
ಮುಂಬೈ: ಹಾಲಿ ಚಾಂಪಿಯನ್ ಟೀಂ ಇಂಡಿಯಾ 10ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ವಾಂಖೇಡೆ ಕ್ರೀಡಾಂಗಣದಲ್ಲಿ ರನ್ ಮಳೆಯನ್ನೇ ಸುರಿಸಿದ ಇಂಗ್ಲೆಂಡ್ ವಿರುದ್ಧದ ರಣರೋಚಕ ಸೆಮಿಫೈನಲ್‌ನಲ್ಲಿ ಭಾರತ 7 ರನ್ ರೋಚಕ ಗೆಲುವು ಸಾಧಿಸಿತು. ಬೃಹತ್ ಮೊತ್ತ ಕಲೆಹಾಕಿದರೂ ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತ, ಕೊನೆಯಲ್ಲಿ ಮತ್ತೆ ಮೇಲುಗೈ ಸಾಧಿಸಿ 2 ಬಾರಿ ಚಾಂಪಿಯನ್ ಇಂಗ್ಲೆಂಡ್‌ಗೆ ಶಾಕ್ ನೀಡಿತು.
ಟಾಸ್ ಸೋತ ಭಾರತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಬೇಕಾಯಿತು. ಮತ್ತೆ ತಂಡಕ್ಕೆ ಸಂಜು ಸ್ಯಾಮ್ಸನ್ ಆಪತ್ಬಾಂಧವರಾದರು. ಭಾರತ 7 ವಿಕೆಟ್‌ಗೆ 253 ರನ್ ಸೇರಿಸಿತು. ಈ ಮೊತ್ತ ಬೆನ್ನತ್ತಲು ಶುರು ಮಾಡಿದ ಇಂಗ್ಲೆಂಡ್ 17ನೇ ಓವರ್‌ವರೆಗೂ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಭಾರತ ಸೋಲಲು ಒಪ್ಪಲಿಲ್ಲ. ಇಂಗ್ಲೆಂಡ್ 7 ವಿಕೆಟ್‌ಗೆ 246 ರನ್ ಗಳಿಸಿ ಟೂರ್ನಿಯಿಂದ ಹೊರಬಿತ್ತು.
ಅಭಿಷೇಕ್ ಶರ್ಮಾ(9 ರನ್) ಸ್ಪಿನ್ನರ್‌ಗಳ ವಿರುದ್ಧ ಎಷ್ಟು ಕಳಪೆಯಾಗಿ ಆಟವಾಡುತ್ತಾರೆ ಎಂಬುದು ಈ ಪಂದ್ಯದಲ್ಲಿ ಮತ್ತೊಮ್ಮೆ ಸಾಬೀತಾಯಿತು. ಆದರೆ ಮತ್ತೋರ್ವ ಆರಂಭಿಕ ಸಂಜು ಸ್ಯಾಮ್ಸನ್ ತಂಡದ ಕೈಬಿಡಲಿಲ್ಲ. ವಿಂಡೀಸ್ ಪಂದ್ಯದಲ್ಲಿ ಅಬ್ಬರಿಸಿದ್ದ ಅವರು ಈ ಬಾರಿಯೂ ಭಾರತವನ್ನು ಕಾಪಾಡಿದರು. 2ನೇ ವಿಕೆಟ್‌ಗೆ ಇಶಾನ್ ಕಿಶನ್ ಜೊತೆ 97 ರನ್ ಸೇರಿಸಿದರು. ಪವರ್-ಪ್ಲೇನಲ್ಲಿ 67 ರನ್ ಸೇರಿಸಿದ ಭಾರತ, ಕೊನೆವರೆಗೂ ರನ್ ವೇಗ ಕಾಪಾಡಿಕೊಂಡಿತು. 15 ರನ್ ಗಳಿಸಿದ್ದಾಗ ಹ್ಯಾರಿ ಬ್ರೂಕ್ ಕೈಚೆಲ್ಲಿದ ಕ್ಯಾಚ್‌ನ ಲಾಭ ಪಡೆದ ಸಂಜು, 42 ಎಸೆತಕ್ಕೆ 89 ರನ್ ಸಿಡಿಸಿ ಔಟಾದರು. ಇಶಾನ್ 18 ಎಸೆತಕ್ಕೆ 39, ಶಿವಂ ದುಬೆ 25 ಎಸೆತಕ್ಕೆ 43, ಹಾರ್ದಿಕ್ 12 ಎಸೆತಕ್ಕೆ 27, ತಿಲಕ್ 7 ಎಸೆತಕ್ಕೆ 21 ರನ್ ಸಿಡಿಸಿದರು.
ಇಂಗ್ಲೆಂಡ್ ಮೊದಲ ಎಸೆತದಿಂದ 17ನೇ ಓವರ್‌ವರೆಗೂ ಪಂದ್ಯವನ್ನು ತನ್ನ ನಿಯಂತ್ರಣದಲ್ಲಿ ಇರಿಸಿತ್ತು. ಭಾರತಕ್ಕಿಂತಲೂ ವೇಗವಾಗಿ ರನ್ ಕಲೆಹಾಕುತ್ತಾ ಸಾಗಿದ ತಂಡ, ಗೆಲ್ಲುವ ಎಲ್ಲಾ ಸಾಧ್ಯತೆಯಿತ್ತು. ಬಟ್ಲರ್(25), ವಿಲ್ ಜ್ಯಾಕ್ಸ್(35) ಔಟಾದರೂ ಜೇಕಬ್ ಬೆಥೆಲ್ ಕ್ರೀಸ್‌ನಲ್ಲಿ ಇರುವವರೆಗೂ ತಂಡ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಕೊನೆ 3 ಓವರಲ್ಲಿ ತಂಡಕ್ಕೆ 34 ರನ್ ಬೇಕಿತ್ತು. 18ನೇ ಓವರ್‌ನಲ್ಲಿ ಬೂಮ್ರಾ 6, 19ನೇ ಓವರ್‌ನಲ್ಲಿ ಹಾರ್ದಿಕ್ 9 ರನ್ ನೀಡಿದ್ದರಿಂದ ಕೊನೆ ಓವರ್‌ಗೆ 30 ರನ್ ಅಗತ್ಯವಿತ್ತು. ದುಬೆ ಎಸೆದ ಓವರ್‌ನ ಮೊದಲ ಎಸೆತದಲ್ಲೇ ಬೆಥೆಲ್ ರನ್ಔಟ್ ಆದರು. ಅವರು 48 ಎಸೆತಕ್ಕೆ 8 ಬೌಂಡರಿ, 7 ಸಿಕ್ಸರ್‌ನೊಂದಿಗೆ 105 ರನ್ ಸಿಡಿಸಿದರು. ಕೊನೆ 4 ಎಸೆತಕ್ಕೆ ಆರ್ಚರ್ 3 ಸಿಕ್ಸರ್ ಸಿಡಿಸಿದರೂ ತಂಡ ಗೆಲ್ಲಲಿಲ್ಲ.
ಸ್ಕೋರ್: ಭಾರತ 20 ಓವರಲ್ಲಿ 253/7 (ಸಂಜು 89, ದುಬೆ 43, ಇಶಾನ್ 39, ಹಾರ್ದಿಕ್ 27, ಜ್ಯಾಕ್ಸ್ 2-40), ಇಂಗ್ಲೆಂಡ್ 20 ಓವರಲ್ಲಿ 246/7 (ಬೆಥೆಲ್ 105, ಜ್ಯಾಕ್ಸ್ 35, ಹಾರ್ದಿಕ್ 2-38)
ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.