T20 World Cup 2024 ಇಂದು ಇಂಡಿಯಾ vs ಮಿನಿ ಇಂಡಿಯಾ ಕದನ!

By Naveen Kodase  |  First Published Jun 12, 2024, 10:50 AM IST

ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ, ಅಧಿಕೃತವಾಗಿ ಸೂಪರ್‌-8 ಹಂತಕ್ಕೆ ಪ್ರವೇಶಿಸಲಿದೆ. ಅಲ್ಲದೇ ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣದಲ್ಲಿ ತಂಡಕ್ಕಿದು ಕೊನೆಯ ಪಂದ್ಯವಾಗಿದ್ದು, ಯಾವುದೇ ಆಘಾತಕಾರಿ ಫಲಿತಾಂಶಕ್ಕೆ ದಾರಿ ಮಾಡಿಕೊಡದೆ, ಸುಲಭವಾಗಿ ಗೆದ್ದು ಮುನ್ನಡೆಯಲು ಟೀಂ ಇಂಡಿಯಾ ಕಾತರಿಸುತ್ತಿದೆ.


ನ್ಯೂಯಾರ್ಕ್‌: ಮೊದಲೆರಡು ಪಂದ್ಯಗಳಲ್ಲಿ ಸಾಧಾರಣ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಹೊರತಾಗಿಯೂ ಬೌಲರ್‌ಗಳ ಸಾಹಸದಿಂದ ಗೆಲುವುಗಳನ್ನು ಸಾಧಿಸಿದ್ದ ಭಾರತಕ್ಕೆ, ಬುಧವಾರ ಆತಿಥೇಯ ಅಮೆರಿಕ ಸವಾಲು ಎದುರಾಗಲಿದೆ. ಅಮೆರಿಕ ಎನ್ನುವುದಕ್ಕಿಂತ ಇದೊಂದು ರೀತಿ ‘ಮಿನಿ ಇಂಡಿಯಾ’ದ ಸವಾಲು ಎಂದೇ ಕರೆಯಬಹುದು. ಕಾರಣ, ಅಮೆರಿಕ ತಂಡದಲ್ಲಿ 8 ಭಾರತೀಯ ಮೂಲದ ಆಟಗಾರರಿದ್ದು, ಇದರಲ್ಲಿ 6 ಮಂದಿ ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದಾರೆ.

ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ, ಅಧಿಕೃತವಾಗಿ ಸೂಪರ್‌-8 ಹಂತಕ್ಕೆ ಪ್ರವೇಶಿಸಲಿದೆ. ಅಲ್ಲದೇ ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣದಲ್ಲಿ ತಂಡಕ್ಕಿದು ಕೊನೆಯ ಪಂದ್ಯವಾಗಿದ್ದು, ಯಾವುದೇ ಆಘಾತಕಾರಿ ಫಲಿತಾಂಶಕ್ಕೆ ದಾರಿ ಮಾಡಿಕೊಡದೆ, ಸುಲಭವಾಗಿ ಗೆದ್ದು ಮುನ್ನಡೆಯಲು ಟೀಂ ಇಂಡಿಯಾ ಕಾತರಿಸುತ್ತಿದೆ.

Latest Videos

undefined

T20 World Cup 2024: ಪಾಕಿಸ್ತಾನಕ್ಕೆ ಕೊನೆಗೂ ಒಲಿದ ಗೆಲುವು

ತಂಡದ ಬ್ಯಾಟಿಂಗ್‌ ಪಡೆಗೆ ಮತ್ತೊಮ್ಮೆ ಕಠಿಣ ಸವಾಲು ಎದುರಾಗಲಿದ್ದು, ಸೂಪರ್‌-8ಗೂ ಮುನ್ನ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಆರಂಭಿಕರಾಗಿ ಇನ್ನಷ್ಟೇ ದೊಡ್ಡ ಇನ್ನಿಂಗ್ಸ್‌ ಆಡಬೇಕಿದ್ದು, ಕಳಪೆ ಆಟಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿರುವ ಸೂರ್ಯಕುಮಾರ್‌ ಯಾದವ್‌ ಮೇಲೆ ಭಾರಿ ಒತ್ತಡವಿದೆ. ರಿಷಭ್‌ ಪಂತ್‌ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಹಾರ್ದಿಕ್‌ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿ ಅರಿತು ಬ್ಯಾಟ್‌ ಮಾಡಬೇಕಾದ ಅನಿವಾರ್ಯತೆ ಇದೆ.

ದುಬೆಗೆ ಕೊಕ್‌?: ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ, ಫೀಲ್ಡಿಂಗ್‌ನಲ್ಲೂ ಹೀನಾಯ ಪ್ರದರ್ಶನ ನೀಡುತ್ತಿರುವ ಶಿವಂ ದುಬೆ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಹಾಕುವ ಸಾಧ್ಯತೆ ಇದೆ. ಅವರ ಬದಲಿಗೆ ಸಂಜು ಸ್ಯಾಮ್ಸನ್‌ ಆಡಬಹುದು ಎನ್ನಲಾಗುತ್ತಿದೆ. ಇಲ್ಲವೇ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡಿ, ರೋಹಿತ್‌ ಜೊತೆ ಆರಂಭಿಕನನ್ನಾಗಿ ಆಡಿಸಬಹುದು. ಆಗ ಕೊಹ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು, ಸೂಪರ್‌-8ಗೂ ಮುನ್ನ ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ಗೂ ಅವಕಾಶ ನೀಡಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ.

T20 World Cup 2024: ಅಮೆರಿಕ ಎದುರಿನ ಪಂದ್ಯದಿಂದ ದುಬೆಗೆ ಗೇಟ್‌ಪಾಸ್, ಈ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್‌..!

ಅಮೆರಿಕಕ್ಕೆ ಅತಿದೊಡ್ಡ ಪಂದ್ಯ: ಇದೇ ಮೊದಲ ಬಾರಿಗೆ ಅಮೆರಿಕ ತಂಡ ಭಾರತವನ್ನು ಎದುರಿಸಲಿದೆ. ತನ್ನ ದೇಶದಲ್ಲೇ ಕ್ರಿಕೆಟ್‌ನ ಅತಿದೊಡ್ಡ ಟೂರ್ನಿ ನಡೆಯುತ್ತಿದ್ದರೂ, ಸ್ಥಳೀಯರಿಂದ ಹಾಗೂ ಸ್ಥಳೀಯ ಮಾಧ್ಯಮಗಳಿಂದ ಯಾವುದೇ ರೀತಿಯಲ್ಲಿ ಬೆಂಬಲ ದೊರೆಯುತ್ತಿಲ್ಲ. ಈ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದರೆ, ಅಮೆರಿಕದಲ್ಲಿ ಕ್ರಿಕೆಟ್‌ ಒಂದು ಮಟ್ಟಕ್ಕೆ ಜನಪ್ರಿಯತೆ ಗಳಿಸಬಹುದು ಎಂದು ಅನೇಕರು ಅಭಿಪ್ರಾಯಿಸಿದ್ದಾರೆ.

ಭಾರತೀಯ ಮೂಲದ ಆಟಗಾರರಾದ ಸೌರಭ್‌ ನೇತ್ರವಾಲ್ಕರ್‌, ಹರ್ಮೀತ್‌ ಸಿಂಗ್‌, ನಾಯಕ ಮೋನಂಕ್‌ ಪಟೇಲ್‌, ನಿತೀಶ್‌ ಕುಮಾರ್‌, ನ್ಯೂಜಿಲೆಂಡ್‌ನ ಮಾಜಿ ಆಟಗಾರ ಕೋರಿ ಆ್ಯಂಡರ್‌ಸನ್‌, ಪಾಕಿಸ್ತಾನ ಮೂಲದ ಅಲಿ ಖಾನ್, ವಿಂಡೀಸ್‌ನ ಆ್ಯರೋನ್‌ ಜೋನ್ಸ್‌ ಮೇಲೆ ಅಮೆರಿಕ ತಂಡ ಹೆಚ್ಚು ಅವಲಂಬಿತಗೊಂಡಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ (ನಾಯಕ), ವಿರಾಟ್‌ ಕೊಹ್ಲಿ, ಪಂತ್‌, ಸೂರ್ಯ, ದುಬೆ/ಸ್ಯಾಮ್ಸನ್‌, ಹಾರ್ದಿಕ್‌, ಅಕ್ಷರ್, ಜಡೇಜಾ, ಬೂಮ್ರಾ, ಸಿರಾಜ್‌, ಅರ್ಶ್‌ದೀಪ್‌.

ಅಮೆರಿಕ: ಟೇಲರ್‌, ಮೋನಂಕ್‌ (ನಾಯಕ), ಗೌಸ್‌, ಜೋನ್ಸ್‌, ನಿತೀಶ್‌, ಆ್ಯಂಡರ್‌ಸನ್‌, ಹರ್ಮೀತ್‌, ಜಸ್‌ದೀಪ್‌, ನೋಸ್ತುಷ್‌, ಸೌರಭ್‌, ಅಲಿ ಖಾನ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ನಾಸೌ ಕ್ರೀಡಾಂಗಣದ ಪಿಚ್‌ ಸುಧಾರಿಸಿದ್ದು, ಆರಂಭಿಕ ಪಂದ್ಯಗಳಲ್ಲಿ ಕಂಡು ಬಂದಿದ್ದ ಅನಿರೀಕ್ಷಿತ ಬೌನ್ಸ್‌ ಈಗಿಲ್ಲ. ಇನ್ನು ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕವಿಲ್ಲವಾದರೂ, ಇದು ಕೂಡ ಲೋ ಸ್ಕೋರಿಂಗ್‌ ಪಂದ್ಯವಾಗುವ ಸಾಧ್ಯತೆಯೇ ಹೆಚ್ಚು.
 

click me!