ಮೊದಲ ಟೆಸ್ಟ್: ಲಂಕಾ ಎದುರು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್‌

By Suvarna NewsFirst Published Jan 18, 2021, 2:19 PM IST
Highlights

ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಗಾಲೆ(ಜ.18): ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಇಂಗ್ಲೆಂಡ್ ತಂಡ ಆತಿಥೇಯ ಶ್ರೀಲಂಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವು 359 ರನ್‌ ಬಾರಿಸುವ ಮೂಲಕ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು ಕೇವಲ 74 ರನ್‌ಗಳ ಗುರಿ ನೀಡಿತ್ತು. ಆರಂಭದಲ್ಲೇ ನಾಟಕೀಯವಾಗಿ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 38 ರನ್‌ ಬಾರಿಸಿತ್ತು. ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು ಕೇವಲ 36 ರನ್‌ಗಳ ಅಗತ್ಯವಿತ್ತು. 5ನೇ ದಿನ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಜಾನಿ ಬೇರ್‌ಸ್ಟೋವ್‌(35*) ಹಾಗೂ ಡೇನಿಯಲ್ ಲಾರೆನ್ಸ್‌(21*) ಅಜೇಯ ಜತೆಯಾಟದ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿದರು. ಇದರೊಂದಿಗೆ 2 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ತಂಡವು 1-0 ಮುನ್ನಡೆ ಸಾಧಿಸಿದೆ.

ಸಿರಾಜ್‌ ಬಿರುಗಾಳಿ; ಬ್ರಿಸ್ಬೇನ್ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾಗೆ 328 ರನ್‌ ಗುರಿ

ಹೇಗಿತ್ತು ಟೆಸ್ಟ್‌ ಪಂದ್ಯ..? ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಡಾಮ್‌ ಬಿಸ್‌ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ಕೇವಲ 135 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಜೋ ರೂಟ್‌(228) ಬಾರಿಸಿದ ಆಕರ್ಷಕ ದ್ವಿಶತಕ ಹಾಗೂ ಡೇನಿಯಲ್ ಲಾರೆನ್ಸ್‌ ಬಾರಿಸಿದ ಸಮಯೋಚಿತ ಅರ್ಧಶತಕ(73)ದ ನೆರವಿನಿಂದ 421 ರನ್‌ ಬಾರಿಸಿ ಆಲೌಟ್‌ ಆಯಿತು. ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಲಂಕಾ, ಲಹಿರು ತಿರುಮನ್ನೆ ಬಾರಿಸಿದ ಭರ್ಜರಿ ಶತಕದ ನೆರವಿನಿಂದ 359 ರನ್‌ ಬಾರಿಸಿ ಆಲೌಟ್‌ ಆಗುವ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಸಾಧಾರಣ ಗುರಿ ನೀಡಿತ್ತು.

click me!