ದೀಪಕ್ ಚಹಾರ್ ದಾಳಿಗೆ ತತ್ತರಿಸಿದ ಬಾಂಗ್ಲಾ; ಸರಣಿ ಕೈವಶ ಮಾಡಿದ ಭಾರತ

By Web Desk  |  First Published Nov 10, 2019, 10:50 PM IST

ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯನ್ನು ರೋಹಿತ್ ಸೈನ್ಯ ಕೈವಶ ಮಾಡಿದೆ. ನಿರ್ಣಾಯಕ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ. 


ನಾಗ್ಪುರ(ನ.10): ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ಸರಣಿ ಅಷ್ಟೇ ರೋಚಕವಾಗಿ ಅಂತ್ಯಗೊಂಡಿದೆ.  ಬಾಂಗ್ಲಾದೇಶ ವಿರುದ್ದದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 30 ರನ್ ಗೆಲುವು ಸಾದಿಸೋ ಮೂಲಕ,  2-1 ಅಂತರದಲ್ಲಿ ಟಿ20 ಸರಣಿ ವಶಪಡಿಸಿದೆ.

ಗೆಲುವಿಗೆ 175 ರನ್ ಟಾರ್ಗೆಟ್ ಪಡೆದ ಬಾಂಗ್ಲಾದೇಶ ಆರಂಭಿಕ 2 ವಿಕೆಟ್ ಬಹುಬೇಗನೆ ಕಳೆದುಕೊಂಡಿತು. ಲಿಟ್ಟನ್ ದಾಸ್ 9 ಹಾಗೂ ಸೌಮ್ಯ ಸರ್ಕಾರ್ ಶೂನ್ಯ ಸುತ್ತಿದರು. 12 ರನ್‌ಗೆ 2 ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಸಂಭ್ರಮ ಆಚರಿಸಿತು. ಆದರೆ ಟೀಂ ಇಂಡಿಯಾಗೆ ಮೊಹಮ್ಮದ್ ನೈಮ್ ಹಾಗೂ ಮೊಹಮ್ಮದ್ ಮಿಥುನ್ ಜೊತೆಯಾಟ ತಲೆನೋವಾಗಿ ಪರಿಣಮಿಸಿತು.

Tap to resize

Latest Videos

ನೈಮ್ ಹಾಗೂ ಮಿಥುನ್ ಜೊತೆಯಾಟದಿಂದ ಟೀಂ ಇಂಡಿಯಾ ಮೇಲೆ ಒತ್ತಡ ಹೆಚ್ಚಾಯಿತು. ದಿಟ್ಟ ಹೋರಾಟ ನೀಡಿದ ನೈಮ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ನೈಮ್‌ಗೆ ಉತ್ತಮ ಸಾಥ್ ನೀಡಿದ ಮಿಥುನ್ 27 ರನ್ ಸಿಡಿಸಿ ನಿರ್ಗಮಿಸಿದರು. 110 ರನ್‌ಗೆ ಬಾಂಗ್ಲಾದೇಶ 3ನೇ ವಿಕೆಟ್ ಕಳೆದುಕೊಂಡಿತು.

ನೈಮ್ ಜೊತೆ ಇನಿಂಗ್ಸ್ ಕಟ್ಟಲು ಕಣಕ್ಕಿಳಿದ ಮುಶ್ಫಿಕರ್ ರಹೀಮ್ ಡಕೌಟ್ ಆದರು. ಟೀಂ ಇಂಡಿಯಾ ಅಲ್ಪ ಮೇಲುಗೈ ಸಾಧಿಸಿದರೂ ಆತಂಕ ದೂರವಾಗಲಿಲ್ಲ. ಕಾರಣ ಮೊಹಮ್ಮದ್ ನೈಮ್ ಶತತದತ್ತ ಮುನ್ನಗ್ಗುತ್ತಿದ್ದರು. ಆದರೆ ಶಿವಂ ದುಬೆ ಬೌಲಿಂಗ್‌ನಲ್ಲಿ ನೈಮ್ ವಿಕೆಟ್ ಒಪ್ಪಿಸಿದರು. ನೈಮ್ 81 ರನ್ ಸಿಡಿಸಿ ಔಟಾದರು.

ಅಷ್ಟರಲ್ಲಿ ಭಾರತದ ಆತ್ಮವಿಶ್ವಾಸ ಹೆಚ್ಚಾಯಿತು. ಒತ್ತಡ ಬಾಂಗ್ಲಾ ತಂಡದ ಮೇಲೆ ಬಿತ್ತು. ಆಫಿಫ್ ಹುಸೈನ್ ಹಾಗೂ ನಾಯಕ ಮೊಹಮ್ಮದುಲ್ಲಾ ಆಸರೆಯಾಗಲಿಲ್ಲ. ಶಪಿಉಲ್ ಇಸ್ಲಾಂ ಕೂಡ ಬಹುಬೇಗನೆ ಪೆವಿಲಿಯನ್‌ಗೆ ವಾಪಾಸ್ಸಾದರು. ಬಾಂಗ್ಲಾದೇಶ 19.2 ಓವರ್‌ಗಳಲ್ಲಿ 144 ರನ್‌ಗೆ ಆಲೌಟ್ ಆಯಿತು. ದೀಪಕ್ ಚಹಾರ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು.   ಇದರೊಂದಿಗೆ ಭಾರತ 30 ರನ್ ಗೆಲುವು ಕಂಡಿತು. ದೀಪಕ್ ಚಹಾರ್ 6 ವಿಕೆಟ್  ಹಾಗೂ ಶಿವಂ ದುಬೆ 3 ವಿಕೆಟ್ ಕಬಳಿಸಿ ಮಿಂಚಿದರು. 2-1 ಅಂತರದಲ್ಲಿ ಭಾರತ ಸರಣಿ ಗೆದ್ದುಕೊಂಡಿತು. 

click me!