Syed Mushtaq Ali Trophy ಕರ್ನಾಟಕ ಪ್ರೀ ಕ್ವಾರ್ಟರ್‌ಗೆ ಲಗ್ಗೆ

By Suvarna NewsFirst Published Nov 10, 2021, 6:52 AM IST
Highlights

* ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ಲಗ್ಗೆ

* ಬೆಂಗಾಲ್ ವಿರುದ್ದ ಸೋಲುಂಡು ನೇರ ಕ್ವಾರ್ಟರ್ ಅವಕಾಶ ತಪ್ಪಿಸಿಕೊಂಡ ಕರ್ನಾಟಕ

* ಪ್ರೂ ಕ್ವಾರ್ಟರ್‌ನಲ್ಲಿ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು

ಗುವಾಹಟಿ(ನ.10): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯ (Syed Mushtaq Ali Trophy) ಗುಂಪು ಹಂತದ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ಬೆಂಗಾಲ್‌ ವಿರುದ್ಧ 7 ವಿಕೆಟ್‌ ಸೋಲನುಭವಿಸಿದೆ. ಇದರೊಂದಿಗೆ ಎಲೈಟ್‌ ‘ಬಿ’ ಗುಂಪಿನಲ್ಲಿ 2ನೇ ಸ್ಥಾನಕ್ಕೆ ಜಾರಿದ್ದು, ಪ್ರಿ ಕ್ವಾರ್ಟರ್‌ ಫೈನಲ್‌ಗೆ ಆಡಬೇಕಿದೆ. ಅಗ್ರ ಸ್ಥಾನಿ ಬೆಂಗಾಲ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

ಉಭಯ ತಂಡಗಳು ತಲಾ 4 ಗೆಲುವಿನೊಂದಿಗೆ ತಲಾ 16 ಅಂಕ ಪಡೆದವು. ಆದರೆ ನೆಟ್‌ ರನ್‌ರೇಟ್‌ ಆಧಾರದಲ್ಲಿ ಬೆಂಗಾಲ್‌ ಮೊದಲ ಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ಗೇರಿತು. ಕರ್ನಾಟಕ ತಂಡವು ನ.16ಕ್ಕೆ ಪ್ರಿ ಕ್ವಾರ್ಟರ್‌ನಲ್ಲಿ ಸೌರಾಷ್ಟ್ರ ವಿರುದ್ಧ ಸೆಣಸಲಿದ್ದು, ದೆಹಲಿಯಲ್ಲಿ ಪಂದ್ಯ ನಡೆಯಲಿದೆ.

Syed Mushtaq Ali Trophy: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಗೆಲುವು!

ಬೆಂಗಾಲ್‌ ವಿರುದ್ಧ ಮೊದಲ ಬ್ಯಾಟ್‌ ಮಾಡಿದ ಕರ್ನಾಟಕ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಬೆಂಗಾಲ್ ಪರ ಪಂದ್ಯದ ಮೊದಲ ಓವರ್‌ ಬೌಲಿಂಗ್ ಮಾಡಿದ ಮುಕೇಶ್ ಕುಮಾರ್, ಕರ್ನಾಟಕದ ಆರಂಭಿಕ ಜೋಡಿಯಾದ ಮಯಾಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಅಗರ್‌ವಾಲ್ 4 ರನ್‌ ಬಾರಿಸಿ, ಪಡಿಕ್ಕಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

ಮತ್ತೆ ಆಸರೆಯಾದ ಪಾಂಡೆ-ನಾಯರ್: ಕೇವಲ 11 ರನ್‌ಗಳಿಗೆ ಆರಂಭಿಕ ಬ್ಯಾಟರ್‌ಗಳಿಬ್ಬರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕ ತಂಡಕ್ಕೆ ನಾಯಕ ಮನೀಶ್ ಪಾಂಡೆ (Manish Pandey) ಹಾಗೂ ಮಾಜಿ ನಾಯಕ ಕರುಣ್ ನಾಯರ್ (Karun Nair) ಮೂರನೇ ವಿಕೆಟ್‌ಗೆ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮನೀಶ್ ಪಾಂಡೆ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್‌ ಬಾರಿಸಿದರೆ, ಕರುಣ್ ನಾಯರ್ 44 ಎಸೆತಗಳಲ್ಲಿ 44 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಕರ್ನಾಟಕ 8 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು. 

ಇನ್ನು ಸ್ಪರ್ಧಾತ್ಮಕ ಗುರಿ ಪಡೆದ ಬಂಗಾಳ ತಂಡವು ಕೇವಲ 18 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್ ಅಜೇಯ 51 ರನ್‌ ಬಾರಿಸಿದರೆ, ಕೈಫ್ ಅಹಮ್ಮದ್ ಅಜೇಯ 34 ರನ್ ಬಾರಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಸ್ಕೋರ್‌:
ಕರ್ನಾಟಕ 20 ಓವರಲ್ಲಿ 134/8

(ಕರುಣ್‌ 44, ಮನೀಶ್‌ 32, ಮುಖೇಶ್‌ 3-33) 

ಬೆಂಗಾಲ್‌ 18 ಓವರಲ್ಲಿ 138/3 

(ಅಭಿಮನ್ಯು 51*, ಕೈಫ್‌ 24*, ಕರಿಯಪ್ಪ 1-25, ಸುಚಿತ್‌ 1-34)

4 ಮೇಡನ್‌ ಓವರ್‌: ಅಕ್ಷಯ್‌ ವಿಶ್ವದಾಖಲೆ!

ವಿಜಯವಾಡ: ವಿದರ್ಭ ತಂಡದ ಅಕ್ಷಯ್‌ ಕಾರ್ನೆವಾರ್‌ ಪುರುಷರ ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಮೇಡನ್‌ ಓವರ್‌ ಎಸೆದ ವಿಶ್ವದ ಮೊದಲ ಬೌಲರ್‌ ಎಂಬ ದಾಖಲೆ ಬರೆದಿದ್ದಾರೆ. 

ಸೋಮವಾರ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಮಣಿಪುರ ವಿರುದ್ಧದ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಸಾಧಿಸಿದರು. ಜೊತೆಗೆ 2 ವಿಕೆಟ್‌ ಕೂಡಾ ಕಬಳಿಸಿದರು. ಈ ಮೊದಲು ಪಾಕಿಸ್ತಾನದ ಮೊಹಮದ್‌ ಇರ್ಫಾನ್‌ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ 4 ಓವರಲ್ಲಿ 3 ಮೇಡನ್‌ ಎಸೆದು ಕೇವಲ 1 ರನ್‌ ನೀಡಿದ್ದು ವಿಶ್ವ ದಾಖಲೆ ಎನಿಸಿಕೊಂಡಿತ್ತು.

click me!