
ದುಬೈ(ಜೂ.11): 2024ರ ಟಿ20 ವಿಶ್ವಕಪ್ ಟೂರ್ನಿ ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಬದಲು ಇಂಗ್ಲೆಂಡ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂಬ ವರದಿಗಳನ್ನು ಐಸಿಸಿ ಅಲ್ಲಗಳೆದಿದ್ದು, ಟೂರ್ನಿ ನಿಗದಿಯಂತೆ ವಿಂಡೀಸ್, ಅಮೆರಿಕದಲ್ಲೇ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಕೂಡಾ ಟೂರ್ನಿ ಇಂಗ್ಲೆಂಡ್‌ನಲ್ಲಿ ನಡೆಯುವುದಿಲ್ಲ ಎಂದಿದೆ.
ಯುಎಸ್ಎ ಕ್ರಿಕೆಟ್ ಮಂಡಳಿಯಲ್ಲಿನ ಆಡಳಿತದ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಶ್ವಕಪ್ ಆತಿಥ್ಯ ಅಮೆರಿಕದ ಕೈ ತಪ್ಪಲಿದ್ದು, ಇಂಗ್ಲೆಂಡ್, ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ನಲ್ಲಿ ಟೂರ್ನಿ ಆಯೋಜಿಸಲು ಐಸಿಸಿ ಚಿಂತನೆ ನಡಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೇ ವೇಳೆ 2025ರ ಐಸಿಸಿ ಚಾಂಪಿಯನ್ ಟ್ರೋಫಿ ಪಾಕಿಸ್ತಾನದಿಂದ ಸ್ಥಳಾಂತರಗೊಂಡು ವಿಂಡೀಸ್, ಅಮೆರಿಕದಲ್ಲಿ ನಡೆಯಲಿದೆ ಎನ್ನುವ ವರದಿ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.
ಇಂದು/ನಾಳೆ ಏಕದಿನ ವಿಶ್ವಕಪ್ ವೇಳಾಪಟ್ಟಿ?
ಲಂಡನ್: ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಬಹುನಿರೀಕ್ಷಿತ 13ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ನ ವೇಳಾಪಟ್ಟಿ ಭಾನುವಾರ ಅಥವಾ ಸೋಮವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ವೇಳೆ ಏಕದಿನ ವಿಶ್ವಕಪ್ನ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದಿದ್ದರು.
ಶುಭ್‌ಮನ್ ಗಿಲ್ ವಿವಾದಾತ್ಮಕ ಔಟ್..! ಥರ್ಡ್ ಅಂಪೈರ್‌ನನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದ ಫ್ಯಾನ್ಸ್..!
ಭಾನುವಾರ ಬಿಸಿಸಿಐ ಅಧಿಕಾರಿಗಳು ಲಂಡನ್ನಲ್ಲಿ ಐಸಿಸಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದು, ಬಳಿಕ ಅಧಿಕೃತ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ. ಏಷ್ಯಾಕಪ್, ವಿಶ್ವಕಪ್ಗೆ ಸಂಬಂಧಿಸಿದಂತೆ ಪಾಕ್ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ನಡುವೆ ಘರ್ಷಣೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ವೇಳಾಪಟ್ಟಿ ವಿಳಂಬಗೊಳ್ಳುತ್ತಿರುವುದಾಗಿ ಹೇಳಲಾಗಿದೆ.
ಬಿಶನ್ ದಾಖಲೆ ಮುರಿದ ಜಡೇಜಾ
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ 4 ವಿಕೆಟ್ ಕಿತ್ತ ರವೀಂದ್ರ ಜಡೇಜಾ ಟೆಸ್ಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಎಡಗೈ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಅವರು 65 ಪಂದ್ಯಗಳಲ್ಲಿ 268 ವಿಕೆಟ್ ಕಬಳಿಸಿದ್ದು, ಬಿಶನ್ ಸಿಂಗ್ ಬೇಡಿ ಅವರ 266 ವಿಕೆಟ್‌ಗಳ ದಾಖಲೆ ಮುರಿದರು.
ಅಲ್ಲದೇ ಹೆಚ್ಚು ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್ಗಳ ಪೈಕಿ ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದ್ದಾರೆ. 433 ವಿಕೆಟ್ ಪಡೆದಿರುವ ಶ್ರೀಲಂಕಾದ ಹೆರಾತ್‌ಗೆ ಮೊದಲ, ನ್ಯೂಜಿಲೆಂಡ್ನ ವೆಟ್ಟೋರಿ(362), ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್(297)ಗೆ ಕ್ರಮವಾಗಿ 2, 3ನೇ ಸ್ಥಾನದಲ್ಲಿದ್ದಾರೆ.
ಡೆಲ್ಲಿ ಕೋಚ್ ಸ್ಥಾನಕ್ಕೆ ರಿಕಿ ಪಾಂಟಿಂಗ್ ಬದಲು ಸೌರವ್ ಗಂಗೂಲಿ?
ನವದೆಹಲಿ: ಕಳೆದೆರಡು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್‌ಗೆ ಕೊಕ್ ನೀಡುವ ಸಾಧ್ಯತೆಯಿದ್ದು, ತಂಡದ ಕ್ರಿಕೆಟ್ ನಿರ್ದೇಶಕರಾಗಿರುವ ಸೌರವ್ ಗಂಗೂಲಿ ನೂತನ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಾಂಟಿಂಗ್ 2018ರಿಂದಲೂ ಡೆಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2020ರಲ್ಲಿ ಮೊದಲ ಬಾರಿ ಡೆಲ್ಲಿ ಫೈನಲ್ ಪ್ರವೇಶಿಸಿತ್ತು. 2021ರಲ್ಲಿ ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದರೂ ಫೈನಲ್ಗೇರಿರಲಿಲ್ಲ.
ಏಕದಿನ: ಯುಎಇ ವಿರುದ್ಧ ವಿಂಡೀಸ್ 3-0 ಕ್ಲೀನ್ಸ್ವೀಪ್
ಶಾರ್ಜಾ: ಜೂ.18ರಿಂದ ಐಸಿಸಿ ಏಕದಿನ ವಿಶ್ವಕಪ್ನ ಅರ್ಹತಾ ಟೂರ್ನಿಯಲ್ಲಿ ಆಡಬೇಕಿರುವ ವೆಸ್ಟ್ಇಂಡೀಸ್, ಯುಎಇ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಶುಕ್ರವಾರ ನಡೆದ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ವಿಂಡೀಸ್ 4 ವಿಕೆಟ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಯುಎಇ ಚೆನ್ನೈ ಮೂಲದ ಅರವಿಂದ್(70)ರ ಆಕರ್ಷಕದ ಆಟದ ಹೊರತಾಗಿಯೂ 36.1 ಓವರ್ಗಳಲ್ಲಿ 184ಕ್ಕೆ ಆಲೌಟಾಯಿತು. ಸುಲಭ ಗುರಿ ಬೆನ್ನತ್ತಿದ ವಿಂಡೀಸ್ 35.1 ಓವರ್ಗಳಲ್ಲಿ ಜಯಗಳಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.