T20 World Cup: ತವರಿನತ್ತ ಮುಖ ಮಾಡಿದ ಟೀಂ ಇಂಡಿಯಾ ನೆಟ್ ಬೌಲರ್ ಆವೇಶ್ ಖಾನ್..!

By Suvarna NewsFirst Published Oct 28, 2021, 6:19 PM IST
Highlights

* ಯುಎಇ ಚರಣದ ಐಪಿಎಲ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಆವೇಶ್ ಖಾನ್‌

* ಇದರ ಬೆನ್ನಲ್ಲೇ ಟೀಂ ಇಂಡಿಯಾ ನೆಟ್‌ ಬೌಲರ್‌ ಆಗಿ ಆಯ್ಕೆಯಾಗಿದ್ದ ಆವೇಶ್ ಖಾನ್

* ಇದೀಗ ದುಬೈನಿಂದ ಡೆಲ್ಲಿಯತ್ತ ಮುಖಮಾಡಿದ ಯುವ ವೇಗಿ

ದುಬೈ(ಅ.28): 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ (Team India) ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದ ವೇಗಿ ಆವೇಶ್ ಖಾನ್ (Avesh Khan) ಯುಎಇನಿಂದ ತವರಿನತ್ತ ಮುಖ ಮಾಡಿದ್ದಾರೆ.

ಯುಎಇನಲ್ಲಿ (UAE) ನಡೆದ 2021ನೇ ಸಾಲಿನ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆವೇಶ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಪರ 16 ಪಂದ್ಯಗಳನ್ನಾಡಿ 24 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದರು. ಇದರ ಬೆನ್ನಲ್ಲೇ ಯುಎಇನಲ್ಲಿಯೇ ಆಯೋಜನೆಗೊಂಡಿದ್ದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ (ICC T20 World Cup) ಟೀಂ ಇಂಡಿಯಾಗೆ ನೆರವಾಗಲು ಆವೇಶ್ ಖಾನ್ ಅವರನ್ನು ನೆಟ್ ಬೌಲರ್‌ (Net Bowler) ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಆವೇಶ್‌ ಖಾನ್‌ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋವೊಂದನ್ನು ಅಪ್‌ಲೋಡ್ ಮಾಡಿದ್ದು, ದುಬೈ ಅಂತಾರಾಷ್ಟ್ರೀಯ ಟರ್ಮಿನಲ್‌ 3ನಿಂದ ಮುಂದಿನ ನಿಲ್ದಾಣ ಡೆಲ್ಲಿ ಎಂದು ಬರೆದುಕೊಂಡಿದ್ದಾರೆ.

T20 World Cup: ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್‌ ನ್ಯೂಸ್‌..!

ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರು ಆವೇಶ್ ಖಾನ್ ಅವರಿಗೆ ತಂಡದೊಳಗೆ ಸ್ಥಾನ ನೀಡಲು ನಿರ್ಧರಿಸಿದ್ದರು. ಸದ್ಯ ಅವರು ನೆಟ್ ಬೌಲರ್‌ ಆಗಿದ್ದು, ತಂಡದ ಆಡಳಿತ ಮಂಡಳಿ ಬಯಸಿದರೆ ಅವರನ್ನು ತಂಡದೊಳಗೆ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಸಿಸಿಐ (BCCI) ಮೂಲಗಳು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿತ್ತು. 

ಆವೇಶ್ ಖಾನ್ ಪ್ರತಿ ಗಂಟೆಗೆ 142-145 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಪ್ಲಾಟ್‌ ಫಿಚ್‌ನಲ್ಲೂ ಬೌನ್ಸರ್ ಎಸೆಯುವ ಸಾಮರ್ಥ್ಯ ಆವೇಶ್‌ ಖಾನ್‌ಗಿದೆ. ಹೀಗಾಗಿ ಆಯ್ಕೆಗಾರರು ಆವೇಶ್ ಖಾನ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

T20 World Cup: Pak vs NZ ಕಿವೀಸ್‌ ಮಣಿಸಿ, ನಗುತ್ತಲೇ ಹಳೇ ಸೇಡು ತೀರಿಸಿಕೊಂಡ ಪಾಕಿಸ್ತಾನ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಗಿದೆ. ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ (Dubai International Stadium) ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ದ ಪಾಕಿಸ್ತಾನ 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಶಾಹೀನ್ ಅಫ್ರಿದಿ (Shaheen Shah Afridi) ಮಾರಕ ಬೌಲಿಂಗ್ ಹಾಗೂ ನಾಯಕ ಬಾಬರ್ ಅಜಂ (Babar Azam) ಮತ್ತು ಮೊಹಮ್ಮದ್ ರಿಜ್ವಾನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡವು (Pakistan Cricket Team) ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ವಿರುದ್ದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. 

ಇದೀಗ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 31ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು (New Zealand cricket Team) ಎದುರಿಸಲಿದೆ. ಸೆಮೀಸ್‌ ಪ್ರವೇಶಿಸುವ ದೃಷ್ಟಿಯಿಂದ ಉಭಯ ತಂಡಗಳ ಪಾಲಿಗೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಯಾಕೆಂದರೆ ಕೇನ್‌ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡ ಕೂಡಾ ತಾನಾಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಶರಣಾಗಿದೆ.

click me!