
ದೆಹಲಿ(ನ.22): ದಕ್ಷಿಣ ಭಾರತದ ಎರಡು ಬಲಿಷ್ಠ ಕ್ರಿಕೆಟ್ ತಂಡಗಳಾದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಫೈನಲ್‌ನಲ್ಲಿ (Syed Mushtaq Ali Trophy) ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ತಮಿಳುನಾಡು ತಂಡದ ನಾಯಕ ವಿಜಯ್ ಶಂಕರ್ (Vijay Shankar) ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ.
ಹಾಲಿ ಚಾಂಪಿಯನ್ ತಮಿಳುನಾಡು ತಂಡವು (Tamil Nadu Cricket Team) ಮತ್ತೊಮ್ಮೆ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಕರ್ನಾಟಕ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶರವಣ ಕುಮಾರ್ ಬದಲಿಗೆ ಟಿ ನಟರಾಜನ್ (T Natarajan) ತಂಡ ಕೂಡಿಕೊಂಡಿದ್ದಾರೆ. ಇನ್ನು ಕರ್ನಾಟಕ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಅನಿರುದ್ ಜೋಶಿ ಹಾಗೂ ವೈಶಾಕ್ ಬದಲಿಗೆ ಪ್ರವಿಣ್ ದುಬೆ ಹಾಗೂ ಪ್ರತೀಕ್ ಜೈನ್ ತಂಡ ಕೂಡಿಕೊಂಡಿದ್ದಾರೆ.
ಕರ್ನಾಟಕ ತಂಡವು ಮಯಾಂಕ್ ಅಗರ್‌ವಾಲ್ (Mayank Agarwal), ದೇವದತ್ ಪಡಿಕ್ಕಲ್, ಪ್ರಸಿದ್ದ್ ಕೃಷ್ಣ ಅವರಂತಹ ತಾರಾ ಆಟಗಾರರ ಅನುಪಸ್ಥಿತಿಯಲ್ಲೂ ಅಮೋಘ ಪ್ರದರ್ಶನ ತೋರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಕಳೆದ ಪಂದ್ಯದಲ್ಲಿ ರೋಹನ್ ಕದಂ (Rohan Kadam) ಆಕರ್ಷಕ್ ಅರ್ಧಶತಕ ಬಾರಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್ (Karun Nair), ಅಭಿನವ್ ಮನೋಹರ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಿದರೇ ತಂಡ ಬೃಹತ್ ಮೊತ್ತ ದಾಖಲಿಸಬಹುದು. ಇನ್ನು ಅನನುಭವಿ ಬೌಲರ್‌ಗಳಿಂದ ಕೂಡಿರುವ ಕರ್ನಾಟಕ ತಂಡ ಬಲಿಷ್ಠ ತಮಿಳುನಾಡು ಎದುರು ಅಬ್ಬರಿಸಲು ಎದುರು ನೋಡುತ್ತಿದ್ದಾರೆ. ವಿದ್ಯಾಧರ್ ಪಾಟೀಲ್, ದರ್ಶನ್, ಜತೆಗೆ ಅನುಭವಿ ಸ್ಪಿನ್ನರ್‌ಗಳಾದ ಜೆ.ಸುಚಿತ್ ಹಾಗೂ ಕರಿಯಪ್ಪ ಅವರನ್ನು ರಾಜ್ಯ ತಂಡ ಹೆಚ್ಚಾಗಿ ನೆಚ್ಚಿಕೊಂಡಿದೆ.
Syed Mushtaq Ali Trophy: ಇಂದು ಕರ್ನಾಟಕ-ತಮಿಳುನಾಡು ಫೈನಲ್ ಕದನ!
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡವು ನೆರೆಯ ಹೈದರಾಬಾದ್ ಎದುರು ಸುಲಭ ಗೆಲುವು ದಾಖಲಿಸುವ ಮೂಲಕ ಸತತ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ತಮಿಳುನಾಡು ವೇಗಿ ಶರವಣ ಕುಮಾರ್ ಮಾರಕ ದಾಳಿಗೆ ತತ್ತರಿಸಿ ಹೈದರಾಬಾದ್ ತಂಡವು ಕೇವಲ 90 ರನ್‌ಗಳಿಗೆ ಸರ್ವಪತನ ಕಂಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ತಮಿಳುನಾಡು ತಂಡವು ಇನ್ನು 46 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.
ಇನ್ನೊಂದೆಡೆ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡವು ವಿದರ್ಭ ಎದುರು ಕೊನೆಯ ಓವರ್‌ನಲ್ಲಿ 4 ರನ್‌ಗಳ ಅಂತರದ ರೋಚಕ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಬ್ಯಾಟಿಂಗ್‌ನಲ್ಲಿ ರೋಹನ್ ಕದಂ ಹಾಗೂ ಮನೀಶ್ ಪಾಂಡೆ ಆಕರ್ಷಕ ಅರ್ಧಶತಕ ಚಚ್ಚಿದರೆ, ಬೌಲಿಂಗ್‌ನಲ್ಲಿ ಕೆ.ಸಿ. ಕರಿಯಪ್ಪ ಮಿಂಚಿನ ದಾಳಿ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕರ್ನಾಟಕ ತಂಡವು 2018 ಹಾಗೂ 2019ರಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದರಲ್ಲೂ 2019ರಲ್ಲಿ ಇದೇ ತಮಿಳುನಾಡು ತಂಡದ ವಿರುದ್ದ 1 ರನ್‌ಗಳ ರೋಚಕ ಜಯ ಸಾಧಿಸಿ ಎರಡನೇ ಬಾರಿಗೆ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡವು ಮುತ್ತಿಕ್ಕಿತ್ತು. ಇನ್ನೊಂದೆಡೆ ತಮಿಳುನಾಡು ತಂಡವು 2021ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇದೀಗ ಸತತ ಎರಡನೇ ಬಾರಿಗೆ ಟ್ರೋಫಿ ಜಯಿಸುವ ಲೆಕ್ಕಾಚಾರದಲ್ಲಿದೆ.
ಮೂರನೇ ಬಾರಿಗೆ ಟಿ20 ಟ್ರೋಫಿ ಗೆಲ್ಲಲಿರುವ ಮೊದಲ ತಂಡ!
ಇಂದು ಯಾರೇ ಗೆದ್ದರೂ 3ನೇ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲಲಿರುವ ಮೊದಲ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಲಿದ್ದಾರೆ. ಇದುವರೆಗೂ ಕರ್ನಾಟಕ, ತಮಿಳುನಾಡು, ಬರೋಡಾ, ಗುಜರಾತ್ ತಲಾ 2 ಬಾರಿ ಟ್ರೋಫಿ ಜಯಿಸಿವೆ. ಇಂದು ಹೊಸ ಇತಿಹಾಸ ಬರೆಯಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.