Syed Mushtaq Ali Trophy: ಶುಭ್‌ಮನ್‌ ಗಿಲ್ ಸ್ಪೋಟಕ ಶತಕ, ಕರ್ನಾಟಕಕ್ಕೆ ರೋಚಕ ಸೋಲು

By Naveen KodaseFirst Published Nov 1, 2022, 4:40 PM IST
Highlights

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕದ ಹೋರಾಟ ಅಂತ್ಯ
ಕ್ವಾರ್ಟರ್‌ ಫೈನಲ್‌ನಲ್ಲಿ ಪಂಜಾಬ್ ಎದುರು 9 ರನ್‌ಗಳ ರೋಚಕ ಸೋಲುಂಡ ಕರ್ನಾಟಕ
ಸ್ಪೋಟಕ ಶತಕ ಸಿಡಿಸಿ ಮಿಂಚಿದ ಶುಭ್‌ಮನ್ ಗಿಲ್‌

ಕೋಲ್ಕತಾ(ನ.01): ಪಂಜಾಬ್ ಎದುರು 9 ರನ್‌ಗಳ ರೋಚಕ  ಸೋಲು ಅನುಭವಿಸುವ ಮೂಲಕ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಯಾಂಕ್‌ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡದ ಅಭಿಯಾನ ಕ್ವಾರ್ಟರ್‌ ಫೈನಲ್‌ನಲ್ಲಿಯೇ ಅಂತ್ಯವಾಗಿದೆ. ಪಂಜಾಬ್ ನೀಡಿದ್ದ 217 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 216 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 9 ರನ್‌ಗಳ ರೋಚಕ ಸೋಲು ಅನುಭವಿಸಿದೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್‌ ತಂಡವು ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಕೇವಲ 18 ರನ್‌ ಗಳಿಸುವಷ್ಟರಲ್ಲೇ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ನಾಯಕ ಮಯಾಂಕ್ ಅಗರ್‌ವಾಲ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ರೋಹನ್ ಪಾಟೀಲ್ 2 ರನ್ ಗಳಿಸಿ ರನೌಟ್ ಆದರು. ಇನ್ನು ವಿಕೆಟ್ ಕೀಪರ್‌ ಬ್ಯಾಟರ್ ಲುವ್ನಿತ್ ಸಿಸೋಡಿಯಾ 6 ರನ್ ಬಾರಿಸಿ ಪೆವಿಲಿಯನ್ ಸೇರಿದರು. 

ಕೇವಲ 18 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಕರ್ನಾಟಕ ತಂಡಕ್ಕೆ 4ನೇ ವಿಕೆಟ್‌ಗೆ ಎಲ್ ಅರ್ ಚೇತನ್ ಹಾಗೂ ಮಾಜಿ ನಾಯಕ ಮನೀಶ್ ಪಾಂಡೆ ಆಸರೆಯಾದರು. ಈ ಜೋಡಿ ಚುರುಕಿನ 71 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಚೇತನ್ 25 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಮನೀಶ್ ಪಾಂಡೆ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಅಭಿನವ್ ಮನೋಹರ ಸ್ಪೋಟಕ ಅರ್ಧಶತಕ ವ್ಯರ್ಥ: ಇನ್ನು ರಾಜ್ಯದ ಪ್ರತಿಭಾನ್ವಿತ ಬ್ಯಾಟರ್ ಅಭಿನವ್ ಮನೋಹರ್ ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕರ್ನಾಟಕದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಅಭಿನವ್ ಮನೋಹರ್ ಕೇವಲ 29 ಎಸೆತಗಳಲ್ಲಿ5 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ಅಜೇಯ 62 ರನ್ ಚಚ್ಚಿದರು. 

ಇನ್ನು ಕೊನೆಯಲ್ಲಿ ಮನೋಜ್ ಬಂಡಾಜೆ ಕೇವಲ 9 ಎಸೆತಗಳಲ್ಲಿ 25 ಹಾಗೂ ಕೃಷ್ಣಪ್ಪ ಗೌತಮ್‌ ಕೇವಲ 14 ಎಸೆತಗಳಲ್ಲಿ ಅಜೇಯ 30 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 

T20 World Cup ಕೆ ಎಲ್ ರಾಹುಲ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಕೋಚ್ ರಾಹುಲ್ ದ್ರಾವಿಡ್

ಇನ್ನು ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಂಜಾಬ್ ತಂಡವು ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಇನ್ನು ಇದರ ಬೆನ್ನಲ್ಲೇ ಪ್ರಭುಸಿಮ್ರನ್‌ ವಿಕೆಟ್ ಕಳೆದುಕೊಂಡಿತು. ಪಂಜಾಬ್ 10 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಈ ಬಳಿಕ ಮೂರನೇ ವಿಕೆಟ್‌ಗೆ ಶುಭ್‌ಮನ್‌ ಗಿಲ್ ಹಾಗೂ ಅನ್‌ಮೋಲ್‌ಪ್ರೀತ್ ಸಿಂಗ್‌ 151 ರನ್‌ಗಳ ಜತೆಯಾಟವಾಡುವ ಮೂಲಕ ಕರ್ನಾಟಕದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಶುಭ್‌ಮನ್‌ ಗಿಲ್‌ ಕೇವಲ 55 ಎಸೆತಗಳಲ್ಲಿ 11 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ ಆಕರ್ಷಕ 126 ರನ್ ಬಾರಿಸಿ ಅಬ್ಬರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ 43 ಎಸೆತಗಳಲ್ಲಿ 59 ರನ್ ಚಚ್ಚುವ ಮೂಲಕ ಗಿಲ್‌ಗೆ ಉತ್ತಮ ಸಾಥ್ ನೀಡಿದರು. ಇನ್ನು ಕೊನೆಯಲ್ಲಿ ಸನ್ವೀರ್ ಸಿಂಗ್ ಕೇವಲ 13 ಎಸೆತಗಳಲ್ಲಿ 27 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು.

click me!