ಫಿಫ್ಟಿ, ಸೆಂಚುರಿ ಬಗ್ಗೆ ತಲೆಕೆಡಿಸಿಕೊಳ್ಳೊಲ್ಲ, ನನ್ನದೇನಿದ್ರು....: ಮನಬಿಚ್ಚಿ ಮಾತಾಡಿದ ರೋಹಿತ್ ಶರ್ಮಾ..!

By Naveen KodaseFirst Published Jun 26, 2024, 12:09 PM IST
Highlights

ಆಸ್ಟ್ರೇಲಿಯಾ ವಿರುದ್ಧ ವರ್ಲ್ಡ್ ಕಪ್ ಟಿ20 ಪಂದ್ಯದ ಸೂಪರ್ 8 ಹಂತದಲ್ಲಿ ಫಾಸ್ಟೆಸ್ಟ್ ಅರ್ಧ ಶತಕ ಸಿಡಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಅವರ ಮನದಾಳದ ಮಾತಿದು!

ಗ್ರಾಸ್‌ ಐಲೆಟ್: ಆಸ್ಟ್ರೇಲಿಯಾ ವಿರುದ್ಧದ ಸೂಪರ್ -8 ಪಂದ್ಯದಲ್ಲಿ 92 ರನ್‌ಗೆ ಔಟಾಗಿ ಶತಕ ವಂಚಿತರಾದ ಭಾರತದ ನಾಯಕ ರೋಹಿತ್‌ ಶರ್ಮಾ, ತಾವು ಅರ್ಧಶತಕ, ಶತಕಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.  ಗೆಲುವಿನ ಬಳಿಕ ಮಾತನಾಡಿದ ರೋಹಿತ್, 'ದೊಡ್ಡ ಮೊತ್ತ ದಾಖಲಿಸಬೇಕು ಎನ್ನುವ ಇಚ್ಚೆ ಖಂಡಿತವಾಗಿಯೂ ಇರಲಿದೆ. ಆದರೆ ತಂಡದ ಅಗತ್ಯಕ್ಕೆ ತಕ್ಕಂತೆ ಆಡುವುದು ನನ್ನ ಗುರಿ. ಅರ್ಧಶತಕ, ಶತಕಗಳ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಅವುಗಳ ಬಗ್ಗೆ ನಾನು ಚಿಂತಿಸುವುದೂ ಇಲ್ಲ' ಎಂದಿದ್ದಾರೆ.

ಈ ಟಿ20 ವಿಶ್ವಕಪ್‌ನಲ್ಲಿ ಮೂವರಿಗೆ ಶತಕ ಮಿಸ್‌!

Latest Videos

ಗ್ರಾಸ್‌ ಐಲೆಟ್‌: 2024ರ ಟಿ20 ವಿಶ್ವಕಪ್‌ನಲ್ಲಿ ಮೂವರು ಬ್ಯಾಟರ್‌ಗಳ ಶತಕದ ಆಸೆ ಈಡೇರಲಿಲ್ಲ. ಶತಕದ ಸನಿಹಕ್ಕೆ ತಲುಪಿದ್ದಾಗ ಔಟಾಗುವ ಅಥವಾ ಶತಕ ಪೂರೈಸುವ ಮೊದಲೇ ತಂಡದ ಇನ್ನಿಂಗ್ಸ್‌ ಮುಕ್ತಾಯಗೊಂಡ ಕಾರಣ ಅಮೆರಿಕದ ಆ್ಯರೋನ್‌ ಜೋನ್ಸ್‌, ವಿಂಡೀಸ್‌ನ ನಿಕೋಲಸ್‌ ಪೂರನ್‌ ಹಾಗೂ ಭಾರತದ ರೋಹಿತ್‌ ಶರ್ಮಾ ನಿರಾಸೆ ಅನುಭವಿಸಿದ್ದಾರೆ. ಕೆನಡಾ ವಿರುದ್ಧ ಜೋನ್ಸ್‌ ಔಟಾಗದೆ 94 ರನ್‌ ಗಳಿಸಿದರೆ, ಅಫ್ಘಾನಿಸ್ತಾನ ವಿರುದ್ಧ ಪೂರನ್‌ 98 ರನ್‌ಗೆ ಔಟಾದರು. ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರೋಹಿತ್‌ 92 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು.

ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌: ಜುಲೈ 19ರಂದು ಭಾರತ vs ಪಾಕ್‌ ಕಾದಾಟ

ಆಸೀಸ್‌ ವಿರುದ್ಧ ಪಂದ್ಯದಲ್ಲಿ ಸಿಡಿದ ರೋಹಿತ್‌: ಹಲವು ದಾಖಲೆಗಳು ಪುಡಿಪುಡಿ

ಗ್ರಾಸ್‌ ಐಲೆಟ್‌: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟರ್‌ ಎನ್ನುವ ದಾಖಲೆಯನ್ನು ಭಾರತದ ನಾಯಕ ರೋಹಿತ್‌ ಶರ್ಮಾ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸೋಮವಾರ ನಡೆದ ಟಿ20 ವಿಶ್ವಕಪ್‌ನ ಸೂಪರ್‌-8 ಪಂದ್ಯದಲ್ಲಿ ರೋಹಿತ್‌ ಈ ಮೈಲಿಗಲ್ಲು ತಲುಪಿದರು.

ಪ್ಯಾಟ್‌ ಕಮಿನ್ಸ್‌ರ ಎಸೆತವನ್ನು ಆಕರ್ಷಕ ರೀತಿಯಲ್ಲಿ ಸಿಕ್ಸರ್‌ಗಟ್ಟಿದ ರೋಹಿತ್‌, 200 ಸಿಕ್ಸರ್‌ಗಳನ್ನು ಪೂರೈಸಿದರು. ಆಸೀಸ್‌ ವಿರುದ್ಧ ಅವರ ಇನ್ನಿಂಗ್ಸಲ್ಲಿ ಬರೋಬ್ಬರಿ 8 ಸಿಕ್ಸರ್‌ಗಳಿದ್ದವು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ ಬಾರಿಸಿರುವ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆಯೂ ರೋಹಿತ್‌ರ ಹೆಸರಿನಲ್ಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್‌ ಡೇವಿಡ್‌ ವಾರ್ನರ್ ಗುಡ್‌ಬೈ

01ನೇ ಬ್ಯಾಟರ್‌: ಟಿ20 ಪಂದ್ಯದ ಪವರ್‌-ಪ್ಲೇ (ಮೊದಲ 6 ಓವರ್‌)ನಲ್ಲಿ 5 ಸಿಕ್ಸರ್‌ ಸಿಡಿಸಿದ ಭಾರತದ ಮೊದಲ ಆಟಗಾರ ರೋಹಿತ್‌.

19 ಎಸೆತ: ಟಿ20 ವಿಶ್ವಕಪ್‌ನಲ್ಲಿ ಆಸೀಸ್‌ ವಿರುದ್ಧ ಅತಿವೇಗದ ಫಿಫ್ಟಿ ಬಾರಿಸಿದ ಆಟಗಾರ ರೋಹಿತ್‌ (19 ಎಸೆತ). ಯುವಿ 20 ಎಸೆತ, ಗೇಲ್‌ 23 ಎಸೆತದಲ್ಲಿ ಫಿಫ್ಟಿ ಬಾರಿಸಿದ್ದರು.

29 ರನ್‌: ಸ್ಟಾರ್ಕ್‌ ಎಸೆದ ಇನ್ನಿಂಗ್ಸ್‌ನ 3ನೇ ಓವರಲ್ಲಿ ಭಾರತ 29 ರನ್‌ ಕಲೆಹಾಕಿತು. ಇದು ಅಂ.ರಾ. ಕ್ರಿಕೆಟ್‌ನಲ್ಲಿ ಸ್ಟಾರ್ಕ್‌ ಒಂದು ಓವರಲ್ಲಿ ಚಚ್ಚಿಸಿಕೊಂಡ ಗರಿಷ್ಠ ರನ್‌.

ಪವರ್‌-ಪ್ಲೇನಲ್ಲೇ 51 ರನ್‌: ವಿಶ್ವಕಪ್‌ನಲ್ಲಿ 3ನೇ ಗರಿಷ್ಠ

ರೋಹಿತ್‌ ಶರ್ಮಾ ಪವರ್‌-ಪ್ಲೇನಲ್ಲಿ 21 ಎಸೆತಗಳಲ್ಲಿ 51 ರನ್‌ ಸಿಡಿಸಿದರು. ಇದು ಪುರುಷರ ಟಿ20 ವಿಶ್ವಕಪ್‌ನಲ್ಲಿ 3ನೇ ಗರಿಷ್ಠ. 2014ರಲ್ಲಿ ನೆದರ್‌ಲೆಂಡ್ಸ್‌ನ ಸ್ಟೀಫನ್‌ ಮೈಬರ್ಗ್‌ ಐರ್ಲೆಂಡ್‌ ವಿರುದ್ಧ 21 ಎಸೆತಗಳಲ್ಲಿ 57 ರನ್‌ ಸಿಡಿಸಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ. 2022ರಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶದ ಲಿಟನ್‌ ದಾಸ್‌ 24 ಎಸೆತಗಳಲ್ಲಿ 56 ರನ್‌ ಬಾರಿಸಿದ್ದರು. 2021ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಕೆ.ಎಲ್‌.ರಾಹುಲ್‌ 19 ಎಸೆತಗಳಲ್ಲಿ 50 ರನ್‌ ಸಿಡಿಸಿದ್ದು, ಪಟ್ಟಿಯಲ್ಲಿ 4ನೇ ಸ್ಥಾನದದಲ್ಲಿದ್ದಾರೆ.

8.4 ಓವರ್‌ನಲ್ಲೇ 100 ರನ್‌: ಭಾರತ ದಾಖಲೆ

ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೇವಲ 8.4 ಓವರ್‌ಗಳಲ್ಲೇ 100 ರನ್‌ ಪೂರ್ಣಗೊಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ಅತಿ ವೇಗದ 100 ರನ್‌. 2007ರಲ್ಲಿ ನ್ಯೂಜಿಲೆಂಡ್‌ ವಿರುದ್ಧ 10.2 ಓವರ್‌ಗಳಲ್ಲಿ 100 ಹೊಡೆದಿದ್ದು ಈ ಹಿಂದಿನ ದಾಖಲೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಬ್ಯಾಟರ್‌ನ 2ನೇ ಗರಿಷ್ಠ ರನ್

ರೋಹಿತ್‌ ಶರ್ಮಾ ಗಳಿಸಿದ 92 ರನ್‌ ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ನ 2ನೇ ಗರಿಷ್ಠ ರನ್‌. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸುರೇಶ್‌ ರೈನಾ 102 ರನ್‌ ಗಳಿಸಿದ್ದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ನಿಂದ ದಾಖಲಾದ ಏಕೈಕ ಶತಕ.

ಟಿ20 ವಿಶ್ವಕಪ್‌ ಇನ್ನಿಂಗ್ಸಲ್ಲಿ ಗರಿಷ್ಠ ಸಿಕ್ಸರ್‌ ದಾಖಲೆ

ಆಸೀಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ 8 ಸಿಕ್ಸರ್‌ ಸಿಡಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಪೈಕಿ ಗರಿಷ್ಠ. 2007ರಲ್ಲಿ ಇಂಗ್ಲೆಂಡ್‌ ವಿರುದ್ಧ ಯುವರಾಜ್‌ ಸಿಂಗ್‌ 7 ಸಿಕ್ಸರ್‌ ಬಾರಿಸಿದ್ದು ಈ ವರೆಗಿನ ದಾಖಲೆಯಾಗಿತ್ತು. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಕ್ರಿಸ್‌ ಗೇಲ್‌ 11 ಸಿಕ್ಸರ್‌ ಬಾರಿಸಿದ್ದು ಒಟ್ಟಾರೆ ಗರಿಷ್ಠ ಎನಿಸಿದೆ.

ಅಂ.ರಾ. ಕ್ರಿಕೆಟ್‌ನಲ್ಲಿ 19,000 ರನ್‌ ಮೈಲುಗಲ್ಲು

ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19,000 ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ 4ನೇ ಭಾರತೀಯ ಎನಿಸಿದರು. ಸಚಿನ್‌, ವಿರಾಟ್‌ ಕೊಹ್ಲಿ, ರಾಹುಲ್‌ ದ್ರಾವಿಡ್‌ ಇತರ ಸಾಧಕರು. ಒಟ್ಟಾರೆ ವಿಶ್ವ ಕ್ರಿಕೆಟ್‌ನಲ್ಲಿ 19000 ರನ್‌ ಕಲೆಹಾಕಿದ 15ನೇ ಬ್ಯಾಟರ್‌ ರೋಹಿತ್‌.

ಆಸ್ಟ್ರೇಲಿಯಾ ವಿರುದ್ಧ 132 ಸಿಕ್ಸರ್‌: ದಾಖಲೆ

ರೋಹಿತ್‌ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 132 ಸಿಕ್ಸರ್‌ ಬಾರಿಸಿದ್ದಾರೆ. ಇದು ತಂಡವೊಂದರ ವಿರುದ್ಧ ಆಟಗಾರನೊಬ್ಬನ ಗರಿಷ್ಠ. ಕ್ರಿಸ್‌ ಗೇಲ್‌ ಇಂಗ್ಲೆಂಡ್‌ ವಿರುದ್ಧ 130 ಸಿಕ್ಸರ್‌ ಬಾರಿಸಿದ್ದಾರೆ.

19 ಎಸೆತ: ರೋಹಿತ್‌ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ಈ ಬಾರಿ ವಿಶ್ವಕಪ್‌ನಲ್ಲಿ ಅತಿ ವೇಗದ ಫಿಫ್ಟಿ.
 

click me!