ಮುಷ್ತಾಕ್ ಅಲಿ ಟ್ರೋಫಿ: ಉತ್ತರ ಪ್ರದೇಶವನ್ನು ಬಗ್ಗುಬಡಿದ ಕರ್ನಾಟಕ

By Suvarna NewsFirst Published Jan 18, 2021, 5:16 PM IST
Highlights

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಉತ್ತರ ಪ್ರದೇಶ ವಿರುದ್ದ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜ.18): ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿನ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡವು ಉತ್ತರ ಪ್ರದೇಶ ವಿರುದ್ದ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಉತ್ತರ ಪ್ರದೇಶ ನೀಡಿದ್ದ 133 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ತಂಡ ಶ್ರೇಯಸ್ ಗೋಪಾಲ್ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಕರ್ನಾಟಕ ತಂಡ ಗೆಲುವಿನ ನಗೆ ಬೀರಿತು. ಕರ್ನಾಟಕ ತಂಡದ ಆರಂಭದಲ್ಲೇ ರೋಹನ್ ಕದಂ(5) ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ದೇವದತ್ ಪಡಿಕ್ಕಲ್(34) ಹಾಗೂ ಕರುಣ್‌ ನಾಯರ್(21) ಉಪಯುಕ್ತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಕೊನೆಯಲ್ಲಿ ಶ್ರೇಯಸ್ ಗೋಪಾಲ್‌ ಕೇವಲ 28 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ರಾಜ್ಯ ತಂಡಕ್ಕೆ ಭರ್ಜರಿ ಗೆಲುವು ತಂದಿತ್ತರು. 

ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕಕ್ಕೆ ಇಂದು ಯುಪಿ ಸವಾಲು

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಉತ್ತರ ಪ್ರದೇಶ ಮಿಂಚಿನ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಗೋಸ್ವಾಮಿ-ಕರಣ್‌ ಶರ್ಮಾ ಜೋಡಿ ಕೇವಲ 8.2 ಓವರ್‌ಗಳಲ್ಲಿ 69 ರನ್‌ ಕಲೆಹಾಕಿತ್ತು. ಆರಂಭಿಕರಾದ ಗೋಸ್ವಾಮಿ 47 ರನ್‌ ಬಾರಿಸಿದರೆ, ಕರಣ್‌ ಶರ್ಮಾ 41 ರನ್‌ ಬಾರಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಜೆ.ಸುಚಿತ್ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ನಾಟಕೀಯ ಕುಸಿತ ಕಂಡ ಯುಪಿ: ಒಂದು ಹಂತದಲ್ಲಿ 93 ರನ್‌ಗಳವರೆಗೆ ಕೇವಲ ಒಂದು ವಿಕೆಟ್‌ ಕಳೆದುಕೊಂಡು ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದ್ದ ಯುಪಿ ತಂಡ ಆರಂಭಿಕರಿಬ್ಬರ ವಿಕೆಟ್‌ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಆರಂಭಿಕರಿಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲವಾಗಲಿಲ್ಲ. 

ಕರ್ನಾಟಕ ಪರ ಜೆ ಸುಚಿತ್‌ ಹಾಗೂ ಪ್ರವೀನ್ ದುಬೆ ತಲಾ 3 ವಿಕೆಟ್‌ ಪಡೆದರೆ, ಶ್ರೇಯಸ್‌ ಗೋಪಾಲ್ ಮತ್ತು ವಿ. ಕೌಶಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರು.
 

click me!