ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್
ಟಿ20 ವಿಶ್ವಕಪ್ ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿರುವ ರಾಹುಲ್
ಕೆ ಎಲ್ ರಾಹುಲ್ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ಹೆಡ್ ಕೋಚ್ ರಾಹುಲ್ ದ್ರಾವಿಡ್
ಬ್ರಿಸ್ಬೇನ್(ನ.01): ಕರ್ನಾಟಕ ಮೂಲದ ಬಲಗೈ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಪ್ರಸಕ್ತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನದ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಕೆ ಎಲ್ ರಾಹುಲ್, ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 4,9,9 ಹೀಗೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. 3 ಪಂದ್ಯಗಳಿಂದ ರಾಹುಲ್ ಕೇವಲ 22 ರನ್ ಗಳಿಸಲಷ್ಟೇ ಶಕ್ತವಾಗಿದ್ದಾರೆ. ಹೀಗಾಗಿ ಕೆ ಎಲ್ ರಾಹುಲ್ ಅವರನ್ನು ಮುಂದಿನ ಪಂದ್ಯಕ್ಕೆ ತಂಡದಿಂದ ಕೈಬಿಡಿ ಎನ್ನುವ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ಇದೀಗ ಟೀಂ ಇಂಡಿಯಾ, ಸೂಪರ್ 12 ಹಂತದಲ್ಲಿ ಇನ್ನೆರಡು ಪಂದ್ಯಗಳನ್ನಾಡಲಿದ್ದು, ನವೆಂಬರ್ 02ರಂದು ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಬಾಂಗ್ಲಾದೇಶ ಎದುರಿನ ಪಂದ್ಯದಿಂದ ರಾಹುಲ್ ಅವರನ್ನು ಕೈಬಿಡಿ ಎನ್ನುವ ಆಗ್ರಹ ಜೋರಾಗಿದೆ. ಇದೀಗ ಬಾಂಗ್ಲಾದೇಶ ಎದುರಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಫಾರ್ಮ್ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ
ನನ್ನ ಪ್ರಕಾರ ಕೆ ಎಲ್ ರಾಹುಲ್ ಅವರೊಬ್ಬ ಅತ್ಯದ್ಭುತ ಕ್ರಿಕೆಟಿಗ. ಅವರು ಈಗಾಗಲೇ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಅವರು ತುಂಬಾ ಚೆನ್ನಾಗಿ ಆಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಈ ರೀತಿ ಆಗುವುದು ಸಹಜ, ಯಾಕೆಂದರೆ ಅಗ್ರಕ್ರಮಾಂಕದ ಬ್ಯಾಟರ್‌ಗಳ ಸವಾಲು ಸುಲಭವಾಗಿರುವುದಿಲ್ಲ. ಈ ಟೂರ್ನಿಯು ಸಾಕಷ್ಟು ಸವಾಲಿನಿಂದ ಕೂಡಿದೆ. ಅವರು ಅಭ್ಯಾಸ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಅವರಂತಹ ಬೌಲರ್‌ಗಳೆದುರು ಅದ್ಭುತ ಆಟವಾಡಿದ್ದಾರೆ. ಅವರು ಆ ಅಭ್ಯಾಸ ಪಂದ್ಯದಲ್ಲಿ 60-70 ರನ್ ಬಾರಿಸಿದ್ದರು. ಮುಂದಿನ ಕೆಲ ಪಂದ್ಯಗಳಲ್ಲಿ ಅವರು ಫಾರ್ಮ್‌ಗೆ ಮರಳುವ ವಿಶ್ವಾಸವಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ನಮಗೆ ಅವರ ಸಾಮರ್ಥ್ಯವೇನು ಎನ್ನುವುದರ ಅರಿವಿದೆ. ಈ ರೀತಿಯ ವಾತಾವರಣಕ್ಕೆ ಅವರು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಅವರು ಫಾರ್ಮ್‌ಗೆ ಬಂದು ಅಬ್ಬರಿಸುವುದನ್ನು ನೋಡಲು ಎದುರು ನೋಡುತ್ತಿದ್ದೇವೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
undefined
T20 World Cup ಟೀಂ ಇಂಡಿಯಾದಿಂದ ಹೊರಗಿಡಲು ಸರಿಯಾದ ಸಮಯ: ಮತ್ತೆ ಫೇಲಾದ ರಾಹುಲ್ ಮೇಲೆ ನೆಟ್ಟಿಗರು ಸಿಡಿಮಿಡಿ..!
ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಮೂರು ಪಂದ್ಯಗಳನ್ನಾಡಿದ್ದು, 2 ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳ ಸಹಿತ ಗ್ರೂಪ್ 1 ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೀಗ ಟೀಂಇಂಡಿಯಾ ನವೆಂಬರ್ 02ರಂದು ಬಾಂಗ್ಲಾದೇಶ ಹಾಗೂ ನವೆಂಬರ್ 06ರಂದು ಜಿಂಬಾಬ್ವೆ ಎದುರು ಸೆಣಸಾಟ ನಡೆಸಲಿದ್ದು, ಈ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಸುಲಭವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲಿದೆ. ಆದರೆ ಒಂದು ವೇಳೆ ಈ ಎರಡು ಪಂದ್ಯಗಳು ಮಳೆಯಿಂದ ರದ್ದಾದರೇ, ಲೆಕ್ಕಾಚಾರ ಬೇರೆಯದ್ದೇ ಆಗುವ ಸಾಧ್ಯತೆಯಿದೆ.
ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿತ್ತು. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಟೀಂ ಇಂಡಿಯಾ, ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಸೆಮೀಸ್ ಪ್ರವೇಶಿಸಿಲಿ ಎನ್ನುವುದು ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.