T20 World Cup ಸೂಪರ್ 12ಗೆ ಲಂಕಾ, ನೆದರ್‌ಲೆಂಡ್ಸ್‌ ಲಗ್ಗೆ..!

By Kannadaprabha NewsFirst Published Oct 21, 2022, 10:02 AM IST
Highlights

ಅರ್ಹತಾ ಸುತ್ತಿನಿಂದ ಸೂಪರ್ 12 ಹಂತಕ್ಕೇರಿದ ಶ್ರೀಲಂಕಾ, ನೆದರ್‌ಲೆಂಡ್ಸ್‌
'ಎ' ಗುಂಪಿನ ಪಂದ್ಯದಲ್ಲಿ ಲಂಕಾ, ನೆದರ್‌ಲೆಂಡ್ಸ್‌ ಭರ್ಜರಿ ಪ್ರದರ್ಶನ
ಲಂಕಾ ಎದುರು ಸೋತರೂ ಸೂಪರ್ 12 ಸ್ಥಾನಕ್ಕೇರಿದ ನೆದರ್‌ಲೆಂಡ್ಸ್‌

ಗೀಲಾಂಗ್‌(ಅ.21): ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌-12 ಹಂತಕ್ಕೆ ಶ್ರೀಲಂಕಾ ಹಾಗೂ ನೆದರ್‌ಲೆಂಡ್‌್ಸ ತಂಡಗಳು ಪ್ರವೇಶ ಪಡೆದಿವೆ. ಯುಎಇ ಹಾಗೂ ನಮೀಬಿಯಾ ಹೊರಬಿದ್ದಿವೆ. ಗುರುವಾರ ‘ಎ’ ಗುಂಪಿನ ಅಂತಿಮ 2 ಪಂದ್ಯಗಳು ಭಾರೀ ರೋಚಕತೆಯಿಂದ ಕೂಡಿದ್ದವು. ನೆದರ್‌ಲೆಂಡ್‌್ಸ ವಿರುದ್ಧ ಶ್ರೀಲಂಕಾ 16 ರನ್‌ಗಳ ಜಯ ಸಾಧಿಸಿ, ಪ್ರಧಾನ ಸುತ್ತಿನಲ್ಲಿ ಸ್ಥಾನ ಖಚಿತಪಡಿಸಿಕೊಂಡರೆ, ನಮೀಬಿಯಾವನ್ನು ಸೋಲಿಸಿದ ಯುಎಇ ತಂಡ ನೆದರ್‌ಲೆಂಡ್‌್ಸಗೆ ದೊಡ್ಡ ಸಹಾಯ ಮಾಡಿತು.

ಮೊದಲ ಪಂದ್ಯದಲ್ಲೇ ನಮೀಬಿಯಾಗೆ ಶರಣಾಗಿ ಟೂರ್ನಿಯಿಂದ ಹೊರಬೀಳುವ ಆತಂತಕ್ಕೆ ಗುರಿಯಾಗಿದ್ದ ಶ್ರೀಲಂಕಾ ತನ್ನ ಮುಂದಿನ 2 ಪಂದ್ಯಗಳಲ್ಲಿ ಜಯಿಸಿ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಲಂಕಾ 6 ವಿಕೆಟ್‌ಗೆ 162 ರನ್‌ ಕಲೆಹಾಕಿತು. ವಿಕೆಟ್‌ ಕೀಪರ್‌ ಕುಸಾಲ್‌ ಮೆಂಡಿಸ್‌ 44 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ನೊಂದಿಗೆ 79 ರನ್‌ ಸಿಡಿಸಿದರು.

ಇದಕ್ಕುತ್ತರವಾಗಿ ನೆದರ್‌ಲೆಂಡ್‌್ಸ 9 ವಿಕೆಟ್‌ಗೆ 146 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟರ್‌ ಮ್ಯಾಕ್ಸ್‌ ಒ’ಡೌಡ್‌ 53 ಎಸೆತದಲ್ಲಿ 71 ರನ್‌ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಹೋರಾಟ ಕಂಡುಬರಲಿಲ್ಲ.

ಸ್ಕೋರ್‌: 
ಲಂಕಾ 20 ಓವರಲ್ಲಿ 162/6(ಮೆಂಡಿಸ್‌ 79, ಅಸಲಂಕ 31, ಮೀಕೆರೆನ್‌ 2-25) 
ನೆದರ್‌ಲೆಂಡ್‌್ಸ 20 ಓವರಲ್ಲಿ 146/9(ಡೌಡ್‌ 71, ಎಡ್ವರ್ಡ್ಸ್ 21, ಹಸರಂಗ 3-28)

ಯುಎಇಗೆ 7 ರನ್‌ ಜಯ

ಯುಎಇ ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದರೂ ಜಯದ ಸಂಭ್ರಮವನ್ನು ಆಚರಿಸಿದ್ದು ನೆದರ್‌ಲೆಂಡ್‌್ಸ. ಕಾರಣ ಯುಎಇ ಗೆಲುವು ಡಚ್‌ ತಂಡವನ್ನು ಸೂಪರ್‌-12 ಹಂತಕ್ಕೇರಿಸಿತು. 7 ರನ್‌ಗಳಿಂದ ಗೆದ್ದ ಯುಎಇ ತಾನು ಟೂರ್ನಿಯಿಂದ ಹೊರಬೀಳುವುದು ಮಾತ್ರವಲ್ಲ ನಮೀಬಿಯಾವನ್ನೂ ಹೊರಹಾಕಿತು. ಮೊದಲು ಬ್ಯಾಟ್‌ ಮಾಡಿದ ಯುಎಇ 3 ವಿಕೆಟ್‌ಗೆ 148 ರನ್‌ ಗಳಿಸಿತ್ತು. ನಮೀಬಿಯಾ 69 ರನ್‌ಗೆ 7 ವಿಕೆಟ್‌ ಕಳೆದುಕೊಂಡರೂ ಡೇವಿಡ್‌ ವೀಸಾ(55) ಹೋರಾಟದ ನೆರವಿನಿಂದ ಜಯದ ಹೊಸ್ತಿಲು ತಲುಪಿತು. 8 ವಿಕೆಟ್‌ಗೆ 141 ರನ್‌ ಗಳಿಸಿ ವೀರೋಚಿತ ಸೋಲು ಕಂಡಿತು.

T20 World Cup: ನೆದರ್‌ಲ್ಯಾಂಡ್ ಮಣಿಸಿ ಸೂಪರ್‌ 12 ಹಂತಕ್ಕೆ ಲಗ್ಗೆಯಿಟ್ಟ ಶ್ರೀಲಂಕಾ..!

ಸ್ಕೋರ್‌: ಯುಎಇ 20 ಓವರಲ್ಲಿ 148/3(ವಸೀಂ 50, ರಿಜ್ವಾನ್‌ 43, ಸ್ಕೊಲ್ಟ್‌$್ಜ 1-22)
ನಮೀಬಿಯಾ 20 ಓವರಲ್ಲಿ 141/8(ವೀಸಾ 55, ರುಬೆನ್‌ 25*, ಜಹೂರ್‌ 2-20, ಹಮೀದ್‌ 2-17)

ಸೂಪರ್‌-12 ಪ್ರವೇಶಿಸುವ ಇನ್ನೆರಡು ತಂಡ ಯಾವುವು?

ಹೊಬಾರ್ಚ್‌: ಅರ್ಹತಾ ಸುತ್ತು ಶುಕ್ರವಾರ ಕೊನೆಗೊಳ್ಳಲಿದ್ದು, ಸೂಪರ್‌-12 ಹಂತಕ್ಕೆ ಪ್ರವೇಶಿಸುವ ಮತ್ತೆರಡು ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಲಿದೆ. ವೆಸ್ಟ್‌ಇಂಡೀಸ್‌ ಹಾಗೂ ಐರ್ಲೆಂಡ್‌ ಸೆಣಸಲಿದ್ದು, ಮತ್ತೊಂದು ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ಸ್ಕಾಟ್ಲೆಂಡ್‌ ಮುಖಾಮುಖಿಯಾಗಲಿವೆ. ಗೆಲ್ಲುವ ತಂಡಗಳು ಸೂಪರ್‌-12ಗೆ ಅರ್ಹತೆ ಪಡೆಯಲಿವೆ.

ಪಂದ್ಯ: ಐರ್ಲೆಂಡ್‌-ವಿಂಡೀಸ್‌, ಬೆಳಗ್ಗೆ 9.30ಕ್ಕೆ

ಸ್ಕಾಟ್ಲೆಂಡ್‌-ಜಿಂಬಾಬ್ವೆ, ಮಧ್ಯಾಹ್ನ 1.30ಕ್ಕೆ

click me!