂದು ಬಯಸುತ್ತೇನೆ. ಅವರು ಐಪಿಎಲ್‌ನ ಕೊನೆಯ ಕೆಲ ಪಂದ್ಯಗಳಿಗೆ ಮತ್ತೆ ಬೇಕಿದ್ದರೇ ವಾಪಾಸ್ಸಾಗಲಿ. ಆದರೆ ಸದ್ಯದ ಕೆಲ ಪಂದ್ಯಗಳಿಂದ ಬಿಡುವು ಪಡೆಯುವುದು ಒಳ್ಳೆಯದು" ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಸಾಕಷ್ಟು ಸಮಯದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆಯೂ ಗಮನಹರಿಸಬೇಕಿದೆ. ಹೀಗಾಗಿ ಮಧ್ಯದಲ್ಲಿ ವಿಶ್ರಾಂತಿ ಪಡೆದು, ಐಪಿಎಲ್‌ನ ಕೊನೆಯ ಮೂರ್ನಾಲ್ಕು ಪಂದ್ಯಗಳಲ್ಲಿ ಕಣಕ್ಕಿಳಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಲು ಲಯಕ್ಕೆ ಬರಲು ನೆರವಾಗಲಿದೆ ಎಂದು ಸನ್ನಿ ಹೇಳಿದ್ದಾರೆ.
IPL 2023 ಕೆಕೆಆರ್ ವಿರುದ್ಧ ಸೇಡಿಗೆ ಆರ್‌ಸಿಬಿ ತುಡಿತ!
ಇನ್ನು ಕಳೆದ ವರ್ಷದ ಐಪಿಎಲ್ ವೇಳೆ ವಿರಾಟ್ ಕೊಹ್ಲಿ ರನ್ ಬರ ಅನುಭವಿಸಿದ್ದರು. ಇದಾದ ಬಳಿಕ ಕ್ರಿಕೆಟ್‌ಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ರನ್ ಮಳೆ ಸುರಿಸುತ್ತಿದ್ದಾರೆ.
ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಭಾರತ ತಂಡದಲ್ಲಿ ರಹಾನೆ
ನವದೆಹಲಿ: ಜೂ.7ರಿಂದ ಲಂಡನ್ನ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಮಂಗಳವಾರ ಭಾರತ ತಂಡ ಪ್ರಕಟಗೊಂಡಿದ್ದು, ಕಳಪೆ ಆಟದಿಂದಾಗಿ ಕೆಲ ಸಮಯದಿಂದ ತಂಡದಿಂದ ಹೊರಬಿದ್ದಿದ್ದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ತಂಡಕ್ಕೆ ಮರಳಿದ್ದಾರೆ.
ಅಜಿಂಕ್ಯ ರಹಾನೆ 2022ರ ಜನವರಿಯಲ್ಲಿ ಕೊನೆ ಬಾರಿ ಟೆಸ್ಟ್ ಆಡಿದ್ದು, ನಿರೀಕ್ಷಿತ ಪ್ರದರ್ಶನ ನೀಡದ್ದಕ್ಕೆ ತಂಡದಿಂದ ಕೈಬಿಡಲಾಗಿತ್ತು. ಇದೇ ವೇಳೆ ಸತತ ವೈಫಲ್ಯಗಳಿಂದಾಗಿ ಟೀಕೆಗೆ ಗುರಿಯಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಭಾರತದಲ್ಲೇ ನಡೆದಿದ್ದ ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿದ್ದ ಸೂರ್ಯಕುಮಾರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ 15 ಮಂದಿಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ವಿಕೆಟ್ ಕೀಪರ್ ಆಗಿ ಭರತ್ ಮುಂದುವರಿಯಲಿದ್ದು, ವೇಗಿ ಉನಾದ್ಕತ್ ಕೂಡಾ ತಂಡಕ್ಕೆ ಮರಳಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಕೆ ಎಸ್ ಭರತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.