Syed Mushtaq Ali Trophy: ಪಾಂಡೆ-ಕದಂ ಅಬ್ಬರ, ವಿದರ್ಭಗೆ ಕಠಿಣ ಗುರಿ ನೀಡಿದ ಕರ್ನಾಟಕ

By Suvarna NewsFirst Published Nov 20, 2021, 2:52 PM IST
Highlights

* ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ವಿದರ್ಭ ತಂಡಕ್ಕೆ ಕಠಿಣ ಗುರಿ ನೀಡಿದ ಕರ್ನಾಟಕ

* ಆಕರ್ಷಕ ಅರ್ಧಶತಕ ಚಚ್ಚಿದ ರೋಹನ್ ಕದಂ, ಮನೀಶ್ ಪಾಂಡೆ

* ವಿದರ್ಭ ಫೈನಲ್ ಪ್ರವೇಶಿಸಲು 177 ರನ್‌ಗಳ ಕಠಿಣ ಗುರಿ

ದೆಹಲಿ(ನ.20): ಆರಂಭಿಕ ಬ್ಯಾಟರ್‌ ರೋಹನ್ ಕದಂ(Rohan Kadam)(87), ಮನೀಶ್ ಪಾಂಡೆ(54) ಸಿಡಿಲಬ್ಬರದ ಅರ್ಧಶತಕ ಹಾಗೂ ಅಭಿನವ್ ಮನೋಹರ್(27) ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ (Syed Mushtaq Ali Trophy) ಸೆಮಿಫೈನಲ್‌ನಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್‌ ಬಾರಿಸಿದ್ದು, ವಿದರ್ಭ ತಂಡಕ್ಕೆ ಕಠಿಣ ಗುರಿ ನೀಡಿದೆ.

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಉತ್ತಮ ಆರಂಭವನ್ನೇ ಪಡೆಯಿತು. ರೋಹನ್ ಕದಂ ಜತೆ ಮನೀಶ್ ಪಾಂಡೆ (Manish Pandey) ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಮುನ್ಸೂಚನೆ ನೀಡಿದರು. ಪಂದ್ಯದ ಆರಂಭದಲ್ಲೇ ರೋಹನ್ ಕದಂ 4 ರನ್ ಗಳಿಸಿದಾಗ ಸಿಕ್ಕ ಜೀವದಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಮನೀಶ್ ಪಾಂಡೆ ಹಾಗೂ ರೋಹನ್ ಕದಂ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 15.1 ಓವರ್‌ಗಳಲ್ಲಿ 132 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿತು.

Syed Mushtaq Ali Trophy: ಫೈನಲ್‌ಗಾಗಿಂದು ಕರ್ನಾಟಕ-ವಿದರ್ಭ ಸೆಣಸಾಟ

ಕರ್ನಾಟಕದ ಎಡಗೈ ಬ್ಯಾಟರ್‌ ರೋಹನ್‌ ಕದಂ ಕೇವಲ 56 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 4 ಸಿಕ್ಸರ್‌ ಸಹಿತ 87 ರನ್ ಬಾರಿಸಿ ಲಲಿತ್ ಯಾದವ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ನಾಯಕನ ಆಟವಾಡಿದ ಮನೀಶ್ ಪಾಂಡೆ 42 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 54 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಡ್ತಿಪಡೆದು ಕಣಕ್ಕಿಳಿದ ಅಭಿನವ್ ಮನೋಹರ್‌ ಕೇವಲ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 27 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಕರುಣ್ ನಾಯರ್ ದೊಡ್ಡ ಹೊಡೆತಕ್ಕೆ ಯತ್ನಿಸಿ(5) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಕೊನೆಯ ಓವರ್‌ನಲ್ಲಿ ಸತತ 4 ವಿಕೆಟ್ ಪಡೆದ ದರ್ಶನ್‌ ನಾಲ್ಕಂಡೆ: ಹೌದು ಒಂದು ಹಂತದಲ್ಲಿ ಕರ್ನಾಟಕ ತಂಡವು ಅನಾಯಾಸವಾಗಿ 190 ರನ್‌ಗಳ ಗಡಿದಾಟಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕೊನೆಯ ಓವರ್‌ ಬೌಲಿಂಗ್‌ ಮಾಡಿದ ವೇಗಿ ದರ್ಶನ್‌ ನಾಲ್ಕಂಡೆ ಹ್ಯಾಟ್ರಿಕ್ ವಿಕೆಟ್ ಸಹಿತ ಸತತ 4 ವಿಕೆಟ್‌ ಕಬಳಿಸಿ ಕರ್ನಾಟಕ ತಂಡವನ್ನು 176 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅನಿರುದ್ದ್ ಜೋಶಿ, ಬಿ.ಆರ್ ಶರತ್‌‌, ಜೆ. ಸುಚಿತ್ ಹಾಗೂ ಅಭಿನವ್ ಮನೋಹರ್ ಅವರನ್ನು ಸತತವಾಗಿ ಪೆವಿಲಿಯನ್ನಿಗಟ್ಟುವಲ್ಲಿ ನಾಲ್ಕಂಡೆ ಯಶಸ್ವಿಯಾದರು.

Sexting Scandal: ಆಸೀಸ್‌ ಟೆಸ್ಟ್ ನಾಯಕತ್ವಕ್ಕೆ ಟಿಮ್ ಪೈನ್‌ ದಿಢೀರ್ ರಾಜೀನಾಮೆ..!

ವಿದರ್ಭ ಪರ ದರ್ಶನ್‌ ನಾಲ್ಕಂಡೆ 4 ವಿಕೆಟ್ ಪಡೆದರೆ, ಲಲಿತ್ ಯಾದವ್ 2 ಹಾಗೂ ಯಶ್ ಠಾಕೂರ್ ಒಂದು ವಿಕೆಟ್ ಪಡೆದರು. ಇನ್ನು ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಅಕ್ಷಯ್ ಕಾರ್ನೆವರ್‌ಗೆ ಯಾವುದೇ ವಿಕೆಟ್ ಲಭಿಸಲಿಲ್ಲ. 4 ಓವರ್‌ ಬೌಲಿಂಗ್ ಮಾಡಿದ ಕಾರ್ನೆವರ್ 39 ರನ್‌ ನೀಡಿ ದುಬಾರಿ ಎನಿಸಿದರು.

ಸಂಕ್ಷಿಪ್ತ ಸ್ಕೋರ್:

ಕರ್ನಾಟಕ ಕ್ರಿಕೆಟ್ ತಂಡ: 176/7

ರೋಹನ್ ಕದಂ: 87

ಮನೀಶ್ ಪಾಂಡೆ: 54

ದರ್ಶನ್‌ ನಾಲ್ಕಂಡೆ : 28/4

click me!