T20 World Cup ಸೂರ್ಯಕುಮಾರ್ ಯಾದವ್ ನಿಜವಾದ ಹೀರೋ, ಕೊಹ್ಲಿಯಲ್ಲ: ಗೌತಮ್ ಗಂಭೀರ್

By Naveen Kodase  |  First Published Oct 29, 2022, 12:06 PM IST

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಂದುವರೆದ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ಪ್ರದರ್ಶನ
ವಿರಾಟ್ ಕೊಹ್ಲಿ ಆಟಕ್ಕಿಂತ ಸೂರ್ಯಕುಮಾರ್ ಯಾದವ್ ಆಟ ಗ್ರೇಟ್ ಎಂದ ಗಂಭೀರ್
ಮತ್ತೊಮ್ಮೆ ವಿರಾಟ್ ಕೊಹ್ಲಿ ಕಾಲೆದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್


ನವದೆಹಲಿ(ಅ.29): ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮೊದಲೆರಡು ಪಂದ್ಯಗಳಲ್ಲೂ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಗುರುವಾರ ನಡೆದ ನೆದರ್‌ಲೆಂಡ್ಸ್ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಅರ್ಧಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಕೂಡಾ ಕೇವಲ 25 ಎಸೆತಗಳಲ್ಲಿ ಚುರುಕಿನ ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದರು. ಇನ್ನು ಇದೆಲ್ಲದರ ನಡುವೆ ಸಮಯ ಸಿಕ್ಕಾಗಲೆಲ್ಲಾ ವಿರಾಟ್ ಕೊಹ್ಲಿ ಕಾಲೆಳೆಯುವ ಗೌತಮ್ ಗಂಭೀರ್, ಇದೀಗ ಮತ್ತೊಮ್ಮೆ ಅಚ್ಚರಿಯ ಹೇಳಿಕೆ ನೀಡಿ ಚರ್ಚೆಗೆ ಆಹಾರವಾಗಿದ್ದಾರೆ.

ಪಾಕಿಸ್ತಾನ ವಿರುದ್ದ ಸಮಯೋಚಿತ ಬ್ಯಾಟಿಂಗ್ ನಡೆಸಿದ್ದ ವಿರಾಟ್ ಕೊಹ್ಲಿ 82 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ 10 ಎಸೆತಗಳನ್ನು ಎದುರಿಸಿ ಕೇವಲ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ನೆದರ್‌ಲೆಂಡ್ಸ್ ವಿರುದ್ದದ ಪಂದ್ಯದಲ್ಲಿ ಸೂರ್ಯ ಕೇವಲ 25 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ 179 ರನ್ ಕಲೆಹಾಕುವಲ್ಲಿ ನೆರವಾಗಿದ್ದರು. ಇದಕ್ಕುತ್ತರವಾಗಿ ನೆದರ್‌ಲೆಂಡ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 123 ರನ್ ಗಳಿಸಲಷ್ಟೇ ಶಕ್ತವಾಯಿತು. 

Latest Videos

undefined

ಇನ್ನು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಪ್ರದರ್ಶನವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಗುಣಗಾನ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಕೇವಲ ಒಂದು ವರ್ಷ ಏಳು ತಿಂಗಳಷ್ಟೇ ಕಳೆದಿವೆ. ಈಗಾಗಲೇ ಸೂರ್ಯಕುಮಾರ್ ಯಾದವ್ ಹಲವಾರು ಪಂದ್ಯಗಳಲ್ಲಿ ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ. ಅದರಲ್ಲೂ ನೆದರ್‌ಲೆಂಡ್ಸ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜತೆಗೂಡಿ ಆಡಿದ ಬ್ಯಾಟಿಂಗ್ ಅತ್ಯದ್ಭುತವಾಗಿತ್ತು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

T20 World Cup ಆತನನ್ನು ಕಿತ್ತೊಗೆಯಿರಿ: ಮತ್ತೆ ಫೇಲ್ ಆದ ಕೆ ಎಲ್ ರಾಹುಲ್ ವಿರುದ್ದ ಮುಗಿಬಿದ್ದ ಕ್ರಿಕೆಟ್ ಫ್ಯಾನ್ಸ್‌..!

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುವುದರಿಂದ ಮೊದಲ ಆರು ಓವರ್‌ನ ಬ್ಯಾಟಿಂಗ್ ಪವರ್‌ ಪ್ಲೇ ನಲ್ಲಿ ಅವಕಾಶ ಸಿಗುವುದು ಕಡಿಮೆ. ಹೀಗಿದ್ದೂ ಅದ್ಭುತ ಸ್ಟ್ರೈಕ್‌ರೇಟ್‌ನಲ್ಲಿ ಇಷ್ಟು ಬೇಗ 1000ದ ಸಮೀಪದ ರನ್ ಗಳಿಸುವುದು ಸುಲಭವೇನಲ್ಲ. ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಮಾಡಿದ್ದರಿಂದ ವಿರಾಟ್ ಕೊಹ್ಲಿ ಮೇಲಿದ್ದ ಭಾರ ಕಡಿಮೆಯಾಯಿತು. ರೋಹಿತ್ ಶರ್ಮಾ, ಕೆ ಎಲ್ ರಾಹುಲ್ ಅವರಿಗಿಂತ ಸೂರ್ಯಕುಮಾರ್ ಯಾದವ್ ನಿಜವಾದ ಆಕ್ರಮಣಕಾರಿ ಆಟಗಾರ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ನೆದರ್‌ಲೆಂಡ್ಸ್ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾದ ಮೂವರು ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಸಿಡಿಸಿದ್ದರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 53 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸಿದ್ದರು. ಇನ್ನು ಸ್ಪೋಟಕ ಅರ್ಧಶತಕ ಚಚ್ಚಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.

click me!