
ನ್ಯೂಯಾರ್ಕ್: ಈ ಬಾರಿ ಟಿ20 ವಿಶ್ವಕಪ್ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಹಾಗೂ ಟಿ20 ವಿಶ್ವಕಪ್‌ನ ಅಧಿಕೃತ ಪ್ರಸಾರಕರು ಟೀವಿ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಜೂ.9ರ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನೇ ಆಯೋಜಕರು, ಪ್ರಸಾರಕರು ನೆಚ್ಚಿಕೊಂಡಿದ್ದಾರೆ.
ಕ್ರಿಕೆಟ್‌ಗೆ ಹೆಚ್ಚಿನ ಮಾರುಕಟ್ಟೆ ಇರುವುದು ಭಾರತದಲ್ಲಿ. ಉಳಿದಂತೆ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್‌ನಲ್ಲೂ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಭಾರತದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಭಾರತದ ಪಂದ್ಯಗಳ ಸಮಯ ನಿಗದಿಪಡಿಸಲಾಗಿದೆ.
ಇನ್ನುಳಿದ ಬಹುತೇಕ ಪಂದ್ಯಗಳು ಅಮೆರಿಕ ಕಾಲಮಾನದ ಪ್ರಕಾರ ಸಂಜೆ ಹಾಗೂ ರಾತ್ರಿ (ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ) ನಡೆಯಲಿರುವ ಕಾರಣ ಟೀವಿ ಪ್ರೇಕ್ಷಕರು ಕಡಿಮೆಯಾಗಿದ್ದಾರೆ. ಹೀಗಾಗಿ ಸದ್ಯ ಆಯೋಜಕರು ಭಾರತ-ಪಾಕ್ ಪಂದ್ಯವನ್ನೇ ನೆಚ್ಚಿಕೊಂಡಿದ್ದು, ಈ ಪಂದ್ಯದ ಮೂಲಕವೇ ಬಹುಪಾಲು ಆದಾಯದ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
10 ಸೆಕೆಂಡ್ ಜಾಹೀರಾತಿಗೆ ಕನಿಷ್ಠ 50 ಲಕ್ಷ ರು. ನಿಗದಿ?
ಭಾರತ-ಪಾಕ್ ಪಂದ್ಯಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ ಈ ಪಂದ್ಯದ ವೇಳೆ ಪ್ರಸಾರಗೊಳ್ಳುವ 10 ಸೆಕೆಂಡ್‌ಗಳ ಜಾಹೀರಾತಿಗೆ ಕನಿಷ್ಠ ₹50 ಲಕ್ಷ ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಈ ವಿಶ್ವಕಪ್‌ನ ಸಾಮಾನ್ಯ ಪಂದ್ಯಗಳ ಜಾಹೀರಾತು ಶುಲ್ಕ 10 ಸೆಕೆಂಡ್‌ಗೆ ₹6 ಲಕ್ಷ ಇದ್ದು, ಇನ್ನುಳಿದ ಪ್ರಮುಖ ಪಂದ್ಯಗಳಿಗೆ ₹12ರಿಂದ 15 ಲಕ್ಷದ ವರೆಗೆ ಶುಲ್ಕ ನಿಗದಿಪಡಿಸಲಾಗಿದೆ. ಭಾರತ ನಾಕೌಟ್ ಹಂತಕ್ಕೇರಿದರೆ, ಆ ಪಂದ್ಯಗಳ ಜಾಹೀರಾತಿಗೆ ಕನಿಷ್ಠ ₹26 ಲಕ್ಷ ನಿಗದಿಯಾಗಬಹುದು ಎನ್ನಲಾಗಿದೆ.
ಐರ್ಲೆಂಡ್‌ನ ಮಣಿಸಿ ವಿಶ್ವ ಸಮರದಲ್ಲಿ ಟೀಂ ಇಂಡಿಯಾ ಶುಭಾರಂಭ
ನ್ಯೂಯಾರ್ಕ್: 11 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಪಣ್ಣತೊಟ್ಟು ಟಿ20 ವಿಶ್ವಕಪ್‌ಗೆ ಕಣಕ್ಕಿಳಿದಿರುವ ಭಾರತ, ತನ್ನ ಅಭಿಯಾನವನ್ನು ಸುಲಭ ಜಯದೊಂದಿಗೆ ಆರಂಭಿಸಿದೆ. ಬುಧವಾರ ‘ಎ’ ಗುಂಪಿನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಗೆಲುವು ದಾಖಲಿಸಿತು.
ವೇಗಿಗಳಿಗೆ ಹೆಚ್ಚು ನೆರವು ಸಿಕ್ಕ ಪಿಚ್‌ನಲ್ಲಿ ಟಾಸ್ ಗೆದ್ದು ಮೊದಲು ಬೌಲ್ ಮಾಡಿದ ಭಾರತ, ಐರ್ಲೆಂಡನ್ನು 16 ಓವರಲ್ಲಿ ಕೇವಲ 96 ರನ್‌ಗೆ ಆಲೌಟ್ ಮಾಡಿತು. ಸುಲಭ ಗುರಿ ಬೆನ್ನತ್ತಿದ ಭಾರತ, 12.2 ಓವರಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ರೋಹಿತ್, 52 ರನ್ ಗಳಿಸಿದರು.
ಉತ್ತಮ ಲಯದೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟ ಐರ್ಲೆಂಡ್, ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿತು. ಪಿಚ್ ಬಗ್ಗೆ ಸರಿಯಾದ ಅಧ್ಯಯನ ನಡೆಸಿ ಹಾರ್ದಿಕ್ ಸೇರಿ ನಾಲ್ವರು ವೇಗಿಗಳೊಂದಿಗೆ ಆಡಿದ ಭಾರತಕ್ಕೆ ನಿರೀಕ್ಷಿತ ಯಶಸ್ಸು ದೊರೆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.