70ರ ವಿಂಡೀಸ್‌, 90 ಆಸೀಸ್‌ನಷ್ಟೇ ಈಗ ಟೀಂ ಇಂಡಿಯಾ ಬಲಿಷ್ಠ

By Kannadaprabha News  |  First Published Oct 18, 2019, 11:47 AM IST

ವೆಸ್ಟ್ ಇಂಡೀಸ್ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್ ಬ್ರಿಯಾನ್ ಲಾರಾ ಟೀಂ ಇಂಡಿಯಾದ ಪ್ರದರ್ಶನವನ್ನು 70ರ ದಶಕದ ವಿಂಡೀಸ್, 90ರ ದಶಕದ ಆಸ್ಟ್ರೇಲಿಯಾ ತಂಡಕ್ಕೆ ಹೋಲಿಸಿದ್ದಾರೆ. ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆಯಾದ ಕನ್ನಡಪ್ರಭ ದೊಂದಿಗೆ ಬ್ರಿಯಾನ್ ಲಾರಾ ಹೇಳಿದ್ದೇನು ಎನ್ನುವುದರ ಸಂಪೂರ್ಣ ಮಾತುಕತೆ ಇಲ್ಲಿದೆ ನೋಡಿ.. 


ವರದಿ: ಸ್ಪಂದನ್ ಕಣಿಯಾರ್

ಮುಂಬೈ[ಅ.18]: ಭಾರತ ಕ್ರಿಕೆಟ್‌ ತಂಡ ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಆಟವಾಡುತ್ತಿದೆ. ಕಳೆದ ಕೆಲ ವರ್ಷಗಳಿಂದ ತವರಿನಾಚೆಯೂ ಅಬ್ಬರಿಸುತ್ತಿರುವ ವಿರಾಟ್‌ ಕೊಹ್ಲಿಯ ಪಡೆಯ ಆಟ ವೆಸ್ಟ್‌ಇಂಡೀಸ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಬ್ರಿಯಾನ್‌ ಲಾರಾರ ಮನ ಸೆಳೆದಿದೆ. ಗುರುವಾರ ಇಲ್ಲಿ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆಯಾದ ‘ಕನ್ನಡಪ್ರಭ’ದೊಂದಿಗೆ ಮಾತಿಗೆ ಸಿಕ್ಕ ಲಾರಾ, ಹಾಲಿ ಭಾರತ ತಂಡವನ್ನು 70ರ ದಶಕದ ವೆಸ್ಟ್‌ ಇಂಡೀಸ್‌, 90, 2000ರ ಆಸ್ಪ್ರೇಲಿಯಾ ತಂಡಕ್ಕೆ ಹೋಲಿಸಿದರು. ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಭಾರತವೇ ನಂ.1 ಎಂದು ಲಾರಾ ಅಭಿಪ್ರಾಯಿಸಿದರು.

Latest Videos

ಡೆನ್ಮಾರ್ಕ್ ಓಪನ್‌: ಮೊದಲ ಸುತ್ತಲ್ಲೇ ಸೈನಾಗೆ ಆಘಾತ!

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಲಾರಾ, ತಂಡ ಚಾಂಪಿಯನ್‌ಶಿಪ್‌ ಗೆಲ್ಲುವ ನೆಚ್ಚಿನ ತಂಡ ಎಂದರು. ‘ಭಾರತ ತವರಿನಲ್ಲಿ ಎಂದಿನಂತೆ ಅತ್ಯಂತ ಶ್ರೇಷ್ಠ ಪ್ರದರ್ಶನ ತೋರುತ್ತಿದೆ. ಕಳೆದ ಕೆಲ ವರ್ಷಗಳಿಂದ ತವರಿನಾಚೆಯೂ ಅಮೋಘ ಆಟವಾಡುತ್ತಾ, ಗೆಲುವುಗಳನ್ನು ಕಾಣುತ್ತಿದೆ. ಇದು ನಿಜಕ್ಕೂ ಅದ್ಭುತ. ಖಂಡಿತವಾಗಿಯೂ ಹಿಂದಿನ ವಿಂಡೀಸ್‌ ಹಾಗೂ ಆಸ್ಪ್ರೇಲಿಯಾ ತಂಡಗಳನ್ನು ಭಾರತ ನೆನಪಿಸುತ್ತಿದೆ. ಭಾರತ ಪ್ರಾಬಲ್ಯ ಮೆರೆಯುತ್ತಿರುವ ರೀತಿ ನೋಡಿದರೆ ಖಂಡಿತವಾಗಿಯೂ ವಿಶ್ವ ಚಾಂಪಿಯನ್‌ಶಿಪ್‌ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿದೆ ಎನಿಸದೆ ಇರುವುದಿಲ್ಲ’ ಎಂದು ಲಾರಾ ಹೇಳಿದರು.

ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ

ಕೊಹ್ಲಿ ನಾಯಕತ್ವಕ್ಕೆ ಮೆಚ್ಚುಗೆ!

ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಲಾರಾ, ಅವರ ನಾಯಕತ್ವದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ‘ಕೊಹ್ಲಿ ಸದ್ಯ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌. ಇದರಲ್ಲಿ ಅನುಮಾನವೇ ಇಲ್ಲ. ಅಮೋಘ ಬ್ಯಾಟಿಂಗ್‌ ಜತೆ ತಂಡವನ್ನೂ ಯಶಸ್ವಿಯಾಗಿ ಮುನ್ನಡೆಸುತ್ತಿರುವ ರೀತಿ ಪ್ರತಿಯೊಬ್ಬರಿಗೂ ಸ್ಫೂರ್ತಿ ತುಂಬಲಿದೆ. ಎಂ.ಎಸ್‌.ಧೋನಿಯ ಮಾರ್ಗದರ್ಶನ ಕೊಹ್ಲಿಗೆ ತಂಡವನ್ನು ಮುನ್ನಡೆಸಲು ನೆರವಾಗುತ್ತಿದೆ’ ಎಂದು ಲಾರಾ ಹೇಳಿದರು.

ರೋಹಿತ್‌ ಅದ್ಭುತ ಪ್ರತಿಭೆ

ಟೆಸ್ಟ್‌ನಲ್ಲಿ ರೋಹಿತ್‌ ಶರ್ಮಾ ಅವರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸುವ ಭಾರತ ತಂಡದ ಯೋಜನೆಯನ್ನು ಲಾರಾ ಕೊಂಡಾಡಿದರು. ‘ರೋಹಿತ್‌ ಅದ್ಭುತ ಪ್ರತಿಭೆ. ಬ್ಯಾಟಿಂಗ್‌ ಸುಲಭವಾಗಿ ಕಾಣುವಂತೆ ಮಾಡುವ ಕಲೆ ಅವರಲ್ಲಿದೆ. ಏಕದಿನ, ಟಿ20ಯಲ್ಲಿ ಅವರ ಸಾಧನೆ ಏನು ಎನ್ನುವುದು ಜಗತ್ತಿಗೆ ಗೊತ್ತಿದೆ. ಟೆಸ್ಟ್‌ನಲ್ಲೂ ಅವರನ್ನು ಆರಂಭಿಕನನ್ನಾಗಿ ಆಡಿಸುವ ಮಾಸ್ಟರ್‌ ಪ್ಲಾನ್‌ ಕೈಹಿಡಿಯಲಿದೆ’ ಎಂದರು.

ವೇಗಿಗಳನ್ನು ಕಂಡು ಬೆರಗಾದೆ!

ಭಾರತೀಯ ವೇಗದ ಬೌಲರ್‌ಗಳು ಲಾರಾ ಅವರನ್ನೂ ಬೆರಗಾಗಿಸಿದ್ದಾರೆ. ‘ಇತ್ತೀಚಿನ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ಭಾರತೀಯ ವೇಗದ ಬೌಲರ್‌ಗಳನ್ನು ನೋಡಿ ಆಶ್ಚರ್ಯವಾಯಿತು. 90ರ ದಶಕದಲ್ಲಿ ನಾವು ಎದುರಿಸುತ್ತಿದ್ದ ಭಾರತೀಯ ವೇಗಿಗಳಿಗೂ , ಈಗಿನ ವೇಗಿಗಳು ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿಯಂತಹ ಪ್ರತಿಭೆಗಳು ಎಲ್ಲಿದ್ದರು ಎಂದು ಅಚ್ಚರಿಯಾಗುತ್ತದೆ. ಭುವನೇಶ್ವರ್‌ರಂತಹ ಬೌಲರ್‌ ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಇದೆ ಎಂದರೆ ಭಾರತದ ಮೀಸಲು ಪಡೆ ಎಷ್ಟು ಬಲಿಷ್ಠವಿದೆ ಎನ್ನುವುದನ್ನು ತೋರಿಸುತ್ತದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಮೊದಲೇ ಇರಬೇಕಿತ್ತು!

ವಿಂಡೀಸ್‌ ಪರ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಆಡಿದ ಲಾರಾ, ಐಸಿಸಿ ಈ ಹಿಂದೆಯೇ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಆರಂಭಿಸಬೇಕಿತ್ತು ಎಂದರು. ‘ಟೆಸ್ಟ್‌ ವಿಶ್ವಕಪ್‌ ಒಂದು ಅದ್ಭುತ ಟೂರ್ನಿ. ಕ್ರಿಕೆಟ್‌ ಶಿಶುಗಳ ವಿರುದ್ಧ ಆಡುವ ಸರಣಿಗೂ ಈ ಮಹತ್ವವಿದೆ. ಟೆಸ್ಟ್‌ ಕ್ರಿಕೆಟ್‌ನ ಜನ್ರಪಿಯತೆ ಹೆಚ್ಚಿಸಲು ಐಸಿಸಿ ಕೈಗೊಂಡಿರುವ ಯೋಜನೆ ಯಶಸ್ಸು ಕಾಣಲಿದೆ. ನಾವು ಆಡುತ್ತಿದ್ದ ಸಮಯದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ಇರಬೇಕಿತ್ತು ಎನಿಸುತ್ತಿದೆ’ ಎಂದು ಲಾರಾ, ವಿಶ್ವ ಚಾಂಪಿಯನ್‌ಶಿಪ್‌ಗೆ ಬೆಂಬಲ ಸೂಚಿಸಿದರು.
 

click me!