ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆಗೆ ಶರಣಾದ ಪಾಕಿಸ್ತಾನ
ಟಿ20 ವಿಶ್ವಕಪ್ ಸೆಮೀಸ್ ರೇಸ್‌ನಿಂದ ಪಾಕಿಸ್ತಾನ ಬಹುತೇಕ ಔಟ್
ಪಾಕ್ ಸೋಲುತ್ತಿದ್ದಂತೆಯೇ ಮಂಡಿಯೂರಿ ಕಣ್ಣೀರಿಟ್ಟ ಶಾದಾಬ್ ಖಾನ್
ಪರ್ತ್(ಅ.29): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಜಿಂಬಾಬ್ವೆ ತಂಡವು ಮಾಜಿ ಚಾಂಪಿಯನ್ ಪಾಕಿಸ್ತಾನ ವಿರುದ್ದ 1 ರನ್ ರೋಚಕ ಗೆಲುವು ಸಾಧಿಸುವ ಮೂಲಕ ಸಂಭ್ರಮಿಸಿದೆ. ಸೂಪರ್ 12 ಹಂತದ ಗ್ರೂಪ್ 2ನಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ ಹಾಗೂ ಜಿಂಬಾಬ್ವೆ ತಂಡಗಳು ಪರ್ತ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಜಿಂಬಾಬ್ವೆ ನೀಡಿದ್ದ 131 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ರೋಚಕ ಸೋಲು ಅನುಭವಿಸಿತು.
ಪಾಕಿಸ್ತಾನದ ನಾಯಕ ಬಾಬರ್ ಅಜಂ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಆರಂಭದಲ್ಲೇ ವಿಕೆಟ್ ಕೈಚೆಲ್ಲಿದರು. ಇನ್ನು ಪಾಕಿಸ್ತಾನದ ಮಧ್ಯಮ ಕ್ರಮಾಂಕ ಮತ್ತೊಮ್ಮೆ ಕೈಕೊಟ್ಟಿತು. ಇನ್ನು ಭಾರತ ವಿರುದ್ದ ಆಕರ್ಷಕ ಅರ್ಧಶತಕ ಚಚ್ಚಿದ್ದ ಶಾನ್ ಮಸೂದ್, ಜಿಂಬಾಬ್ವೆ ಎದುರು ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಕೇವಲ 36 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಾಕಿಸ್ತಾನ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಶಾನ್ ಮಸೂದ್ ಹಾಗೂ ಶಾದಾಬ್ ಖಾನ್(17) ಜೋಡಿ ಮಹತ್ವದ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದರು. ಈ ಜತೆಯಾಟ ಪಾಕಿಸ್ತಾನ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿತ್ತು.
undefined
ಆದರೆ ಶಾದಾಬ್ ಖಾನ್ ವಿಕೆಟ್ ಪತನವಾಗುತ್ತಿದ್ದಂತೆಯೇ ಪಾಕಿಸ್ತಾನ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಇದರ ಜತೆಗೆ ಜಿಂಬಾಬ್ವೆ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಶಾಕ್ ನೀಡುವಲ್ಲಿ ಯಶಸ್ವಿಯಾದರು.
ಮೊದಲೆ ಭಾರತ ವಿರುದ್ದ ಆಘಾತಕಾರಿ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡಕ್ಕೆ, ಇದೀಗ ಜಿಂಬಾಬ್ವೆ ಎದುರಿನ ಸೋಲು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಜಿಂಬಾಬ್ವೆ ಎದುರು ಪಾಕಿಸ್ತಾನ ತಂಡವು ಸೋಲು ಅನುಭವಿಸುತ್ತಿದ್ದಂತೆಯೇ ಕೆಲ ಆಟಗಾರರು, ಅಭಿಮಾನಿಗಳು ಮೈದಾನದಲ್ಲೇ ಕಣ್ಣೀರಿಟ್ಟ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಫೇಕ್ ಮಿ.ಬೀನ್ ಕುರಿತಾಗಿ ಜಿಂಬಾಬ್ವೆ ಅಧ್ಯಕ್ಷನ ಟ್ವೀಟ್, ತಪ್ಪೊಪ್ಪಿಕೊಂಡು ಪಾಕ್ ಪ್ರಧಾನಿ ಟ್ವೀಟ್!
ಇನ್ನು ಪೆವಿಲಿಯನ್‌ನಲ್ಲಿದ್ದ ಆಲ್ರೌಂಡರ್ ಶಾದಾಬ್ ಖಾನ್, ಮಂಡಿಯೂರಿ ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಸಹ ಆಟಗಾರರು ಸಮಾಧಾನ ಪಡಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Cricket can be so cruel sometimes.🫣😨 pic.twitter.com/dY5VXrlddM
— Avinash Aryan (@AvinashArya09)ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಸೂಪರ್ 12 ಹಂತದಲ್ಲಿ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಸೋಲುವ ಮೂಲಕ ಸೆಮೀಸ್ ಹಾದಿಯನ್ನು ಅತ್ಯಂತ ದುರ್ಗಮಗೊಳಿಸಿಕೊಂಡಿದೆ. ಇದೀಗ ಪಾಕಿಸ್ತಾನ ತಂಡವು ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ, ಇನ್ನುಳಿದ ತನ್ನ ಪಾಲಿನ 3 ಪಂದ್ಯಗಳಲ್ಲಿ ಗೆಲುವು ದಾಖಲಿಸುವುದು ಮಾತ್ರವಲ್ಲದೇ ಉಳಿದ ತಂಡಗಳ ಫಲಿತಾಂಶಗಳು ಪಾಕಿಸ್ತಾನ ಪರ ಬರಬೇಕಾಗುತ್ತದೆ. ಹೀಗಾದಲ್ಲಿ ಮಾತ್ರ ಪಾಕ್ ಅಂತಿಮ ನಾಲ್ಕರಘಟ್ಟ ಪ್ರವೇಶಿಸಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೀಗಾಗಲು ಪವಾಡವೇ ನಡೆಯಬೇಕಿದೆ.