ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಂದುವರೆದ ಮಳೆಯಾಟ
ಶುಕ್ರವಾರ ನಡೆಯಬೇಕಿದ್ದ ಎರಡೂ ಪಂದ್ಯಗಳು ಮಳೆಯಿಂದ ರದ್ದು
ಎಂಸಿಜಿ ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ ಪಂದ್ಯ ಆಯೋಜನೆಗೆ ಯೋಗ್ಯವಲ್ಲ ಎನ್ನುವ ನಿರ್ಧಾರ
ಮೆಲ್ಬರ್ನ್(ಅ.29): ಐಸಿಸಿ ಟಿ20 ವಿಶ್ವಕಪ್‌ನ ರೋಚಕತೆ ಮಳೆಯಿಂದಾಗಿ ಕಡಿಮೆಯಾಗುತ್ತಿದೆ. ಶುಕ್ರವಾರ ನಡೆಯಬೇಕಿದ್ದ ಬಹುನಿರೀಕ್ಷಿತ ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಮಳೆಗೆ ಬಲಿಯಾಯಿತು. ಇದಕ್ಕೂ ಮುನ್ನ ಎಂಸಿಜಿಯಲ್ಲೇ ನಿಗದಿಯಾಗಿದ್ದ ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ನಡುವಿನ ಪಂದ್ಯವೂ ಒಂದೂ ಎಸೆತ ಕಾಣದೆ ರದ್ದಾಯಿತು. ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ ಪಂದ್ಯ ಆಯೋಜನೆಗೆ ಯೋಗ್ಯವಲ್ಲ ಎನ್ನುವ ನಿರ್ಧಾರಕ್ಕೆ ಬಂದ ಅಂಪೈರ್‌ಗಳು ಪಂದ್ಯಗಳನ್ನು ರದ್ದುಗೊಳಿಸಿದರು. ಎರಡೂ ಪಂದ್ಯಗಳಲ್ಲಿ ತಂಡಗಳಿಗೆ ತಲಾ ಒಂದೊಂದು ಅಂಕ ದೊರೆಯಿತು.
ಪ್ರತಿ ಗುಂಪಿನಿಂದ ಕೇವಲ ಎರಡು ತಂಡಗಳು ಮಾತ್ರ ಸೆಮಿಫೈನಲ್ ಪ್ರವೇಶಿಸಲಿದ್ದು, ಗುಂಪು-1ರಲ್ಲಿ ಅಗ್ರ ಎರಡು ಸ್ಥಾನಗಳಿಗೆ ಪೈಪೋಟಿ ಇನ್ನಷ್ಟುತೀವ್ರಗೊಂಡಿದೆ. ಐರ್ಲೆಂಡ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಪುಟಿದೇಳುವ ನಿರೀಕ್ಷೆಯಲ್ಲಿದ್ದ ಪ್ರಶಸ್ತಿ ಗೆಲ್ಲುವ ಫೇವರಿಟ್ ಇಂಗ್ಲೆಂಡ್, 3 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆಯಾದರೂ, ಮುಂದಿನ 2 ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸಿಲುಕಿದೆ.
undefined
ಹಾಲಿ ಚಾಂಪಿಯನ್ ಆಸ್ಪ್ರೇಲಿಯಾ ಸಹ 3 ಅಂಕಗಳನ್ನು ಹೊಂದಿದ್ದು ಗುಂಪಿನಲ್ಲಿ 4ನೇ ಸ್ಥಾನ ಪಡೆದಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲಿನಿಂದಾಗಿ ತಂಡದ ನೆಟ್ ರನ್‌ರೇಟ್‌ಗೆ ಭಾರೀ ಪೆಟ್ಟು ಬಿದ್ದಿದೆ. ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದು, ಐರ್ಲೆಂಡ್ 3ನೇ ಸ್ಥಾನ ಪಡೆದಿದೆ.
ಗುಂಪು-1ರ ಸೆಮೀಸ್ ಲೆಕ್ಕಾಚಾರ ಹೇಗೆ?
ಗುಂಪು-1ರಲ್ಲಿ ಅಗ್ರ 2 ಸ್ಥಾನ ಪಡೆಯುವ ಅವಕಾಶ ಬಹುತೇಕ ಎಲ್ಲಾ 6 ತಂಡಗಳಿವೆ. ಮಳೆ ಬಂದು ಇನ್ನಷ್ಟುಪಂದ್ಯಗಳು ರದ್ದಾದರೆ ಲೆಕ್ಕಾಚಾರ ತಲೆಕೆಳಗಾಗಲಿವೆ. ಬಹುಶಃ ಗುಂಪಿನಿಂದ ಸೆಮೀಸ್‌ಗೇರುವ ತಂಡಗಳು ಯಾವುವು ಎನ್ನುವುದು ನೆಟ್ ರನ್‌ರೇಟ್ ಆಧಾರದಲ್ಲಿ ನಿರ್ಧಾರವಾಗಬಹುದು. ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ಗೆ ಇನ್ನೂ 3 ಪಂದ್ಯ ಬಾಕಿ ಇದೆ. ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಐರ್ಲೆಂಡ್ ವಿರುದ್ಧ ಕಿವೀಸ್ ಸೆಣಸಲಿದೆ. ಮೂರರಲ್ಲಿ ಎರಡು ಪಂದ್ಯ ಗೆದ್ದರೂ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧ ಗೆದ್ದರೆ ಆಸ್ಪ್ರೇಲಿಯಾಗೆ ಅನುಕೂಲವಾಗಲಿದೆ.
ಇನ್ನು ಇಂಗ್ಲೆಂಡ್‌ಗೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಪಂದ್ಯ ಬಾಕಿ ಇದ್ದು, ಎರಡರಲ್ಲೂ ಗೆಲ್ಲಲೇಬೇಕಿದೆ. ಆಸ್ಪ್ರೇಲಿಯಾಗೆ ಅಷ್ಘಾನಿಸ್ತಾನ ಹಾಗೂ ಐರ್ಲೆಂಡ್ ವಿರುದ್ಧ ಪಂದ್ಯಗಳಿವೆ. ಎರಡೂ ಪಂದ್ಯಗಳಲ್ಲಿ ಆಸ್ಪ್ರೇಲಿಯಾ ಗೆಲ್ಲುವ ಫೇವರಿಟ್ ಆದರೂ ತಂಡದ ನೆಟ್ ರನ್‌ರೇಟ್ ಕಳಪೆಯಾಗಿರುವ ಕಾರಣ ದೊಡ್ಡ ಗೆಲುವುಗಳ ಅಗತ್ಯವಿದೆ. ಶ್ರೀಲಂಕಾಗೆ ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಅಷ್ಘಾನಿಸ್ತಾನ ವಿರುದ್ಧ ಪಂದ್ಯಗಳಿವೆ. ಮೂರರಲ್ಲಿ ಎರಡು ಗೆದ್ದರೂ ನೆಟ್ ರನ್‌ರೇಟ್ ಆಧಾರದಲ್ಲಿ ಇಂಗ್ಲೆಂಡನ್ನು ಹಿಂದಿಕ್ಕಿ ಸೆಮೀಸ್‌ಗೇರಬಹುದು. ಐರ್ಲೆಂಡ್ ಸೆಮೀಸ್‌ಗೇರುವ ಸಾಧ್ಯತೆ ಕಡಿಮೆ. ಕಾರಣ ಬಲಿಷ್ಠ ಎದುರಾಳಿಗಳು ಹಾಗೂ ಕಳಪೆ ನೆಟ್ ರನ್‌ರೇಟ್.
ಆಫ್ಘನ್ ಎರಡೂ ಪಂದ್ಯ ರದ್ದು
ಟೂರ್ನಿಯಲ್ಲಿ ಮಳೆರಾಯನ ಅವಕೃಪೆ ಹೆಚ್ಚಾಗಿ ಕಾಡಿದ್ದು ಆಫ್ಘಾನಿಸ್ತಾನಕ್ಕೆ. ಮೊದಲ ಪಂದ್ಯದಲ್ಲಿ ಆಫ್ಘನ್, ಇಂಗ್ಲೆಂಡ್ ವಿರುದ್ಧ ಸೋತಿದ್ದರೆ, ಬಳಿಕ ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿದೆ. ಹೀಗಾಗಿ ಕೇವಲ 2 ಅಂಕ ಹೊಂದಿರುವ ಆಫ್ಘನ್ ಸೆಮೀಸ್‌ಗೇರುವ ಸಾಧ್ಯತೆ ಕ್ಷೀಣಿಸಿದೆ.
ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸೋಲು, ಅಕ್ತರ್ ಭವಿಷ್ಯಕ್ಕೆ ಭಾರತೀಯರ ಆಕ್ರೋಶ!
ಐಸಿಸಿ, ಪ್ರಸಾರಕರಿಗೆ ನಷ್ಟ
ಈ ವರೆಗೂ ಒಟ್ಟು 4 ಪಂದ್ಯಗಳು ರದ್ದಾಗಿವೆ. ಅದರಲ್ಲಿ 3 ಪಂದ್ಯಗಳು ಒಂದೂ ಎಸೆತ ಕಂಡಿಲ್ಲ. ಈ ಮೂರು ಪಂದ್ಯಗಳ ಟಿಕೆಟ್‌ಗಳ ಮೊತ್ತವನ್ನು ಐಸಿಸಿ ಸಂಪೂರ್ಣವಾಗಿ ಹಿಂದಿರುಗಿಸಬೇಕಿದೆ. ಪಂದ್ಯಗಳಿಗೆ ವಿಮೆ ಸೌಲಭ್ಯವಿರಲಿದೆಯಾದರೂ ಪ್ರಸಾರಕರಿಗೆ ಸ್ವಲ್ಪ ಮಟ್ಟಿಗೆ ನಷ್ಟ ಉಂಟಾಗಲಿದೆ. ಮುಂಚಿತವಾಗಿಯೇ ಜಾಹೀರಾತುಗಳ ಬುಕ್ಕಿಂಗ್ ಆಗಿರಲಿದೆ. ಅವುಗಳನ್ನು ಹಿಂದಿರುಗಿಸಬೇಕು. ಪಂದ್ಯಗಳು ನಡೆಯದಿದ್ದರೆ ಪ್ರಾಯೋಜಕರಿಗೂ ನಷ್ಟಉಂಟಾಗಲಿದೆ.
ಮೇಲ್ಛಾವಣಿ ಇರುವ ಸ್ಟೇಡಿಯಂ ಇದ್ದರೂ ಎಂಸಿಜಿಯಲ್ಲೇ ಪಂದ್ಯ!
ಮೆಲ್ಬರ್ನ್‌ನ ಮಾರ್ವೆಲ್ ಕ್ರೀಡಾಂಗಣ ಮೇಲ್ಛಾವಣಿ ವ್ಯವಸ್ಥೆ ಹೊಂದಿದೆ. ಮಳೆ ಸುರಿಯುತ್ತಿದ್ದರೂ ಆಟ ನಡೆಸಬಹುದು. ಈ ಹಿಂದೆ ಇಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಿವೆ. ಮಳೆ ಮುನ್ಸೂಚನೆ ಇದ್ದರೂ ಐಸಿಸಿ ಎಂಸಿಜಿಯಲ್ಲೇ ಏಕೆ ಪಂದ್ಯಗಳನ್ನು ನಡೆಸಲು ನಿರ್ಧರಿಸಿತು. ಮೈದಾನವನ್ನು ಸಂಪೂರ್ಣವಾಗಿ ಹೊದಿಕೆಗಳಿಂದ ಮುಚ್ಚಲಿಲ್ಲ ಏಕೆ ಎನ್ನುವ ಪ್ರಶ್ನೆಗಳನ್ನು ಕೆಲ ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಸಾಮಾಜಿಕ ತಾಣಗಳಲ್ಲಿ ಐಸಿಸಿ, ಕ್ರಿಕೆಟ್ ಆಸ್ಪ್ರೇಲಿಯಾಗೆ ಕೇಳುತ್ತಿದ್ದಾರೆ.